Advertisement
ಮೊದಲ ದಿನ ಆತಿಥೇಯ ತಂಡದ “ಗಾಂಧಿಗೆ ಸಾವಿಲ್ಲ’ ಪ್ರದರ್ಶನಗೊಂಡಿತು. ಹಿಂದಿಯಲ್ಲಿ ಅಸ್ಕರ್ ವಜಾಹತ್ ರಚಿಸಿರುವ ರಂಗ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಹಸನ್ ನಯೀಂ ಸುರಕೋಡ. ವಸಂತ ಬನ್ನಾಡಿಯವರ ಮಾರ್ಗದರ್ಶನದಲ್ಲಿ ನವೀನ ವಿನ್ಯಾಸಗಳೊಂದಿಗೆ ನಿರ್ದೇಶನಗೈದವರು ಗಿರೀಶ್ ಬೈಂದೂರು.ನಾಟಕದ ಹೆಸರೇ ರೂಪಕವಾಗಿ ಗಾಂಧಿಗಿರಿ ಎನ್ನುವುದು ಅಚಲವಾದ ಹಿಮಗಿರಿಯಂತೆ ತನ್ನ ಸಿದ್ಧಾಂತವನ್ನು ವಿಷಮ ಸನ್ನಿವೇಶದಲ್ಲೂ ಕೈಬಿಡದೆ ಅಹಿಂಸೆ, ಸಂಯಮ, ಸಹಿಷ್ಣುತೆ ಮೆರೆಯುವುದು; ಗೋಡ್ಸೆಯ ಮನಃ ಪರಿವರ್ತನೆ ಮಾಡುವುದು ಕೇವಲ ಗಾಂಧಿಗೆ ಮಾತ್ರ ಸಾಧ್ಯ ಎಂದು ತೋರಿಸಿಕೊಡುತ್ತದೆ.ಗೋಡ್ಸೆಯೊಂದಿಗೆ ಸಂವಾದ ನಡೆಸುವ ಗಾಂಧಿ ನ್ಯಾಯಾಲಯದಲ್ಲಿ ಕೇವಲ ಸಾಕ್ಷಿಯ ಮೇಲೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ; ಆದರೆ ಸೆರೆಮನೆಯಲ್ಲಿ ಆತ್ಮ ಸಂವಾದಕ್ಕೆ ತಡೆ ಇಲ್ಲ ಎಂದು ತೋರಿಸಿಕೊಡುತ್ತಾರೆ. ಗೋಡ್ಸೆಗಿರಿಯು ಗಾಂಧಿವಾದದ ಮುಂದೆ ಶರಣಾಗುವುದನ್ನು ನಿರ್ದೇಶಕರು ವಾಚ್ಯಕ್ಕೂ ನಿಲುಕದ ರಂಗತಂತ್ರದ ಮೂಲಕ ನಾಟಕದ ಆಶಯವನ್ನು ಎತ್ತಿ ಹಿಡಿದಿದ್ದಾರೆ.ಸಾಂದರ್ಭಿಕವಾಗಿ ಬರುವ ಪ್ರೇಮಿಗಳಾದ ಸುಷ್ಮಾ ಮತ್ತು ನವೀನ ಜೋಶಿ ಗಾಂಧೀಜಿಯ ಇನ್ನೊಂದು ಮುಖದ ದರ್ಶನ ಮಾಡಿಸುತ್ತಾರೆ. ಬೆಳಕಿನ ಗುಣಮಟ್ಟ ಚೆನ್ನಾಗಿದ್ದರೂ ನಿಖರತೆಯ ಕಡೆಗೆ ಇನ್ನಷ್ಟು ಶ್ರಮವಹಿಸಬೇಕು. ಉತ್ತಮ ವೇಷಭೂಷಣ, ರಂಗಪರಿಕರಗಳು ಪ್ರಭಾವಿ ಎನಿಸಿವೆ. ಒಟ್ಟಿನಲ್ಲಿ ಸವಾಲಿನ ನಾಟಕವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ನಾಟಕದ ಒಟ್ಟು ಅವಧಿಯಲ್ಲಿ ಇನ್ನಷ್ಟು ಸಂಕ್ಷೇಪಿಸುವತ್ತ ಗಮನಹರಿಸಬಹುದು.
ಚಂದ್ರಗಿರಿ ತೀರದಲ್ಲಿ ಪ್ರದರ್ಶನಗೊಂಡ ಮೂರನೇ ನಾಟಕ. ರಚನೆ – ಸಾರಾ ಅಬೂಬಕರ್, ರಂಗ ರೂಪ ನೀಡಿದವರು ರೂಪ ಕೋಟೇಶ್ವರ, ನಿರ್ದೇಶನ ನಯನ ಜೆ. ಸೂಡ. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಬೇಗುದಿಯನ್ನು ಅಬ್ಬರಿಸದೆ ಶಾಂತವಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಸಾಗಿ ಧರ್ಮ ಸಂಕಟಕ್ಕೆ ಸಿಲುಕಿದ ಅಮಾಯಕ ನಾದಿರಾ ಆಹುತಿಯಾಗುವುದೇ ಇಲ್ಲಿನ ಕಥಾವಸ್ತು. ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡು ಕಲಾತ್ಮಕತೆಯನ್ನು ಉಳಿಸಿಕೊಂಡ ನಾಟಕ ಇದಾಗಿದೆ.ನಾದಿರಾಳ ವಿವಾಹ ಸಮಾರಂಭದ ನೃತ್ಯಗಳು ಮುಸ್ಲಿಮ್ ಸಮುದಾಯದ ಸಂಸ್ಕೃತಿಯನ್ನು ಸೊಗಸಾಗಿ ಸಾದರಪಡಿಸಿತು. ಜೀವನವನ್ನು ಸುಗಮವಾಗಿಸುವ, ಸಹ್ಯವಾಗಿಸುವ ಧರ್ಮವೇ ಬದುಕಿಗೆ ಮುಳುವಾದಾಗ ದಿಕ್ಕು ಕಾಣದೆ ಮರುಮದುವೆಯ ರಾತ್ರಿಯೇ, ಧರ್ಮ, ಶಾಸ್ತ್ರ, ತಲಾಖ್‌ಗಳನ್ನು ಕ್ರೂರವಾಗಿ ವಿಡಂಬಿಸುವಂತೆ ಚಂದ್ರಗಿರಿ ನದಿಗೆ ಹಾರಿ ಪ್ರಾಣಾರ್ಪಣೆ ಮಾಡುತ್ತಾಳೆ. ನಾಲ್ಕನೆಯ ದಿನ ಪ್ರದರ್ಶಿತಗೊಂಡ ಗುಲಾಬಿ ಗ್ಯಾಂಗ್ ಅನ್ಯಾಯದ ವಿರುದ್ಧ ಸಿಡಿದೇಳುವ ಧೋರಣೆಯನ್ನೇ ಬಂಡವಾಳವಾಗಿಸಿಕೊಂಡ ನಾಟಕ. ರಂಗ ರೂಪ ಪ್ರವೀಣ ಸೂಡಾ. ಉತ್ತರ ಪ್ರದೇಶದ ಬಂದೇಲ್‌ಖಂಡ ಜಿಲ್ಲೆ ಬಡೋಸಾ ಗ್ರಾಮದ ಸಂಪತ್ ಪಾಲ್ ದೇವಿ ಇಲ್ಲಿ ಕಮಲಾಬಾಯಿಯಾಗಿ ಕಾಣಿಸಿಕೊಂಡು ಸ್ತ್ರೀಯರ ಬದುಕಿನ ಹಕ್ಕನ್ನು ಹಂತಹಂತದಲ್ಲೂ ಭೌತಿಕ ಹಾಗೂ ಬೌದ್ಧಿಕ ಚಾತುರ್ಯದಿಂದ ಪಡೆದುಕೊಳ್ಳುವ ಯಶೋಗಾಥೆಯೇ ಇಲ್ಲಿನ ಕಥಾವಸ್ತು.
Related Articles
Advertisement
ಮಂಜುನಾಥ ಶಿರೂರು