ಹುಬ್ಬಳ್ಳಿ: ಮಹದಾಯಿ ನದಿ ನೀರಿನ ವಿಚಾರದಲ್ಲಿ ಬಿಜೆಪಿಯವರು ಎಂಟು ವರ್ಷಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಕುರಿತು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದು, ಇದರಿಂದ ಬೆದರಿರುವ ಬಿಜೆಪಿಯವರು ಒಂಟೆಯ ಬಾಯಲ್ಲಿ ಜೀರಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ, ಹಸಿರು ನ್ಯಾಯಾಧಿಕರಣದ ಅನುಮೋದನೆ ಇದೆಯೇ, ಟೆಂಡರ್ ಮತ್ತು ಕಾಮಗಾರಿ ಎಲ್ಲಿದೆ, ಬಿಜೆಪಿ ಸರ್ಕಾರ ಹೊರಟು ಹೋಗುವಾಗ ಇಲ್ಲಸಲ್ಲದ ಮಾತನಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಮಹದಾಯಿ ನೀರಿಗಾಗಿ 3 ಸಾವಿರ ಕೋಟಿ ರೂ. ಅನುದಾನ ಕೊಡಲಿದೆ. ಮೊದಲ ಅಧಿವೇಶನದಲ್ಲೇ 500 ಕೋಟಿ ರೂ. ನೀಡಲಿದ್ದು, ಇದು ಮಹದಾಯಿ ನೀರು ತರಲು ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ. ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿ ವಿಷಯದಲ್ಲಿ ಬಿಜೆಪಿಯವರು ಕಳೆದ 8 ವರ್ಷದಿಂದ ಮೋಸ ಮಾಡುತ್ತಲೇ ಬಂದಿದ್ದಾರೆ. ಕಾಮಗಾರಿಗೆ ತಡೆಯೊಡ್ಡುತ್ತಲೇ ಇದ್ದಾರೆ. ಮೂರು ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೂರನೇ ಹಂತದ 130 ಟಿಎಂಸಿ ಅಡಿ ನೀರಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ಮೀಸಲಿಡಲಾಗುವುದು. ಇದರಿಂದ 6 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ದೊರೆಯಲಿದೆ ಎಂದರು.
**
ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಕೃಷ್ಣಾ ಮತ್ತು ಮಹದಾಯಿ ನೀರಿನ ಬಗ್ಗೆ ಅವರು ಮಾತನಾಡುವುದಿಲ್ಲ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕೃಷ್ಣಾ ಮತ್ತು ಮಹದಾಯಿ ನೀರಿನ ಹಕ್ಕಿನಿಂದ ಕರ್ನಾಟಕದ ಜನರನ್ನು ದೂರ ಇರಿಸಿದ್ದಾರೆ. ರಾಜ್ಯದ ಜನರು ಅವರ ವಂಚನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಯಾತ್ರೆ ಮೂಲಕ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ ಎಂದರು.