ಕೋವಿಡ್ ಲಾಕ್‌ಡೌನ್‌ಗೂ ಮೊದಲೇ ತನ್ನ ಬಹುತೇಕ ಚಿತ್ರೀಕರಣ ಮುಗಿಸಿದ್ದ ನೈಜ ಘಟನೆ ಆಧಾರಿತ “ರಾಂಚಿ’ ಸಿನಿಮಾ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.
ಸದ್ಯ ನಿಧಾನವಾಗಿ “ರಾಂಚಿ’ ಸಿನಿಮಾದ ಪ್ರಚಾರ ಕಾರ್ಯಗಳಿಗಡೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ರಾಂಚಿ’ಯ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಪ್ರಭು ಮುಂಡ್ಕೂರ್ ನಾಯಕನಾಗಿ ಅಭಿನಯಿಸಿರುವ “ರಾಂಚಿ’ ಸಿನಿಮಾದಲ್ಲಿ ದಿವ್ಯಾ ಉರುಡುಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರುದ್ರಾನಂದ ಆರ್. ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣದಲ್ಲಿ ಮೂಡಿಬಂದಿರುವ “ರಾಂಚಿ’ ಸಿನಿಮಾಕ್ಕೆ ಶಶಿಕಾಂತ್ ಗಟ್ಟಿ ನಿರ್ದೇಶನವಿದೆ. “ರಾಂಚಿ’ ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಶಶಿಕಾಂತ್ ಗಟ್ಟಿ, “ನಾನು “ಐಪಿಸಿ ಸೆಕ್ಷನ್ 300′ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದೆ. ಆಗ ನನಗೆ ರಾಂಚಿಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ, ಇದು ಸರ್ಕಾರದ ಕಡೆಯಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದಾಗ, ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತದೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಆಗ ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು.
ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಇದೇ ವಿಷಯವನ್ನು ಇಟ್ಟುಕೊಂಡು “ರಾಂಚಿ’ ಸಿನಿಮಾ ಮಾಡಿದ್ದೇವೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು. “ಕೋವಿಡ್ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನರ ನಿರೀಕ್ಷೆ ಬೇರೆ ತರಹ ಇದೆ. ನಾನು ಸೈಂಟಿಸ್ಟ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆನಂತರ ಸಿನಿಮಾ ಇಂಡಸ್ಟ್ರಿಗೆ ಬಂದೆ. ನಾನು “ಡಬಲ್ ಇಂಜಿನ್’ ಸಿನಿಮಾದಲ್ಲಿ ನಟಿಸಬೇಕಾದರೆ ಶಶಿಕಾಂತ್ ಈ ಸಿನಿಮಾದ ಕಥೆ ಹೇಳಿದರು. ನನಗೂ ನೈಜಘಟನೆ ಆಧಾರಿತ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆ ಸಮಯದಲ್ಲಿ ಈ ಕಥೆ ಕೇಳಿ, ನಟಿಸಲು ಒಪ್ಪಿದೆ’ ಎಂಬುದು ನಾಯಕ ನಟ ಪ್ರಭು ಮುಂಡ್ಕೂರ್ ಮಾತು. ಇನ್ನು ನೈಜಘಟನೆ ಆಧಾರಿತ “ರಾಂಚಿ’ ಸಿನಿಮಾದ ಬಹುಭಾಗವನ್ನು ರಾಂಚಿಯಲ್ಲೇ ಚಿತ್ರೀಕರಣ ಮಾಡಲಾಗಿದೆ.
2020ರಲ್ಲೇ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಸಿನಿಮಾದ ಸೆನ್ಸಾರ್ ಕೂಡ ಆಗಿದೆ. ಆದರೆ ಕೋವಿಡ್ ಆತಂಕದಿಂದ ಸಿನಿಮಾದ ಬಿಡುಗಡೆ ವಿಳಂಬವಾಯಿತು. ತಡವಾದರೂ, ಒಂದೊಳ್ಳೆ ಕಂಟೆಂಟ್ ಇರುವಂಥ ಸಿನಿಮಾ ಮಾಡಿದ್ದೇವೆ ಎಂಬುದು ಚಿತ್ರತಂಡದ ವಿಶ್ವಾಸ ಮಾತು. ಅಂದಹಾಗೆ, ಸದ್ಯ ಟೀಸರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ “ರಾಂಚಿ’ ಸಿನಿಮಾವನ್ನು ಇದೇ ನವೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ