ಸಾಮಾನ್ಯವಾಗಿ ಪ್ರತಿ ಸಿನಿಮಾದ ಹುಟ್ಟಿಗೂ ಅದರ ಹಿಂದೊಂದು ಕಥೆ ಇದ್ದೇ ಇರುತ್ತವೆ. ಅಂಥದ್ದೇ ಒಂದು ಕಥೆ “ರಾಂಚಿ’ ಸಿನಿಮಾದ ಹಿಂದೆಯೂ ಇದೆ. ಆದರೆ ಈ ಕಥೆ ಕಾಲ್ಪನಿಕ ಕಥೆಯಲ್ಲ. ಬದಲಾಗಿ, ಅಪ್ಪಟ ನೈಜ ಘಟನೆ ಆಧಾರಿತವಾದದ್ದು.
ಹೌದು, “ರಾಂಚಿ’ ಎಂಬ ಕಥೆಯ ಹುಟ್ಟಿಗೆ ಸ್ಪೂರ್ತಿ ಮತ್ತು ಕಾರಣವಾಗಿದ್ದು, ಸಾವಿರ ಕಾಲು ಹುಳು ಮತ್ತದರ ಸುತ್ತ ನಡೆದ ಘಟನೆ ಎಂದರೆ ನೀವು ನಂಬಲೇಬೇಕು! ಇಂದು ಈ ಚಿತ್ರ ತೆರೆಕಾಣುತ್ತಿದೆ. ಚಿತ್ರಕ್ಕೆ ಶಶಿಕಾಂತ್ ಗಟ್ಟಿ ನಿರ್ದೇಶನವಿದೆ. ಇದರ ಜೊತೆಗೆ ರಾಂಚಿಯಲ್ಲಿ ಮತ್ತೂಂದು ಥ್ರಿಲ್ಲರ್ ಕಥೆಯನ್ನು ಹೇಳಲಾಗಿದೆ.
“ರಾಂಚಿ’ ಸಿನಿಮಾ ತೆರೆಮೇಲೆ ಬರಲು ಕಾರಣವಾಗಿದ್ದು, 2009ರಲ್ಲಿ ನಡೆದ ನೈಜ ಘಟನೆ. ಈ ಬಗ್ಗೆ ವಿವರಣೆ ಕೊಡುವ ನಿರ್ದೇಶಕ ಶಶಿಕಾಂತ್ ಗಟ್ಟಿ, “ಆಗ ರೈಲ್ವೇ ಇಲಾಖೆಯ ಹೆಸರಿನಲ್ಲಿ ರಾಂಚಿಯಿಂದ ಸಾಕ್ಷ್ಯ ಚಿತ್ರ (ಡಾಕ್ಯುಮೆಂಟರಿ) ಮಾಡಿಕೊಡಬೇಕಾಗಿ ಚಿತ್ರರಂಗದ ಹಲವರಿಗೆ ಪೋನ್ ಕರೆಗಳು ಬರುತ್ತಿದ್ದವು. ನಾನೂ ಕೂಡ ಇಂಥದ್ದೊಂದು ಕರೆಯಿಂದ ಅಲ್ಲಿನವರ ಸಂಪರ್ಕಕ್ಕೆ ಬಂದೆ. ಆಗ 4 ಕೋಟಿ ವೆಚ್ಚದಲ್ಲಿ ರಾಂಚಿ ರೈಲ್ವೆ ಇಲಾಖೆಗೆ ಸಾಕ್ಷ್ಯ ಚಿತ್ರವನ್ನು ಮಾಡಿಕೊಡ ಬೇಕು. ಇದು ದೊಡ್ಡ ಮೊತ್ತದ ಪ್ರಾಜೆಕ್ಟ್ ಆಗಿದ್ದರಿಂದ ಅಲ್ಲಿಯ ಅಧಿಕಾರಿಗಳಿಗೆ 40 ಲಕ್ಷ ಲಂಚ ಕೊಟ್ಟು ಸ್ವಲ್ಪ ಕೈ ಬಿಸಿ ಮಾಡಬೇಕು ಎಂದು ಅಲ್ಲಿಂದ ಪ್ರತಿಕ್ರಿಯೆ ಬಂತು. ಅದೆಷ್ಟೋ ನಿರ್ದೇಶಕರು ದೊಡ್ಡ ಮೊತ್ತದ ಆಸೆಯಿಂದ, ಈ ಪ್ರಾಜೆಕ್ಟ್ಗೆ ಕೈ ಹಾಕುತಿದ್ದರು. ಆನಂತರ ಈ ಬಗ್ಗೆ ಯೋಚಿಸಿ ದಾಗ ನನಗೆ ಹೊಳೆದಿದ್ದು, ಒಂದು ವೇಳೆ ಇದು ಸರ್ಕಾರದ ಅಧಿಕೃತ ಪ್ರಾಜೆಕ್ಟ್ ಆಗಿದ್ದರೆ, ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕಾಗಿತ್ತು. ಟೆಂಡರ್ ಕರೆಯಬೇಕಿತ್ತು. ಆದರೆ, ಇಲ್ಲಿ ಹಾಗಾಗುತ್ತಿರಲಿಲ್ಲ. ಪೋನ್ ಮೂಲಕವೇ ಎಲ್ಲ ಡೀಲ್‌ಗಳೂ ನಡೆಯುತ್ತಿದ್ದವು. ಇದರ ಹಿಂದಿನ ಸತ್ಯ ತಿಳಿಯಲು ನಾನು ರಾಂಚಿಯ ಎಸ್‌ಎಸ್‌ಪಿ ಅವರಿಗೆ ಕರೆ ಮಾಡಿದೆ. ಆಗ ನನ್ನ ಸಂಶಯ ನಿಜವಾಯಿತು. ಇದರ ಹಿಂದಿನ ನಿಗೂಢ ಸತ್ಯ ತೆರೆದುಕೊಂಡಿತು’ ಎನ್ನುತ್ತಾರೆ.
ಪೋನ್ ಮೂಲಕ ಜನರನ್ನು ತಮ್ಮತ್ತ ಸೆಳೆದು ಅವರನ್ನು ದೋಚುವ ದರೋಡೆಕೋರರ ಒಂದು ಗುಂಪು ರಾಂಚಿಯಲ್ಲಿ ಸುಮಾರು 8 ವರ್ಷಗಳಿಂದ ಸಕ್ರಿಯವಾಗಿದ್ದು, ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿತ್ತು. ಡಾಕ್ಯಮೆಂಟರಿ ಪ್ರಾಜೆಕ್ಟ್ ಹೆಸರಿನಲ್ಲಿ ಅಮಾಯಕರನ್ನು ರಾಂಚಿಗೆ ಕರೆಸಿಕೊಳ್ಳುವ ಈ ಗ್ಯಾಂಗ್ ಬಳಿಕ ಲಕ್ಷ-ಲಕ್ಷ ಹಣವನ್ನು ಲಪಟಾಯಿಸಿ, ಅವರಿಗೆ ಪಂಗನಾಮ ಹಾಕುತ್ತದೆ. ಕೆಲವೊಮ್ಮೆ ಹೀಗೆ ಬಂದವರಿಗೆ ಚಿತ್ರಹಿಂಸೆ ನೀಡಿ, ಸಾಯಿಸಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುತ್ತಿತ್ತು. ಈ ಪಾತಕಿಗಳ ಕರಾಳ ಮುಖಗಳನ್ನು ಒಂದೊಂದಾಗಿ “ರಾಂಚಿ’ ಎಸ್‌ಎಸ್‌ಪಿ, ನಿರ್ದೇಶಕ ಶಶಿಕಾಂತ್ ಗಟ್ಟಿ ಅವರೊಂದಿಗೆ ಹಂಚಿಕೊಂಡರು.
ಆಗ ಶಶಿಕಾಂತ್ ಅವರಿಗೆ ನೆನಪಾಗಿದ್ದೇ ಸಾವಿರ ಕಾಲು ಹುಳು ಕಳಿಸಿದ ಪಾಠ. ಬಳಿಕ ಶುರುವಾಗಿದ್ದೇ “ರಾಂಚಿ’ ಸಿನಿಮಾ. ಚಿತ್ರದಲ್ಲಿ ಪ್ರಭು ಮುಂಡ್ಕೂರು ನಾಯಕ. ಜೊತೆಗೆ ದಿವ್ಯಾ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ