ಚಿತ್ರರಂಗದಲ್ಲಿ ಇತ್ತೀಚೆಗೆ ಕೊಂಚ ಹೆಚ್ಚಾಗಿಯೇ ಎಲ್ಲರ ಗಮನ ಸೈನಿಕರತ್ತ ನೆಟ್ಟಿರುವಂತಿದೆ. ಜನಸಾಮಾನ್ಯರಲ್ಲಿ, ಮಾಧ್ಯಮಗಳಲ್ಲಿ ಸೈನಿಕರ ಬಗ್ಗೆ ಹತ್ತಾರು ಚರ್ಚೆಗಳಾಗುತ್ತಿವೆ. ಇನ್ನು ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಪುಲ್ವಾಮ ಉಗ್ರರ ದಾಳಿ ಅದಕ್ಕೆ ಪ್ರತಿಕಾರವಾಗಿ ಸೈನಿಕರು ನಡೆಸಿದ ಏರ್‌ಸ್ಟ್ರೈಕ್, ಉಗ್ರರ ವಿರುದ್ದ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳು ಹೀಗೆ ಹಲವು ಸಂಗತಿಗಳು ಚಿತ್ರರಂಗದ ಗಮನವನ್ನು ಸೆಳೆಯುತ್ತಿದೆ. ಅದರಲ್ಲೂ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಸೈನಿಕರ ಶೌರ್ಯ, ಪರಾಕ್ರಮ ಪ್ರದರ್ಶಿಸುವಂತಹ ಹತ್ತಾರು ಚಿತ್ರಗಳು ಭಾರತದ ವಿವಿಧ ಭಾಷೆಗಳಲ್ಲಿ ನಿರ್ಮಾಣವಾಗುತ್ತಿವೆ. ಕೆಲ ತಿಂಗಳ ಹಿಂದೆ ಹಿಂದಿಯಲ್ಲಿ ಕೂಡ ಸರ್ಜಿಕಲ್ ಸ್ಟ್ರೈಕ್ ಆಧಾರಿತ “ಉರಿ’ ಚಿತ್ರ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದು, ನಿಮಗೆ ನೆನಪಿರಬಹುದು. ಈಗ ಕನ್ನಡದಲ್ಲೂ ಸೈನಿಕರ ಶೌರ್ಯ, ಸಾಹಸಗಳನ್ನು ತೆರೆಮೇಲೆ ಬಿಂಬಿಸುವಂತಹ ಚಿತ್ರವೊಂದು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ರಣಾಂಗಣ’.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ರಣಾಂಗಣ’ ಚಿತ್ರ ಇತ್ತೀಚೆಗೆ ಅದ್ಧೂರಿಯಾಗಿ ಸೆಟ್ಟೇರಿದೆ. ನಿವೃತ್ತ ಐಪಿಎಸ್ ಅಧಿಕಾರಿ ಸಾಂಗ್ಲಿಯಾನ ಕ್ಯಾಮರಾ ಸ್ವಿಚ್ ಆನ್ ಮಾಡಿದರೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನಿರ್ದೇಶಕ ಅನೂಪ್ ಭಂಡಾರಿ “ರಣಾಂಗಣ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಪ್ರೋ. ದೊಡ್ಡರಂಗೇಗೌಡ, ನೆ. ಲ ನರೇಂದ್ರ ಬಾಬು, ಸುಮನ್ ನಗರ್‌ಕರ್, ಹಿರಿಯ ನಟಿ ಜಯಲಕ್ಷ್ಮೀ ಸೇರಿದಂತೆ ಚಿತ್ರರಂಗ ಮತ್ತಿತರ ಕ್ಷೇತ್ರಗಳ ವಿವಿಧ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.
“ರಣಾಂಗಣ’ ಚಿತ್ರದಲ್ಲಿ “ರಾಧಾ ರಮಣ’ ಧಾರಾವಾಹಿಯ ಖ್ಯಾತಿಯ ಸ್ಕಂದ ಅಶೋಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಪಾತ್ರಕ್ಕೆ ಸಾನ್ವಿ ಶ್ರೀವಾತ್ಸವ್ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಅವಿನಾಶ್, ಮಾಳವಿಕಾ, ಮಜಾ ಟಾಕೀಸ್ ಪವನ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿ¨ªಾರೆ. ಚಿತ್ರಕ್ಕೆ ಕಾರ್ತಿಕ್ ಮಳ್ಳೂರ್ ಛಾಯಾಗ್ರಹಣವಿದ್ದು, ಹೇಮಂತ್ ಸುವರ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನವ ಪ್ರತಿಭೆ ರೋಹಿತ್ ರಾವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಚಿತ್ರದ ವಿಶೇಷತೆಗಳ ಬಗ್ಗೆ ಮಾತಿಗಿಳಿದ ಚಿತ್ರತಂಡ, “ಚಿತ್ರದಲ್ಲಿ ನಾಯಕ ಸ್ಕಂದ ಅಶೋಕ್ ಯೋಧನ ಪಾತ್ರ ಹಾಗೂ ಸಾನ್ವಿ ಶ್ರೀವಾತ್ಸವ್ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ಐದು ವರ್ಷಗಳಿಂದ ಈ ಕಥೆಯ ಮೇಲೆ ಕೆಲಸ ಮಾಡಿ ಅಂತಿಮವಾಗಿ ಅದನ್ನು ದೃಶ್ಯ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. ಕಣ್ಣಾರೆ ಕಂಡು, ಸೈನಿಕರಿಂದ ಸ್ಫೂರ್ತಿ ಪಡೆದ ಕಥೆ ಈ ಚಿತ್ರದಲ್ಲಿದ್ದು, ಹಿಮಾಚಲ ಪ್ರದೇಶ, ಮಂಗಳೂರು, ರಾಮೋಜಿ ಫಿಲಂಸಿಟಿ ಮತ್ತು ಸರ್ಬಿಯಾದಲ್ಲಿ ಚಿತ್ರದ ಚಿತ್ರೀಕರಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ಮತ್ತು ಎರಡು ಚಾಪ್ಟರ್‌ಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ’ ಎಂದು ಹೇಳಿದೆ.
ಸದ್ಯ ಪ್ರೀ-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ “ರಣಾಂಗಣ’ ಚಿತ್ರದ ಚಿತ್ರೀಕರಣ ಇದೇ ಏಪ್ರಿಲ್ ಮೊದಲ ವಾರದಿಂದ ಶುರುವಾಗಲಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ಜನವರಿ 15ರ “ಸೈನಿಕ ದಿನ’ದಂದು ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ಕನ್ನಡದಲ್ಲಿ ಬಹು ಸಮಯದ ನಂತರ ಸೈನಿಕರ ಸಾಹಸಗಾಥೆಯನ್ನು ಸಾರುವ ಮತ್ತೂಂದು ಚಿತ್ರ ತೆರೆಮೇಲೆ ಬರುತ್ತಿದ್ದು, “ರಣಾಂಗಣ’ದಲ್ಲಿ ಕದನ ಕಲಿಗಳ ಕಾದಾಟ ಹೇಗಿರಲಿದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.