“ರಣಂ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರುತ್ತೀರಿ. ನಾನಾ ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇದ್ದ ಈ ಸಿನಿಮಾದ ಬಿಡುಗಡೆ ಯಾವಾಗ ಎಂಬುದು ಮಾತ್ರ ಗೊತ್ತಿರಲಿಲ್ಲ. ಆದರೆ, ಈಗ ಚಿತ್ರತಂಡ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ. ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಕನಕಪುರ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ತೆಲುಗು ನಿರ್ದೇಶಕ ವಿ.ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಚೇತನ್ ಕುಮಾರ್, ವರಲಕ್ಷ್ಮೀ ಶರತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಚಿತ್ರದ ಬಗ್ಗೆ ಹೇಳುವುದಾದರೆ ಚಿತ್ರ ಇಂದಿನ ಯುವಕರು ಮತ್ತು ರೈತರ ಕುರಿತಾದ ಚಿತ್ರ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರೈತ ಕುಟುಂಬದಿಂದ ಬಂದ ನಾಲ್ವರು ಸಾಮಾನ್ಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಏನೇನು ತೊಂದರೆಗಳನ್ನು ಅನುಭವಿಸುತ್ತಾರೆ. ರೈತ ಕುಟುಂಬಗಳ ನೋವುಗಳೇನು, ಅದಕ್ಕೆ ಪರಿಹಾರಗಳೇನು ಎನ್ನುವುದೇ ಚಿತ್ರದ ಕಥಾಹಂದರ. ಹಾಗಾಗಿ ಇದು ಇಂದಿನ ಯುವಕರಿಂದ ಹಿಡಿದು ಪೋಷಕರವರೆಗೆ ಎಲ್ಲರಿಗೂ ಕನೆಕ್ಟ್ ಆಗುವ ಚಿತ್ರ ಎನ್ನುತ್ತದೆ ಚಿತ್ರತಂಡ. “ರಣಂ’ ಚಿತ್ರದಲ್ಲಿ ಪ್ರಸ್ತುತ ಭಾರತದಲ್ಲಿ ರೈತರು ಮತ್ತು ಯುವಕರು ಅನುಭವಿಸುವ ಸಮಸ್ಯೆಗಳ ಚಿತ್ರಣವಿದೆ. ಹಾಗಾಗಿ ಇದು ಭಾರತದ ಎಲ್ಲಾ ಭಾಗಗಳಿಗೆ ಮತ್ತು ಭಾಷೆಗಳಿಗೂ ಕನೆಕ್ಟ್ ಅಗುವ ಚಿತ್ರ ಎನ್ನುವುದು ಚಿತ್ರತಂಡದ ಮಾತು. ಈ ಸಿನಿಮಾದ ಮೂಲಕ ದಶಕಗಳಿಂದ ರೈತರು, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಒಂದು ಪರಿಹಾರ ಕಾಣಬಹುದು ಎಂಬ ಭರವಸೆಯ ಮಾತುಗಳನ್ನಾಡುತ್ತದೆ ಚಿತ್ರತಂಡ.
“ರಣಂ’ಚಿತ್ರ ಅನುಭವಿ ಮತ್ತು ನುರಿತ ತಂತ್ರಜ್ಞರ ಕೈಚಳಕದಿಂದ ಮೂಡಿಬರುತ್ತಿದೆ. ತೆಲುಗಿನಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ವಿ. ಸಮುದ್ರ “ರಣಂ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ರಾಜನ್ ಸ್ಪೆಷಲ್ ಎಫೆಕ್ಟ್$Õ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ರವಿಶಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಆಫೀಸರ್ ಆಗಿ ನಟಿಸಿದರೆ, ವರಲಕ್ಷ್ಮೀ ಶರತ್ ಕುಮಾರ್ ಸಿಬಿಐ ಅಧಿಕಾರಿಯಾಗಿ ನಟಿಸಿದ್ದಾರೆ. ನಟ ಚೇತನ್ ಅವರಿಗೆ ಇಲ್ಲಿ ರೈತರ ಪರ ಹೋರಾಡುವ ಪಾತ್ರವೇ ಸಿಕ್ಕಿದೆಯಂತೆ. ಇತ್ತೀಚೆಗೆ ಅತಿಥಿಗಳೊಂದಿಗೆ ಸೇರಿ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿತು.
ರವಿಪ್ರಕಾಶ್ ರೈ