Advertisement

ರಣಜಿ: ಬಂಗಾಲ ಕಾಡಿದ ಅರ್ಪಿತ್‌, ಪೂಜಾರ

09:54 AM Mar 12, 2020 | Team Udayavani |

ರಾಜ್‌ಕೋಟ್‌: ಅರ್ಪಿತ್‌ ವಸವದ (106 ರನ್‌) ಹಾಗೂ ಚೇತೇಶ್ವರ ಪೂಜಾರ (66 ರನ್‌) ಅವರ ಮಾಸ್ಟರ್‌ ಕ್ಲಾಸ್‌ ಬ್ಯಾಟಿಂಗ್‌ ವೈಭವದಿಂದ ರಣಜಿ ಫೈನಲ್‌ನಲ್ಲಿ ಬಂಗಾಲ ವಿರುದ್ಧ ಆತಿಥೇಯ ಸೌರಾಷ್ಟ್ರ ಬೃಹತ್‌ ಮೊತ್ತದ ಕಡೆ ದಿಟ್ಟ ಹೆಜ್ಜೆ ಇಟ್ಟಿದೆ.

Advertisement

ಎರಡನೇ ದಿನದ ಅಂತ್ಯಕ್ಕೆ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟಿಗೆ 384 ರನ್‌ ಗಳಿಸಿದೆ. ತಂಡದ ಚಿರಾಗ್‌ ಜಾನಿ (ಅಜೇಯ 13) ಹಾಗೂ ಧರ್ಮೇಂದ್ರ ಸಿನ್ಹ ಜಡೇಜ (ಅಜೇಯ 13) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ವಿಶ್ವಾಸದಲ್ಲಿದೆ.

ಇದರಿಂದಾಗಿ ಬಂಗಾಲ ತೀವ್ರ ಒತ್ತಡಕ್ಕೆ ಸಿಲುಕಿಕೊಂಡಿದೆ.

ಐದು ವಿಕೆಟಿಗೆ 206 ರನ್ನಿನಿಂದ ಸೌರಾಷ್ಟ್ರ ಬ್ಯಾಟಿಂಗ್‌ ಮುಂದುವರಿಸಿತು. ಬೇಗನೇ ಆಲೌಟಾಗಬಹುದೆಂದು ಭಾವಿಸಲಾಗಿತ್ತು. ಆದರೆ ಸೌರಾಷ್ಟ್ರ ಇದನ್ನೆಲ್ಲ ಮೀರಿ ಮುಂದು ವರಿದದ್ದು ವಿಶೇಷವಾಗಿತ್ತು. ಮೊದಲ ದಿನ 29 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಅರ್ಪಿತ್‌ ವಸವದ ಶತಕ ಬಾರಿಸಿ ಮೆರೆದರು. ಜ್ವರದಿಂದಾಗಿ ಮೊದಲ ದಿನ ಕ್ರೀಸ್‌ನಿಂದ ಹೊರ ನಡೆದಿದ್ದ ಚೇತೇಶ್ವರ ಪೂಜಾರ ಮಂಗಳವಾರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಿ ಅರ್ಧ ಶತಕ ಹೊಡೆದರು. ಇಬ್ಬರು ಸೇರಿಕೊಂಡು 6ನೇ ವಿಕೆಟಿಗೆ 380 ಎಸೆತ ಎದುರಿಸಿ 142 ರನ್‌ ಜತೆಯಾಟ ನಿರ್ವಹಿಸಿದರು. ಇಬ್ಬರೂ ತಾಳ್ಮೆಯ ಬ್ಯಾಟಿಂಗ್‌ ನಡೆಸಿದ್ದರಿಂದ ಸೌರಾಷ್ಟ್ರ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.

ಅರ್ಪಿತ್‌-ಪೂಜಾರ ಭರ್ಜರಿ ಆಟ: ಅರ್ಪಿತ್‌ ಮತ್ತು ಪೂಜಾರ ಅವರ ಟೆಸ್ಟ್‌ ಶೈಲಿಯ ಬ್ಯಾಟಿಂಗ್‌ ಗಮನ ಸೆಳೆಯಿತು. ಆತುರದ ಹೊಡೆತಕ್ಕೆ ಹೋಗದೇ ತಪ್ಪು ಎಸೆತಗಳನ್ನು ಮಾತ್ರ ದಂಡಿಸುತ್ತ ರನ್‌ ಪೇರಿಸುತ್ತ ಹೋದರು. ಈ ಜೋಡಿಯನ್ನು ಮುರಿಯಲು ಬಂಗಾಲ ಹಲವು ಬಾರಿ ಬೌಲಿಂಗ್‌ ಬದಲಾವಣೆ ಮಾಡಿತು. ಅವರಿಬ್ಬರು 380 ಎಸೆತ ಎದುರಿಸಿದ ಬಳಿಕ ಬೇರ್ಪಟ್ಟರು. ಈ ಮೂಲಕ ಸೌರಾಷ್ಟ್ರವನ್ನು ಸುಸ್ಥಿತಿಗೆ ತಲುಪಿಸಲು ಯಶಸ್ವಿಯಾದರು.

Advertisement

ಅರ್ಪಿತ್‌ ವಸವದ ಒಟ್ಟು 287 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ ಶತಕ ಬಾರಿಸಿ ಮೆರೆದರು. ಗುಜರಾತ್‌ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಪಿತ್‌ ವಸವದ 139 ರನ್‌ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದನ್ನು ಸ್ಮರಿಸಬಹುದು.

ಜ್ವರದಿಂದ ಚೇತರಿಸಿದ ಚೇತೇಶ್ವರ್‌
ಮತ್ತೂಂದು ಕಡೆ ಜ್ವರ ಸಂಪೂರ್ಣ ಕಡಿಮೆಯಾಗದಿದ್ದರೂ ಕ್ರೀಸ್‌ಗೆ ಇಳಿದ ಪೂಜಾರ ಮೈಚಳಿ ಬಿಟ್ಟು ಆಡಿದರು. 237 ಎಸೆತ ಎದುರಿಸಿದ ಪೂಜಾರ ಒಟ್ಟು 5 ಬೌಂಡರಿ ನೆರವಿನಿಂದ ತಂಡಕ್ಕೆ ನೆರವಾದರು. ತಂಡದ ಮೊತ್ತ 348 ರನ್‌ ಆಗುತ್ತಿದ್ದಂತೆ ಶತಕ ಗಳಿಸಿದ್ದ ಅರ್ಪಿತ್‌, ಬೌಲರ್‌ ಶಹಬಾಜ್‌ ಅಹ್ಮದ್‌ ಎಸೆತದಲ್ಲಿ ಸಹಾಗೆ ಸ್ಟಂಪ್‌ ಔಟಾದರು. ಆಗ ತಂಡ 6 ವಿಕೆಟಿಗೆ 348 ರನ್‌ಗಳಿಸಿತ್ತು. ಇದಕ್ಕೆ 10 ರನ್‌ ಸೇರಿಸುವಷ್ಟರಲ್ಲಿ ಮುಕೇಶ್‌ ಕುಮಾರ್‌ ಎಸೆತದಲ್ಲಿ ಪೂಜಾರ ಎಲ್‌ಬಿ ಬಲೆಗೆ ಬಿದ್ದು ಹೊರನಡೆದರು. ದಿನದ ಅಂತ್ಯದ ಅವಧಿಯಲ್ಲಿ ಸೌರಾಷ್ಟ್ರದ 3 ವಿಕೆಟ್‌ ಕೇವಲ 16 ರನ್‌ಗೆ ಉರುಳಿದ್ದರೂ ತಂಡಕ್ಕೆ ಹೆಚ್ಚಿನ ಅಪಾಯವಾಗಲಿಲ್ಲ.

ಅಂಪಾಯರ್‌ಗೆ ಗಾಯ
ಸೌರಾಷ್ಟ್ರ -ಬಂಗಾಲ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಅವಘಡವೊಂದು ಸಂಭವಿಸಿದೆ. ಹೊಟ್ಟೆಯ ಕೆಳಭಾಗಕ್ಕೆ ಚೆಂಡು ಬಡಿದ ಕಾರಣ ಫೀಲ್ಡ್‌ ಅಂಪಾಯರ್‌ ಸಿ. ಸಂಶುದ್ದಿನ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮೊದಲ ದಿನ ಸಂಭವಿಸಿದೆ. ರಾತ್ರಿ ನೋವು ತೀವ್ರಗೊಂಡ ಕಾರಣ ಮಂಗಳವಾರ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ದ್ವಿತೀಯ ದಿನ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿಲ್ಲ,
ದ್ವಿತೀಯ ದಿನದ ಮೊದಲ ಅವಧಿಯಲ್ಲಿ ಸಂಶುದ್ದಿನ್‌ ಅವರ ಜತೆಗಾರ ಅನಂತ ಪದ್ಮನಾಧನ್‌ ಒಬ್ಬರೇ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿದರು. ಪಿಯೂಷ್‌ ಖಾಕರ್‌ ಸ್ಕ್ವೇರ್‌ ಲೆಗ್‌ನಲ್ಲಿ ನಿಂತು ನೆರವಿತ್ತರು. ಊಟದ ವಿರಾಮದ ಬಳಿಕ ಪದ್ಮನಾಭನ್‌ ಜತೆ ಎಸ್‌. ರವಿ ಕೂಡ ಮೈದಾನದಲ್ಲಿ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿದರೆ ಸಂಶುದ್ದಿನ್‌ ಟಿವಿ ಅಂಪಾಯರ್‌ ಪಾತ್ರ ನಿರ್ವಹಿಸಿದರು.

ಸಂಶುದ್ದಿನ್‌ ಬದಲಿಗೆ ಆಯ್ಕೆಯಾದ ಯಶವಂತ್‌ ಬಾರ್ಡೆ ಮೂರನೇ ದಿನ ಪದ್ಮನಾಭನ್‌ ಜತೆಗೂಡಿ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next