ರಾಜ್‌ಕೋಟ್: ಸೌರಾಷ್ಟ್ರ ವಿರುದ್ಧ ಫಾಲೋಆನ್ ಬಲೆಗೆ ಸಿಲುಕಿ ರಣಜಿ ಲೀಗ್ ಎಲೈಟ್ ಬಿ’ ಗುಂಪಿನ ಪಂದ್ಯದಲ್ಲಿ ಸೋಲಿನ ಆತಂಕಕ್ಕೆ ಸಿಲುಕಿದ್ದ ಪ್ರವಾಸಿ ಕರ್ನಾಟಕ ತಂಡ ಅಂತಿಮ ದಿನ ನೆಲಕಚ್ಚಿ ಬ್ಯಾಟಿಂಗ್ ನಡೆಸಿ ಸೋಲು ತಪ್ಪಿಸಿಕೊಂಡಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
ಮಂಗಳವಾರ ಅಂತಿಮ ದಿನದ ಆಟದಲ್ಲಿ ಗೆಲ್ಲಲು ಬೃಹತ್ ಸವಾಲು ಪಡೆದಿದ್ದ ಕರ್ನಾಟಕ ಡ್ರಾ ಸಾಧಿಸುವ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ವಿಕೆಟ್ ನಷ್ಟವಿಲ್ಲದೇ 30 ರನ್ನಿನಿಂದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಆರ್. ಸಮರ್ಥ್ (74 ರನ್, 10 ಬೌಂಡರಿ) ತಾಳ್ಮೆಯ ಅರ್ಧಶತಕ ಬಾರಿಸಿ ಆಸರೆಯಾದರು. ಇವರು ಮೊದಲ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಬಾರಿಸಿ ತಂಡದ ಮಾನ ಕಾಪಾಡಿದ್ದರು.
ಎರಡನೇ ವಿಕೆಟಿಗೆ ಬಂದ ದೇವದತ್ತ ಪಡಿಕ್ಕಲ್ (ಅಜೇಯ 53, 9 ಬೌಂಡರಿ) ಮತ್ತು ಮತ್ತೋರ್ವ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಮ್ (42 ರನ್, 5 ಬೌಂಡರಿ) ನೆಲಕಚ್ಚಿ ಬ್ಯಾಟಿಂಗ್ ನಡೆಸಿದರು. ದಿನವಿಡೀ ಸೌರಾಷ್ಟ್ರ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕೆ.ವಿ.ಸಿದ್ಧಾರ್ಥ್ (19 ರನ್), ಪವನ್ ದೇಶಪಾಂಡೆ (12 ರನ್) ಮತ್ತು ಶ್ರೇಯಸ್ ಗೋಪಾಲ್ (ಅಜೇಯ 13 ರನ್) ದಿನದ ಆಟದ ಮುಕ್ತಾಯದ ತನಕ ಯಾವುದೇ ಅಪಾಯವಾಗುವಂತೆ ನೋಡಿಕೊಂಡರು. ಅಂತಿಮವಾಗಿ ಕರ್ನಾಟಕ 4 ವಿಕೆಟಿಗೆ 220 ರನ್ ಗಳಿಸಿದಾಗ ಡ್ರಾ ಮಾಡಿಕೊಳ್ಳಲು ಉಭಯ ನಾಯಕರು ನಿರ್ಧರಿಸಿದರು.
ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡ ಸೌರಾಷ್ಟ್ರ ತಂಡ 3 ಅಂಕ ಪಡೆದುಕೊಂಡರೆ ಕರ್ನಾಟಕ 1 ಅಂಕಕ್ಕೆ ಸಮಾಧಾನಪಟ್ಟುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡವು ಚೇತೇಶ್ವರ ಪೂಜಾರ ದ್ವಿಶತಕ ಹಾಗೂ ಶೆಲ್ಡನ್ ಜಾಕ್ಸನ್ ಶತಕದಿಂದ 7 ವಿಕೆಟ್‌ಗೆ 581 ರನ್‌ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯರ ಬಿಗು ದಾಳಿಗೆ ಸಿಲುಕಿ ಕೇವಲ 171 ರನ್‌ಗೆ ಆಲೌಟಾಗಿ ಫಾಲೋಆನ್‌ಗೆ ಒಳಗಾಗಿತ್ತು.
ಮತ್ತೆ ಆರ್.ಸಮರ್ಥ್ ಅರ್ಧಶತಕ
ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ ಭಾರೀ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಈ ಹಂತದಲ್ಲಿ ತಂಡವನ್ನು ಆಧರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಆರ್.ಸಮರ್ಥ್ (63 ರನ್) ಏಕಾಂಗಿ ಅರ್ಧಶತಕ ಸಿಡಿಸಿದ್ದರು. ವಿಶೇಷವೆಂದರೆ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರು.