Advertisement

ರಣಘಟ್ಟ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಆರಂಭ

09:11 PM Jan 04, 2020 | Lakshmi GovindaRaj |

ಬೇಲೂರು: ಬರ ಪೀಡಿತ ಪ್ರದೇಶಗಳಾದ ಹಳೇಬೀಡು, ಮಾದಿಹಳ್ಳಿ ಮತ್ತು ಸಾಲಗಾಮೆ ಕೆರೆಗಳಿಗೆ ನೀರು ತುಂಬಿಸುವ 126 ಕೋಟಿ ರೂ. ವೆಚ್ಚದ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ತಾಲೂಕಿನ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪುಷ್ಪಗಿರಿ ಮಠದಿಂದ ಹಮ್ಮಿಕೊಂಡಿದ್ದ ಪುಷ್ಪಗಿರಿ ರಾಷ್ಟ್ರೀಯ ಉತ್ಸವ ಮತ್ತು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ನೀರಾವರಿ ಯೋಜನೆ ತಾಂತ್ರಿಕ ಒಪ್ಪಿಗೆ ದೊರೆತಿದ್ದು, ಕೂಡಲೇ ಕಾಮಗಾರಿ ಆರಂಭಿಸಿ ಈ ಭಾಗದ ರೈತರ ಹಿತ ಕಾಪಾಡಲಾಗುವುದು ಎಂದರು.

ರೈತರ ಹಿತ ಕಾಪಾಡಲು ಬದ್ಧ: ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಬೆಳೆಗಳಿಗೆ ಸೂಕ್ತ ಬೆಲೆ ನೀಡುವ ಯೋಜನೆ ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬೇಲೂರು ಹಳೇಬೀಡು ಪ್ರವಾಸಿ ಕೇಂದ್ರಗಳಾಗಿದ್ದು, ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವುದಾಗಿ ತಿಳಿಸಿದರು.

ಶಿಕ್ಷಣ, ಅನ್ನ ದಾಸೋಹ: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮಾತನಾಡಿ, ಮಠಗಳು ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದು, ಬಹು ಮುಖ್ಯವಾಗಿ ಶಿಕ್ಷಣ ದಾಸೋಹದಂತಹ ಮಹತ್ತರ ಸೇವೆ ಮಾಡುತ್ತಿದ್ದು, ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುತತ್ತಿವೆ ಎಂದರು.

ಬೇಲೂರು ತಾಲೂಕು ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳನ್ನು ಹೊಂದಿದ್ದು, ಒಂದು ಕಡೆ ಅತಿ ಹೆಚ್ಚು ಮಳೆ ಇನ್ನೂಂದು ಕಡೆ ಮಳೆ ಇಲ್ಲದೇ ಜನರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತು ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಅಲ್ಲದೆ ರೈತರು ವಲಸೆ ಹೋಗವುದನ್ನು ತಪ್ಪಿಸುವುದು ಬಹು ಮುಖ್ಯವಾಗಿದ್ದು ತಾಲೂಕಿನ ರೈತರ ಹಿತದೃಷ್ಟಿಯಿಂದ ನೀರಾವರಿ ಯೋಜನೆಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Advertisement

ಬೇಲೂರು, ಹಳೇಬೀಡು ಅಭಿವೃದ್ಧಿ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಪ್ರವಾಸಿ ಕೇಂದ್ರಗಳಾದ ಬೇಲೂರು ಹಳೇಬೀಡುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಆನೇಕ ಕಾರ್ಯ ಕ್ರಮಗಳನ್ನು ರೂಪಿಸಿದೆ. ಇದರ ಜೊತೆಯಲ್ಲಿ ಈ ಭಾಗದ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದರು.

ತಾಲೂಕಿನ ಅಭಿವೃದ್ಧಿಗೆ ಮನವಿ: ಶಾಸಕ ಕೆ.ಎಸ್‌.ಲಿಂಗೇಶ್‌ ಮಾತನಾಡಿ, ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ನೀರಾವರಿ, ರಸ್ತೆ ಸಂಪರ್ಕ, ಬೇಲೂರು ಪಟ್ಟಣದ ಮುಖ್ಯ ರಸ್ತೆ ಅಗಲಿಕರಣಮತ್ತು ಪರ್ಯಾಯ ರಸ್ತೆ ನಿರ್ಮಾಣ, ರಣಗಟ್ಟ ಯೋಜನೆ, ಅನುಷ್ಠಾನಕ್ಕೆ ತರುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಚಿತ್ರ ನಟರಾದ ಪುನೀತ್‌ರಾಜ್‌ಕುಮಾರ್‌, ಧನಂಜಯ, ದೊಡ್ಡಣ್ಣ, ಶಾಸಕರಾದ ಪ್ರೀತಂಗೌಡ, ಬೆಳ್ಳಿಪ್ರಕಾಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಸದಸ್ಯ ಮಂಜಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ, ಮಾಜಿ ಶಾಸಕರಾದ ಬಿ.ಶಿವರಾಂ, ಎಚ್‌.ಎಂ. ವಿಶ್ವನಾಥ್‌, ಬಿಜೆಪಿ ತಾಲೂಕು ಅದ್ಯಕ್ಷ ಕೊರಟೀಕೆರೆ ಪ್ರಕಾಶ್‌, ಇತರರು ಇದ್ದರು.

11 ಕೆರೆಗಳ ಭರ್ತಿಗೆ ಕ್ರಮ: ರಣಘಟ್ಟ ಒಡ್ಡು ನಿರ್ಮಿಸಿ ಯಗಚಿ ನದಿ ನೀರನ್ನು ಹಳೇಬೀಡು ಮಾದಿಹಳ್ಳಿ ಭಾಗದ 11 ಕೆರೆಗಳ ಭರ್ತಿಮಾಡಲಾಗುವುದು ಎಂದರಲ್ಲದೇ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಗಳ ಬಹುತೇಕ ಕೆರಗಳ ತುಂಬಿಸುವ ಯೋಜನೆಗೂ ಹಣ ಮಂಜೂರು ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಪುಷ್ಪಗಿರಿ ಮಠಕ್ಕೆ 5 ಕೋಟಿ ರೂ. ಅನುದಾನ: ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪವಿತ್ರ ಕೇಂದ್ರಗಳಾಗಿದ್ದು, ಸಮಾಜದ ಏಳಿಗೆಗೆ ಮಠಗಳು ತಮ್ಮದೇ ಅದ ಕೊಡುಗೆ ನೀಡಿವೆ. ಪುಷ್ಪಗಿರಿ ಮಠ ಹಮ್ಮಿಕೊಂಡಿರುವ ಗ್ರಾಮಿಣಾಭಿವೃದ್ಧಿ ಯೋಜನೆಗೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next