ಅಬುಧಾಬಿ : ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸರ್ವ ಧರ್ಮ ರಂಜಾನ್ ಸ್ನೇಹ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ, ಪರಸ್ಪರ ವೈರತ್ವ ತೋರಿ ಮಾನವೀಯತೆಯನ್ನು ಮರೆತು ನಡೆಯುವ ಕೆಲವು ಜನರಿಗೆ ಭಾವೈಕ್ಯತೆಯ ಸಂದೇಶ ಸಾರುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಈ ಕಾರ್ಯಕ್ರಮವು ಇದೆ ಏಪ್ರಿಲ್ 30ಕ್ಕೆ ಜೂಮ್ ಅಂತರ್ಜಾಲದ ಮೂಲಕ ಭಾರತೀಯ ಸಮಯ ಸಂಜೆ 3ಕ್ಕೆ ಮತ್ತು ಯುಎಇ ಸಮಯ ಮದ್ಯಾಹ್ನ 1.30 ಕ್ಕೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಧಾರ್ಮಿಕ ಭಾವ್ಯಕ್ಯತೆ ಸಂದೇಶ ಸಾರಲು ಚಿತ್ರದುರ್ಗ ಮುರುಗ ಮಠದ ಧರ್ಮಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಮುರುಗರಾಜೇಂದ್ರ ಶಿವಮೂರ್ತಿ ಸ್ವಾಮೀಜಿಗಳು, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ ಎಸ್ ಎಫ್ ಎಫ್ ಸಂಘಟನೆಯ ಮಾಜಿ ಅಧ್ಯಕ್ಷರು ಆದ ಮೌಲಾನಾ ಸುಫಿಯಾನ್ ಸಖಾಫಿ ಅವರು, ಚಿಕ್ಕಮಗಳೂರಿನ ಚರ್ಚಿನಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳಾದ ಶ್ರೀ ಫಾದರ್ ಅಂತೋನಿ, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ಕೆ ಎಸ್ ಎಸ್ ಎಫ್ ಎಫ್ ಸಂಘಟನೆಯ ಹಾಲಿ ಅಧ್ಯಕ್ಷರು ಆದ ಮೌಲಾನಾ ಅನೀಸ್ ಕೌಸರಿ, ಕರ್ನಾಟಕ ಪುಸ್ತಕ ಬಂಡಾರಕ್ಕೆ ಹಲವು ಧಾರ್ಮಿಕ, ವೈಚಾರಿಕ ಮತ್ತು ಭಾವೈಕ್ಯತಾ ಪುಸ್ತಕಗಳನ್ನು ಕೊಡುಗೆ ನೀಡಿದ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಮೊಹಮ್ಮದ್ ಕುಂಜ್ ಅವರು ಆಗಮಿಸಲಿದ್ದು ಕರ್ನಾಟಕದ ಮತ್ತು ವಿದೇಶ ಮಣ್ಣಿನಲ್ಲಿ ನಡೆಯುವ ಭಾವ್ಯಕ್ಯತಾ ಸಮಾರಂಭಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಮಹಾನ್ ಚಿಂತಕರು, ಸೂಫಿ ಸಂತರು ಕನ್ನಡದ ಕಬೀರ ಎಂದೇ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಬಾಗಲಕೋಟೆ ಮೂಲದ ಶ್ರೀ ಇಬ್ರಾಹಿಂ ಸುತಾರ ಅವರು ಆಗಮಿಸಿ ಭಾವೈಕ್ಯತಾ ಸಂದೇಶ ಸಾರಲಿದ್ದಾರೆ .
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೆಮ್ಮೆಯ ಕನ್ನಡಿಗರು ಸಂಘದ ಗೌರವಾಧ್ಯಕ್ಷರು ಹಾಗೆ ಹಲವು ಕನ್ನಡಪರ ಸಂಘಟನೆಗಳ ಪೋಷಕರು, ಎಮ್ ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಮೊಹಮ್ಮದ್ ಮುಸ್ತಫಾ ಅವರು ನೆರವೇರಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಅಲಂಕರಿಸಲಿದ್ದಾರೆ, ಹಾಗೆ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಏನ್ ಆರ್ ಐ ಫೋರಮ್ ಮಾಜಿ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ, ದುಬೈಯಲ್ಲಿ ವಕೀಲ ವೃತ್ತಿಯಲ್ಲಿರುವ ಮತ್ತು ಕೇರಳದ ಪ್ರಸಿದ್ಧ ಅನಿವಾಸಿ ಸಂಘಟನೆಯಾದ ಕೆ ಎಮ್ ಸಿ ಸಿ ದುಬೈ ಘಟಕದ ಮುಖ್ಯ ಸಂಚಾಕಾರದ ಅಡ್ವೋಕೇಟ್ ಖಲೀಲ್ ಕಾಸರಗೋಡು ಅವರು ಸಹ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಆಹ್ವಾನಕ್ಕಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಮುಖ್ಯ ಸಂಚಾಲಕರಾದ ಸುದೀಪ್ ದಾವಣಗೆರೆ ಮತ್ತು ರಫೀಕಲಿ ಕೊಡಗು, ಮುಖ್ಯ ಕಾರ್ಯದರ್ಶಿಯಾದ ಸೆಂತಿಲ್ ಬೆಂಗಳೂರು, ದುಬೈ ಕನ್ನಡ ಸಾಹಿತ್ಯ ಬಳಗದ ಸಂಚಾಲಕರಾದ ವಿಷ್ಣುಮೂರ್ತಿ ಮೈಸೂರು, ಹೆಮ್ಮೆಯ ಕನ್ನಡಿಗರು ತಂಡದ ಮಹಿಳಾ ಘಟಕವಾದ ಹೆಮ್ಮೆಯ ಕನ್ನಡತಿಯರು ತಂಡದ ಸಂಚಾಲಕಿಯರಾದ ಶ್ರೀಮತಿ ಮಮತಾ ಶಾರ್ಜಾ, ಶ್ರೀಮತಿ ಪಲ್ಲವಿ ದಾವಣಗೆರೆ, ಶ್ರೀಮತಿ ಹಾದಿಯ ಮಂಡ್ಯ, ಯುಎಇ ಕನ್ನಡ ವೈದ್ಯರುಗಳ ಘಟಕದ ಸಂಚಾಲಕಿಯಾದ ಡಾಕ್ಟರ್ ಸವಿತಾ ಮೈಸೂರು, ಯುಎಇ ಕನ್ನಡಿ ಗಾಸ್ ಬಿಸ್ನೆಸ್ ಫೋರಮ್ ಸಂಚಾಲಕರಾದ ಶಂಕರ್ ಬೆಳಗಾವಿ, ಯುಎಇ ಕನ್ನಡಿಗಸ್ ಜಾಬ್ ಮತ್ತು ಸಹಾಯ ಹಸ್ತ ವಿಭಾಗದ ಮೊಯಿನುದ್ದೀನ್ ಹುಬ್ಬಳ್ಳಿ ಮತ್ತು ಶ್ರೀಮತಿ ಅನಿತಾ ಬೆಂಗಳೂರು ಹಾಗೂ ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.