Advertisement

ರಸೆಲ್‌ ಮಾರ್ಕೆಟಿನ ರಂಜಾನ್‌ ಖರ್ಜೂರ

03:01 PM Jun 17, 2017 | |

ಶಿವಾಜಿನಗರದ ಐತಿಹಾಸಿಕ ರಸೆಲ್‌ ಮಾರ್ಕೆಟಿಗೆ ರಂಜಾನ್‌ ಮಾಸದಲ್ಲಿ ವಿಶೇಷ ಕಳೆ. ಮೊದಲೇ ಗಿಜಿಗುಡುವ ಆ ಮಾರುಕಟ್ಟೆಯಲ್ಲಿ ಈಗ ಜನಪ್ರವಾಹ ಇನ್ನೂ ಜಾಸ್ತಿ. ಇಫ್ತಾರ್‌ಗೆ ಬೇಕಾಗುವ ಒಣಹಣ್ಣುಗಳಿಗೆ (Dry Fruits) ಇದು ಪೂರೈಕೆ ತಾಣ. ಅದರಲ್ಲೂ ರಸೆಲ್‌ ಮಾರ್ಕೆಟ್‌ನಲ್ಲಿರುವ ಮಹಮ್ಮದ್‌ ಇದ್ರೀಸ್‌ ಚೌಧರಿಯವರ “ಡೆಲೀಸಿಯಸ್‌’ ಅಂಗಡಿಯ ಮುಂದೆ ಈಗ ದೊಡ್ಡ ಕ್ಯೂ!

Advertisement

ಚೌಧರಿಯವರ ಅಂಗಡಿಯಲ್ಲಿ ಸಿಗುವಷ್ಟು ವೆರೈಟಿಯ ಖರ್ಜೂರ, ಕರ್ನಾಟಕದ ಬೇರೆಲ್ಲೂ ಸಿಗುವುದಿಲ್ಲ. ಪ್ರಪಂಚದಲ್ಲಿ ಒಟ್ಟು 300 ಬಗೆಯ ಖರ್ಜೂರಗಳಿವೆ. ಅದರಲ್ಲಿ ಅತಿರುಚಿಯ 64 ಖರ್ಜೂರಗಳನ್ನು ಇಂದ್ರೀಸ್‌, ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಈ ವರ್ಷ ಇಲ್ಲಿ 9 ಹೊಸ ಬಗೆಯ, ಖರ್ಜೂರ ಚಾಕ್ಲೆಟುಗಳೂ ಗ್ರಾಹಕರನ್ನು ಸೆಳೆಯುತ್ತಿವೆ.

ಅಂಗಡಿಯ ಕತೆ
ಇಂದ್ರೀಸ್‌ ಅವರ ಅಂಗಡಿ ಆರಂಭವಾಗಿದ್ದು, 1927ರಲ್ಲಿ. ಇಲ್ಲಿಗೆ ಇರಾನ್‌, ಇರಾಕ್‌, ಟರ್ಕಿ, ದಕ್ಷಿಣ ಆಫ್ರಿಕ, ಮೆಕ್ಕಾ, ಮದೀನಾ ಸೇರಿದಂತೆ 7 ದೇಶಗಳಿಂದ ಒಣಹಣ್ಣುಗಳನ್ನು ಆಮದು  ಮಾಡಿಕೊಳ್ಳಲಾಗುತ್ತಿದೆ. ಶ್ರೇಷ್ಠ ಗುಣಮಟ್ಟದ ಖರ್ಜೂರಗಳಾದ ಅಜ್ವಾ, ಮಡ್‌ ಜಾಲ್‌ಕಿಂಗ್‌, ಕಲಿ¾, ಸುಕ್ರೀಲ್‌, ಮಬ್ರೂನ್‌, ಅಂಜೂರ, ಸಾಗಯ್‌, ಅಂಬುರ್‌ಗಳು ಇಲ್ಲಿ ಲಭ್ಯ. ಇವುಗಳ ಬೆಲೆ ಕೆ.ಜಿ.ಗೆ 150 ರುಪಾಯಿಗಳಿಂದ 4500ವರೆಗೂ ಇದೆ. ಮಧುಮೇಹಿಗಳಿಗೂ ಶುಗರ್‌ ಲೆಸ್‌ ಒಣಹಣ್ಣುಗಳು ಇಲ್ಲಿ ಸಿಗುತ್ತವೆ.

ಡಾಕ್ಟರ್‌ ಖರ್ಜೂರ, ಚೌಧರಿ ಚಿಕಿತ್ಸೆ!
ಖರ್ಜೂರ, ವರ್ಷದ ಎಲ್ಲಾ ಸಂದರ್ಭಗಳಲ್ಲೂ ತಿನ್ನಬಹುದಾದ ಹಣ್ಣು. ಇದರಲ್ಲಿ ಅತಿಹೆಚ್ಚು ಪೌಷ್ಟಿಕಾಂಶವುಂಟು. ದೀಪಾವಳಿ, ಕ್ರಿಸ್‌ಮಸ್‌ ಸೇರಿದಂತೆ ಎಲ್ಲ ಹಬ್ಬಗಳಲ್ಲೂ ಖರ್ಜೂರಕ್ಕೆ ಬೇಡಿಕೆ ಇರುತ್ತದೆ. “ಕೆಲವು ಗ್ರಾಹಕರು ಬಂದು, ನನಗೆ ಕೈ ನಡುಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದೆ. ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದಾಗ ನಾನು ಅವರಿಗೆ ಖರ್ಜೂರ ಕೊಟ್ಟು ಕಳಿಸುತ್ತೇನೆ. ಪುನಃ ಅವರು ಬಂದು ಅದನ್ನೇ ಕೇಳಿ ಪಡೆಯುತ್ತಾರೆ. ಈ ಹಣ್ಣು ರಕ್ತ ಶುದ್ಧೀಕರಣ, ಕ್ಯಾಲ್ಸಿಯಂ ಕೊರತೆ, ಮೂಳೆ ನೋವು… ಮುಂತಾದ ತೊಂದರೆಗೆ ಪರಿಹಾರವನ್ನು ಒದಗಿಸುತ್ತದೆ. ಇದೆಲ್ಲವನ್ನೂ ತಿಳಿದುಕೊಂಡು ನಾನೊಬ್ಬ ಡಾಕ್ಟರ್‌ ಆಗಿರುವಂತೆ (ನಗು) ಭಾಸವಾಗುತ್ತದೆ’ ಎನ್ನುತ್ತಾರೆ ಚೌಧರಿ!

ಆಗಿನ ಇಫ್ತಾರ್‌ ನೆನಪು…
ಚಿಕ್ಕಂದಿನಿಂದ ನನಗೂ ಖರ್ಜೂರದ ಮೇಲೆ ಪ್ರೀತಿ ಶುರುವಾಯಿತು. ಇಫ್ತಾರ್‌ ಸಮಯದಲ್ಲಿ ಯಾರಿಗೂ ತಿಳಿಯದಂತೆ ಖರ್ಜೂರ ತೆಗೆದುಕೊಂಡು ತಿನ್ನುತ್ತಿದ್ದೆ. ಮೊದಲಿಗೆ ಹಣ್ಣಿನ ಅಂಗಡಿ ಇಟ್ಟಿದ್ದೆ. ನಂತರ ಅದರ ಜೊತೆಯಲ್ಲಿಯೇ ಸ್ವಲ್ಪ ಖರ್ಜೂರ  ಮಾರುತ್ತಿದ್ದೆ. 2005ರಿಂದ ಸಂಪೂರ್ಣವಾಗಿ ಖರ್ಜೂರ ಮಾರಲು ಮುಂದಾದೆ. ಆ ಸಂದರ್ಭದಲ್ಲಿ “ಜಹದಿ’ ಎನ್ನುವ ರಾಜಸ್ಥಾನದ  ಒಂದು ಬಗೆಯ ಖರ್ಜೂರದ ತಳಿ ಮಾತ್ರ ಕರ್ನಾಟಕದಲ್ಲಿತ್ತು.

Advertisement

ಇಲ್ಲಿನ ಖರ್ಜೂರದ ವಿಶೇಷತೆ
1. ಡಿಸೆಂಬರ್‌ ತಿಂಗಳಿನಲ್ಲಿ ಹಣ್ಣಾಗುವ ಅರಬ್‌ ನಾಡಿನ ಖರ್ಜೂರವಿದು.
2. ಮುಂಚಿತವಾಗಿ ಬುಕ್‌ ಮಾಡಿ, ಅವನ್ನು ತರಿಸಿಕೊಳ್ಳುತ್ತಾರೆ. 
3. ನಂತರ ಫ್ರಿಡ್ಜ್ನಲ್ಲಿ ಸಂರಕ್ಷಿಸಿಡುತ್ತಾರೆ.
4. ಇವುಗಳನ್ನು 6 ತಿಂಗಳಿಂದ 10 ತಿಂಗಳವರೆವಿಗೂ ಕೆಡದಂತೆ ರಕ್ಷಿಸಬಹುದು. 
5. ಒಂದು ತಿಂಗಳವರೆಗೆ ಯಾವುದೇ ವಾತಾವರಣದಲ್ಲಿ ತೆರೆದಿಟ್ಟರೂ ಕೆಡುವುದಿಲ್ಲ.

ನಾನೇಕೆ ಖರ್ಜೂರ ಅಂಗಡಿಯನ್ನಿಟ್ಟೆ?
“ನಾನು ಮೆಕ್ಕಾ, ಮದೀನಾಕ್ಕೆ ಹೋಗಿ ವಾಪಸಾಗುವಾಗ ಹಲವು ಬಗೆಯ ಖರ್ಜೂರಗಳನ್ನು ತರುತ್ತಿದ್ದೆ. ಅಲ್ಲದೇ, ಆ ಖರ್ಜೂರಗಳು ಇಲ್ಲೆಲ್ಲೂ ಸಿಗುತ್ತಿರಲಿಲ್ಲ. ನಾನು ತಂದ ಹಣ್ಣನ್ನು ಸ್ನೇಹಿತರಿಗೆ  ಹಂಚುತ್ತಿದ್ದೆ. ಆಗ ಅವರು, “ಇನ್ನೊಂದು ಸಲ ಹೋದಾಗ, ನಮಗೂ ತೆಗೆದುಕೊಂಡು ಬಾ’ ಎನ್ನುತ್ತಿದ್ದರು. ಆಗ ನಾನು ಇಷ್ಟೊಂದು ಜನ ಖರ್ಜೂರವನ್ನು ಇಷ್ಟಪಡುತ್ತಾರೆ ಅಂದಮೇಲೆ ಅದನ್ನು ಆಮದು ಮಾಡಿಕೊಂಡು, ನಾನೇ ಒಂದು ಅಂಗಡಿ ಆರಂಭಿಸಬಾರದೇಕೆ ಅಂತನಿಸಿತು. ಈ ಪ್ರಸಂಗವೇ ನನ್ನ ಅಂಗಡಿಯ ಸ್ಥಾಪನೆಗೆ ಪ್ರೇರಣೆ’ ಎನ್ನುವುದು ಚೌಧರಿ ಮಾತು.
 
ರಂಜಾನ್‌ಗೆ ಏಕೆ ಖರ್ಜೂರ ನಂಟು?
ಮುಸಲ್ಮಾನ ಬಾಂಧವರು  ರಂಜಾನ್‌ ತಿಂಗಳಿನಲ್ಲಿ  30 ದಿನಗಳ ಕಾಲ ಉಪವಾಸ  ಇರುತ್ತಾರೆ. ಮುಂಜಾನೆ  4.30 ರಿಂದ  ಸಂಜೆ  6 ಗಂಟೆಯವರೆಗೆ   ( 14 ಗಂಟೆ ) ಉಪವಾಸ ಇರುತ್ತಾರೆ. ಮುಂಜಾನೆ 4 ಗಂಟೆಗೆ  ಊಟಮಾಡುವುದನ್ನು ಸಹ್ರಿ ಎನ್ನುತ್ತಾರೆ.  ಉಪವಾಸದ ಅವಧಿ ಪೂರ್ಣಗೊಂಡ ನಂತರ  ಊಟ ಮಾಡುವುದಕ್ಕೆ  ಇಫ್ತಾರ್‌ ಎಂದು ಕರೆಯುತ್ತಾರೆ.   14 ಗಂಟೆಗಳ  ಕಾಲ ಉಪವಾಸ ಇರುವ   ಸಮಯದಲ್ಲಿ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಉಂಟಾಗುತ್ತವೆ. ಈ ವ್ಯತ್ಯಾಸಗಳನ್ನು ಸರಿದೂಗಿಸಲು  ಹಾಗೂ ದಿನವಿಡೀ  ಲವಲವಿಕೆಯಿಂದ  ಇರಲು ಖರ್ಜೂರ  ತಿನ್ನಲಾಗುತ್ತದೆ.  ಆ ಕಾರಣದಿಂದ  ರಂಜಾನ್‌ನಲ್ಲಿ  ಖರ್ಜೂರದ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ.

 ಚಂದ್ರಶೇಖರ ಜಿ.

Advertisement

Udayavani is now on Telegram. Click here to join our channel and stay updated with the latest news.

Next