Advertisement

ರಾಮನಾಥ ಕೋವಿಂದ್ ಭಾರತದ 14ನೇ ರಾಷ್ಟ್ರಪತಿ

05:10 AM Jul 21, 2017 | |

ನವದೆಹಲಿ: ನಿರೀಕ್ಷೆಯಂತೆಯೇ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರು 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ಯುಪಿಎ ಅಭ್ಯರ್ಥಿ ಮೀರಾಕುಮಾರ್‌ ವಿರುದ್ಧ ಜಯಗಳಿಸಿದ್ದಾರೆ.

Advertisement

ಕಳೆದ ಸೋಮವಾರ ನಡೆದಿದ್ದ ಚುನಾವಣೆಯಲ್ಲಿ ದೇಶಾದ್ಯಂತ ಲೋಕಸಭೆ, ರಾಜ್ಯಸಭೆ ಮತ್ತು ವಿವಿಧ ವಿಧಾನಸಭೆಗಳ ಸದಸ್ಯರು ಮತ ಚಲಾಯಿಸಿದ್ದರು. ಈ ವೇಳೆ ಶೇ.99 ರಷ್ಟು ಮತದಾನವಾಗಿತ್ತು. ಗುರುವಾರ ನಡೆದಿದ್ದು, ಶೇ.65.65 ಮತ ಪಡೆಯುವ ಮೂಲಕ ರಾಮನಾಥ ಕೋವಿಂದ್‌ ನಿರಾಯಾಸವಾಗಿ ಜಯ ಗಳಿಸಿದರು. ಮೀರಾ ಕುಮಾರ್‌ ಅವರು ಶೇ.34.35 ಮತ ಪಡೆದರು.

776 ಸಂಸದರ ಪೈಕಿ ಕೋವಿಂದ್‌ 522 ಮತ ಪಡೆದರೆ, ಮೀರಾ 225 ಮತ ಪಡೆದರು. ಅದೇ ಶಾಸಕರ ಪೈಕಿ ಕೋವಿಂದ್‌ 2408 ಮತ ಪಡೆದರೆ, ಮೀರಾ ಅವರು 1626 ಶಾಸಕರ ಬೆಂಬಲ ಪಡೆದರು.

ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನೆಚ್ಚಿನ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೋವಿಂದ್‌ ಅವರಿಗೆ ಎನ್‌ಡಿಎ ಹೊರತುಪಡಿಸಿ ಜೆಡಿಯು, ಬಿಜೆಡಿ, ಎಐಎಡಿಎಂಕೆ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲ ನೀಡಿದವು. ಅಲ್ಲದೆ ದಲಿತ ಸಮುದಾಯಕ್ಕೆ ಸೇರಿದ ಕೋವಿಂದ್‌ ಅವರ ಸ್ಪರ್ಧೆಯಿಂದ ಪ್ರತಿಪಕ್ಷಗಳ ಲೆಕ್ಕಾಚಾರವೂ ಬದಲಾಗಿ ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾಕುಮಾರ್‌ ಅವರನ್ನು ಕಣಕ್ಕಿಳಿಸಿದ್ದವು. 

ಎನ್‌ಡಿಎ ಅಭ್ಯರ್ಥಿಗೆ ಸಂಪೂರ್ಣ ಬೆಂಬಲವಿದೆ ಎಂಬ ಅರಿವಿದ್ದರೂ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ಮೀರಾಕುಮಾರ್‌ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಹೇಳಿದ್ದವು.
ಬಿಜೆಪಿ ಪಾಲಿಗೆ ಕೋವಿಂದ್‌ ಅವರ ಆಯ್ಕೆ ಹರ್ಷದ ಸಂಗತಿ. ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಎನ್‌ಡಿಎ ವತಿಯಿಂದ ಪ್ರಧಾನಿಯಾಗಿದ್ದರೂ, ಪಕ್ಷದ ಸದಸ್ಯರೊಬ್ಬರನ್ನು ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಲು ಆಗಿರಲಿಲ್ಲ. ಆಗ, ಬಾಹ್ಯಾಕಾಶ ವಿಜ್ಞಾನಿ ಅಬ್ದುಲ್‌ ಕಲಾಂ ಅವರನ್ನು ಆರಿಸಲಾಗಿತ್ತು. ಆದರೆ ಈ ಬಾರಿ ಬಿಜೆಪಿಯೇ ಸಂಪೂರ್ಣ ಬಹುಮತ ಹೊಂದಿದ್ದರಿಂದ ಪಕ್ಷದ ಹಿಂದುಳಿದ ಮೋರ್ಚಾ ನಾಯಕರಾಗಿದ್ದ ಹಾಗೂ ಕೋವಿಂದ್‌ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ಈ ಮೂಲಕ ಕೇಸರಿ ಪಕ್ಷದ ವತಿಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರನ್ನು ಆಯ್ಕೆ ಮಾಡಿ, ರೈಸಿನಾ ಹಿಲ್‌ಗೆ ಕಳುಹಿಸಿದೆ. ಅಲ್ಲದೆ ಶೇ.70 ರಷ್ಟು ಮತ ಬೀಳಲಿವೆ ಎಂದು ಬಿಜೆಪಿ ಅಂದಾಜಿಸಿತ್ತಾದರೂ, ಶೇ.65.65ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Advertisement

ಜು.24ಕ್ಕೆ ಹಾಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಅಧಿಕಾರಾವಧಿಅಂತ್ಯಗೊಳ್ಳಲಿದ್ದು, ಮಾರನೇ ದಿನ ಅಂದರೆ, 25ರಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಕೋವಿಂದ್‌ ಅವರಿಗೆ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಬೋಧಿಸಲಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ವರೆಗೆ ಬಿಜೆಪಿಗೆ ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಬೆಂಬಲವಿಲ್ಲದೇ ಆರಿಸಿ ಕಳುಹಿಸುವ ಬಲ ಇರಲಿಲ್ಲ. ಆದರೆ ದೇಶದಲ್ಲೇ ಅತ್ಯಂತ ದೊಡ್ಡ ರಾಜ್ಯವೆಂದೆನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ಭಾರಿ ಗೆಲುವು ಸಾಧಿಸಿದಾಗಲೇ ಬಿಜೆಪಿ ಪಕ್ಷದ ರಾಷ್ಟ್ರಪತಿ ಹುದ್ದೆಗೆ ಕಳುಹಿಸುವ ಆಸೆ ಬಲವಾಗಿತ್ತು. ಆದರೂ, ಕೇವಲ 20 ಸಾವಿರ ಮತಗಳ ಕೊರತೆ ಇದ್ದಿದ್ದರಿಂದ ಜೆಡಿಯು, ಬಿಜೆಡಿ, ಎಐಎಡಿಎಂಕೆ, ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಕೋವಿಂದ್‌ ಗೆದ್ದೇ ಬಿಟ್ಟರು.

“”ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ್‌ಜಿ ಅವರಿಗೆ ಅಭಿನಂದನೆಗಳು, ರಾಷ್ಟ್ರಪತಿಯಾಗಿ ನಿಮ್ಮ ಸಮಯ ರಚನಾತ್ಮಕವಾಗಿರಲಿ ಎಂದು ಆಶೀಸುತ್ತೇನೆ,” ಎಂದು ಪ್ರಧಾನಿ ನರೇಂದ್ರ ಮೋದಿ ಶುಭಕೋರಿದರು.

“”ನಾನು ಕನಸಲ್ಲೂ ಈ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈ ಗೆಲುವು ನನ್ನ ಕರ್ತವ್ಯ ಮತ್ತು ನಿಷ್ಠೆಯನ್ನು ಹೆಚ್ಚಿಸಿದೆ. ಅಲ್ಲದೆ ಈ ಜಯದ ಮೂಲಕ ಭಾರತ ಸಂವಿಧಾನದ ಶ್ರೇಷ್ಠತೆಯನ್ನು ಸಾರಿದಂತಾಗಿದೆ,” ಎಂದು ನಿಯೋಜಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಂತಸ ವ್ಯಕ್ತಪಡಿಸಿದರು.

ಅತ್ತ ಉತ್ತರ ಪ್ರದೇಶ ಕಾನ್ಪುರ ಜಿಲ್ಲೆಯಲ್ಲಿರುವ ಕೋವಿಂದ್‌ ಅವರ ಸ್ವಗ್ರಾಮದಲ್ಲಿ ಹರ್ಷದ ಹೊಳೆಯೇ ಹರಿದಿದೆ. ಅವರು ಓದಿದ ಶಾಲಾ ಕಾಲೇಜುಗಳ ಸಿಬ್ಬಂದಿಗಳೂ ಹರ್ಷೋದ್ಘಾರ ಮಾಡಿದ್ದಾರೆ. ಕೋವಿಂದ್‌ ಅವರು ಭಾರತದ ಅತ್ಯಂತ ಉನ್ನತ ಹುದ್ದೆ ಏರಿರುವ ಈ ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಎದುರಾಳಿಯಾಗಿದ್ದ ಮೀರಾಕುಮಾರ್‌ ಅವರು, ಕೋವಿಂದ್‌ ಅವರಿಗೆ ಶುಭ ಕೋರಿದ್ದು, ಭಾರತದಲ್ಲಿನ ಸದ್ಯದ ಸಂಕಷ್ಟದ ಸಮಯದಲ್ಲಿ ರಾಷ್ಟ್ರಪತಿಯಾಗಿರುವ ನೀವು, ಸಂವಿಧಾನದ ಆಶಯಗಳನ್ನು ಉಳಿಸಿ ಎಂದಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂ, ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಕೋವಿಂದ್‌ ಅವರಿಗೆ ಶುಭ ಕೋರಿದ್ದಾರೆ.

ಕರ್ನಾಟಕದಲ್ಲಿ ಮೀರಾಗೆ ಗೆಲುವು!
ಒಟ್ಟಾರೆ ಫಲಿತಾಂಶದಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರು ಗೆದ್ದಿರಬಹುದು. ಆದರೆ ಕರ್ನಾಟಕದಲ್ಲಿ ಮಾತ್ರ ಗೆದ್ದಿರುವುದು ಮೀರಾಕುಮಾರ್‌ ಅವರೇ! ಹೌದು, ಇಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದು, ಜೆಡಿಎಸ್‌ ಕೂಡ ಮೀರಾಕುಮಾರ್‌ ಅವರಿಗೇ ಬೆಂಬಲ ನೀಡಿತ್ತು. ಹೀಗಾಗಿ, 224 ಶಾಸಕರ ಬಲದ ವಿಧಾನಸಭೆಯಲ್ಲಿ 222 ಸದಸ್ಯರು ಮತ ಚಲಾಯಿಸಿದ್ದಾರೆ. ಇವರಲ್ಲಿ ಮೀರಾಕುಮಾರ್‌ ಅವರಿಗೆ 163 ಮತ ಬಿದ್ದಿದ್ದರೆ, ಕೋವಿಂದ್‌ ಅವರಿಗೆ 56 ಮತಗಳು ಸಿಕ್ಕಿವೆ. ಆದರೆ ಮೂರು ಮತಗಳು ಅನರ್ಹವಾಗಿವೆ.

ಅಭ್ಯರ್ಥಿಗಳಿಗೆ ಸಿಕ್ಕ ಮತ ಪ್ರಮಾಣ
ಅಭ್ಯರ್ಥಿಗಳು         ಸಂಸದರ ಮತ        ಶಾಸಕರ ಮತ        ಒಟ್ಟಾರೆ ಮೌಲ್ಯ
ರಾಮನಾಥ್‌ ಕೋವಿಂದ್‌ – 522         2408            7,02,044
ಮೀರಾಕುಮಾರ್‌     – 225            1626            3,67,314

ಯಾವ ರಾಜ್ಯದಲ್ಲಿ ಯಾರು ಮುನ್ನಡೆ?

ಕೋವಿಂದ್‌

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಗೋವಾ, ಗುಜರಾತ್‌, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್‌, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ,

ಮೀರಾಕುಮಾರ್‌
ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮೇಘಾಲಯ, ಮಿಜೋರಾಂ,  ಪಂಜಾಬ್‌, ತ್ರಿಪುರ, ಪಶ್ಚಿಮ ಬಂಗಾಳ, ದೆಹಲಿ, ಪುದುಚೇರಿ

ಕೋವಿಂದ್‌ರಿಗೆ ಯುಪಿಯಲ್ಲಿ ಹೆಚ್ಚು, ಕೇರಳದಲ್ಲಿ ಕಡಿಮೆ
ನಿಯೋಜಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಮತ ಬಿದ್ದಿವೆ. ಇಲ್ಲಿ ಅವರಿಗೆ 335, ಅಂದರೆ, 69,680 ಮೌಲ್ಯದ ಮತ ಸಿಕ್ಕಿವೆ. ಆದರೆ ಮೀರಾಕುಮಾರ್‌ ಅವರಿಗೆ 65 ಅಂದರೆ, 13,520 ಮತ ಬಿದ್ದಿವೆ. ಇನ್ನು ಕೇರಳದಲ್ಲಿ ಕೋವಿಂದ್‌ರಿಗೆ ಕೇವಲ 1, ಪಶ್ಚಿಮ ಬಂಗಾಳದಲ್ಲಿ 11, ತ್ರಿಪುರದಲ್ಲಿ 7, ದೆಹಲಿಯಲ್ಲಿ 6 ಮತ ಬಿದ್ದಿವೆ. ಆಂಧ್ರ ಪ್ರದೇಶದಲ್ಲಿ ಮೀರಾ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಮೀರಾ ಅವರಿಗೆ ನಾಗಾಲ್ಯಾಂಡ್‌ನ‌ಲ್ಲಿ 1, ಸಿಕ್ಕಿಂನಲ್ಲಿ 1 ಮತ ಸಿಕ್ಕಿದೆ.

ಈ ದೇಶದಲ್ಲಿ ಹಲವಾರು ರಾಮನಾಥ ಕೋವಿಂದ್‌ಗಳಿದ್ದಾರೆ. ಅವರೆಲ್ಲರೂ ಸಂಜೆಯ ಒಂದೊತ್ತಿನ ಊಟಕ್ಕಾಗಿ ಮಳೆಯ ನಡುವೆಯೇ ಬೆವರು ಸುರಿಸುತ್ತಿದ್ದಾರೆ.
– ರಾಮನಾಥ್‌ ಕೋವಿಂದ್‌,
ನಿಯೋಜಿತ ರಾಷ್ಟ್ರಪತಿ

ರಾಷ್ಟ್ರಪತಿಯಾಗಿ ಆಯ್ಕೆಯಾದ ಕೋವಿಂದ್‌ ಅವರಿಗೆ ಅಭಿನಂದನೆಗಳು.ಅವರು ಯಶಸ್ವಿಯಾಗಿ ತಮ್ಮ ಅಧಿಕಾರಾವಧಿ ಮುಗಿಸಲಿ ಎಂದು ಹಾರೈಸುತ್ತೇನೆ.
– ಪ್ರಣಬ್‌ ಮುಖರ್ಜಿ, ಹಾಲಿ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಕೋವಿಂದ್‌ಜಿ ಅವರಿಗೆ ಅಭಿನಂದನೆಗಳು. ಅವರು ತಮ್ಮ ಅವಧಿಯನ್ನು ರಚನಾತ್ಮಕವಾಗಿ ಮುಗಿಸಲಿ ಎಂದು ಆಶಿಸುತ್ತೇನೆ.
– ನರೇಂದ್ರ ಮೋದಿ, ಪ್ರಧಾನಿ

ಕೋವಿಂದ್‌ರಿಗೆ ಅಭಿನಂದನೆಗಳು.ಈಗಿನ ಸಂಕಷ್ಟದ ಸಮಯದಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸುವ
ಜವಾಬ್ದಾರಿ ಅವರ ಮೇಲೆ ಬಿದ್ದಿದೆ.

– ಮೀರಾಕುಮಾರ್‌, ಸೋತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next