ಬೆಂಗಳೂರು: ಸಿಲಿಕಾನ್ ಸಿಟಿ ನಾಗರೀಕರನ್ನು ಬೆಚ್ಚಿ ಬೀಳಿಸಿದ ಕುಂದಲಹಳ್ಳಿ ಸಮೀಪದ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಶಂಕಿತ ಉಗ್ರನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟು ಸ್ಫೋಟಿಸಿದ ಪ್ರಮುಖ ಆರೋಪಿ ಹಾಗೂ ಮಾಸ್ಟರ್ ಮೈಂಡ್ ಮುಸಾವೀರ್ ಹುಸೇನ್ ಶಾಜೀಬ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖಾ ತಂಡ, ಮಾ.1ರಂದು ನಡೆದ ಘಟನೆಯನ್ನು ಆತನಿಂದಲೇ ಮರು ಸೃಷ್ಟಿ ಮಾಡಿಸಿ ಮಹಜರು ಮಾಡಲಾಗಿದೆ.
ಪ್ರತಿಯೊಂದು ಹಂತವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಅಲ್ಲದೆ, ಸ್ಫೋಟದ ಬಳಿಕ ಸಮೀಪದ ಮಸೀದಿ ಬಳಿ ಬಟ್ಟೆ ಬದಲಾವಣೆ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.
ಬೆಳಗ್ಗೆ 8ಕ್ಕೆ ರಾಮೇಶ್ವರ ಕೆಫೆ ಬಳಿ ಶಂಕಿತನನ್ನು ಕರೆದೊಯ್ದ ತನಿಖಾ ತಂಡ, ಸ್ಫೋಟ ನಡೆದ ದಿನ ಕ್ಯಾಪ್ ಮತ್ತು ಬಟ್ಟೆ ಧರಿಸಿದ್ದ ರೀತಿಯಲ್ಲೇ ಆತನಿಗೆ ಉಡುಗೆ ತೊಡುಗೆಗಳನ್ನು ಧರಿಸಿ, ಜತೆಗೆ ಕಪ್ಪು ಬ್ಯಾಗ್ ಹೆಗಲಿಗೆ ಹಾಕಿಕೊಂಡು ಆ ದಿನ ಸಂಭವಿಸಿದ್ದ ಸೀನ್ ರೀ ಕ್ರಿಯೇಷನ್ ಮಾಡಲಾಗಿತ್ತು. ಅದನ್ನೆಲ್ಲ ಅಧಿಕಾರಿಗಳು ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದಿಂದ ಯಾವ ಮಾರ್ಗದಲ್ಲಿ ಹೋಟೆಲ್‌ಗೆ ಬಂದಿದ್ದಾನೆ, ಹೋಟೆಲ್‌ನಲ್ಲಿ ಏನ್ ಆರ್ಡರ್ ಮಾಡಿದ್ದಾನೆ? ಎಷ್ಟು ಸಮಯ ಹೋಟೆಲ್‌ನಲ್ಲಿ ಕುಳಿತಿದ್ದ? ಬಳಿಕ ಬಾಂಬ್ ಇಟ್ಟಿದ್ದ ಬ್ಯಾಗ್ ಅನ್ನು ಕೈತೊಳೆಯುವ ಜಾಗದಲ್ಲಿರಿಸಿ ಯಾವ ಮಾರ್ಗದ ಮೂಲಕ ಹೊರಗಡೆ ಹೋಗಿದ್ದಾನೆ. ಅಲ್ಲಿಂದ ಯಾವ ಬಸ್ ನಿಲ್ದಾಣಕ್ಕೆ ಬಂದ ಸೇರಿ ಎಲ್ಲ ಘಟನೆಯನ್ನು ಮರು ಸೃಷ್ಟಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಹೋಟೆಲ್ ಅಕ್ಕಪಕ್ಕ ನಿಯೋಜಿಸಲಾಗಿತ್ತು.
ಏನಿದು ಘಟನೆ?: ಮಾ.1ರಂದು ಮಧ್ಯಾಹ್ನ 12.56ರ ಸುಮಾರಿಗೆ ಕೆಫೆ ನ್ಪೋಟಗೊಂಡು ಸಿಬ್ಬಂದಿ ಹಾಗೂ ಗ್ರಾಹಕರು ಸೇರಿ 10 ಮಂದಿ ಗಾಯಗೊಂಡಿದ್ದರು. ಮಾ.3ರಂದು ಪ್ರಕರಣವನ್ನು ರಾಜ್ಯ ಸರ್ಕಾರವು ಹೆಚ್ಚಿನ ತನಿಖೆಗೆ ಎನ್‌ಐಎಗೆ ವಹಿಸಿತ್ತು. ಶಂಕಿತ ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನವನ್ನೂ ಎನ್‌ಐಎ ಘೋಷಿಸಿತ್ತು. ತನಿಖೆ ವೇಳೆ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ಈ ಪ್ರಕರಣದ ಮಾಸ್ಟರ್ ಮೈಂಡ್ ಗಳೆಂದು ಗೊತ್ತಾಗಿತ್ತು. ನಂತರ ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಶಂಕಿತರನ್ನು ಏ.12 ರಂದು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.