Advertisement

ರಾಮೇಶ್ವರಂ ಕೆಫೆ ಪ್ರಕರಣ: ಬೆಂಗಳೂರು ಬಳಿಯೇ ಬಾಂಬ್‌ ತಯಾರು!

11:02 PM Mar 29, 2024 | Team Udayavani |

ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬೆಂಗಳೂರು ಸಮೀಪದಲ್ಲಿಯೇ ಬಾಂಬ್‌ ತಯಾರಿಸಿರುವ ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಬಗ್ಗೆ ಎಳೆಎಳೆಯಾಗಿ ಬಂಧಿತರಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾಹಿತಿ ಕಲೆ ಹಾಕಿದೆ.

Advertisement

ಮತ್ತೂಂದೆಡೆ ಬಾಂಬ್‌ ಸ್ಫೋಟ ಪ್ರಕರಣದ ಸೂತ್ರಧಾರರಿಗೆ ತೀವ್ರ ಶೋಧ ನಡೆಸುತ್ತಿರುವ ಎನ್‌ಐಎಯು ಪ್ರಮುಖ ಆರೋಪಿಗಳ ಫೋಟೋ ಬಿಡುಗಡೆ ಮಾಡಿ ಆರೋಪಿಗಳ ಸುಳಿವು ಕೊಟ್ಟವರಿಗೆ ತಲಾ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಜಾಮಿಲ್‌ ಷರೀಫ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ನಾಪತ್ತೆಯಾಗಿರುವ ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವೀರ್‌ ಹುಸೇನ್‌ ಶಾಜೀಬ್‌ಗ ಮುಜಾಮಿಲ್‌ ಷರೀಫ್ ಬಾಂಬ್‌ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸಿದ್ದ. ಇದನ್ನು ಬಳಸಿಕೊಂಡು ನಾಪತ್ತೆಯಾಗಿರುವ ಇಬ್ಬರು ಆರೋಪಿಗಳು ಬೆಂಗಳೂರು ಸಮೀಪವೇ ಐಇಡಿ ಬಾಂಬ್‌ ತಯಾರಿಸಿದ್ದರು.

ಶಂಕಿತ ಅಬ್ದುಲ್‌ ಮತೀನ್‌ ತಾಹಾನ ಸೂಚನೆಯಂತೆ ಬಂಧಿತ ಮುಜಾಮಿಲ್‌ ಷರೀಫ್ ಬಾಂಬ್‌ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ. ನಾಪತ್ತೆಯಾಗಿರುವ ಶಂಕಿತರು ಯಾರ ಸಹಾಯ ಪಡೆದು ಬೆಂಗಳೂರು ಸಮೀಪದಲ್ಲಿ ಬಾಂಬ್‌ ತಯಾರಿಸಿದ್ದರು ಎಂಬ ಬಗ್ಗೆ ಮುಜಾಮಿಲ್‌ನಿಂದ ಎಳೆ ಎಳೆಯಾಗಿ ಎನ್‌ಐಎ ಮಾಹಿತಿ ಕಲೆ ಹಾಕುತ್ತಿದೆ. ನಾಪತ್ತೆಯಾದ ಶಂಕಿತರು ಪುರುಷರ ಹಾಸ್ಟೆಲ್‌, ಪಿಜಿಯಲ್ಲಿ ನೆಲೆಸಿದ್ದರು. ಕಡಿಮೆ ಬಜೆಟ್‌ ಹೊಟೇಲ್‌, ಲಾಡ್ಜ್ಗಳನ್ನೇ ಗುರುತಿಸಿ ಅಲ್ಲಿ ವಾಸ್ತವ್ಯ ಹೂಡಿರುವ ಸುಳಿವು ಎನ್‌ಐಎಗೆ ಸಿಕ್ಕಿದೆ. ಆದರೆ ಬೆಂಗಳೂರು ಸಮೀಪದಲ್ಲಿ ಯಾವ ಪ್ರದೇಶದಲ್ಲಿ ಬಾಂಬ್‌ ತಯಾರಿಸಿದ್ದರು ಎಂಬ ಮಾಹಿತಿ ನೀಡಲು ಎನ್‌ಐಎ ಉನ್ನತ ಮೂಲಗಳು ನಿರಾಕರಿಸಿದೆ.

Advertisement

ನಾಪತ್ತೆಯಾದವರ ಸೂಚನೆಯಂತೆ ಕೆಲಸ
ತಲೆಮರೆಸಿಕೊಂಡಿರುವ ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವೀರ್‌ ಹುಸೇನ್‌ ಶಾಜೀಬ್‌ ಕೆಫೆ ಸ್ಫೋಟ ಪ್ರಕರಣದಲ್ಲಿ ಸೂತ್ರಧಾರರಾಗಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಂಧಿತ ಮುಜಾಮಿಲ್‌ ಷರೀಫ್ ಒಂದೂವರೆ ವರ್ಷದ ಹಿಂದೆ ಬಸವೇಶ್ವರ ನಗರದ ಹಾವನೂರು ಸರ್ಕಲ್‌ ಬಳಿ ಚಿಕನ್‌ ಕೌಂಟಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಸ್ಫೋಟದ ಬಳಿಕ ಮುಸಾವೀರ್‌ಗೆ ತಲೆಮರೆಸಿಕೊಳ್ಳಲು ಸಹಕಾರ ಕೊಟ್ಟಿದ್ದ. ಬಂಧನಕ್ಕೊಳಗಾಗಿರುವ ಮುಜಾಮಿಲ್‌ ಷರೀಫ್ ನಾಪತ್ತೆಯಾಗಿರುವ ಇಬ್ಬರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂಬುದು ಗೊತ್ತಾಗಿದೆ.

ಪಾಷಾ 7 ದಿನ ಎನ್‌ಐಎ ವಶಕ್ಕೆ
ಶಂಕಿತ ಮುಜಾಮಿಲ್‌ ಷರೀಫ್ನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಅಧಿಕಾರಿಗಳು ಹಾಜರುಪಡಿಸಿದ್ದರು. ನ್ಯಾಯಾಲಯವು 7 ದಿನಗಳ ಕಾಲ ಆತನನ್ನು ಎನ್‌ಐಎ ವಶಕ್ಕೆ ನೀಡಿದೆ. ಆತನ ವಿಚಾರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಪ್ರಕರಣದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಶಂಕಿತರ ಸುಳಿವು ಕೊಟ್ಟವರಿಗೆ ಬಹುಮಾನ
ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವಿರ್‌ ಹುಸೇನ್‌ ಶಾಜೀಬ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಡುಗಡೆ ಮಾಡಿ ತಲಾ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಆರೋಪಿ ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತದೆ. ಸುಳಿವು ಸಿಕ್ಕಿದಲ್ಲಿ 080-29510900, 8904241100 ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

6 ಅಡಿಗೂ ಎತ್ತರ, ಕಟ್ಟುಮಸ್ತು ದೇಹ ಹೊಂದಿರುವ ಶಂಕಿತ
ಬಾಂಬ್‌ ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸಾವಿರ್‌ ಹುಸೇನ್‌ ಶಜೀಬ್‌ (30 ವರ್ಷ)ನ ಮೂರು ಫೋಟೋಗಳನ್ನು ಎನ್‌ಐಎ ಬಿಡುಗಡೆ ಮಾಡಿದೆ. ಅಂದಾಜು 6.2 ಅಡಿ ಇರುವ ಈತ ಕಟ್ಟುಮಸ್ತಾದ ದೇಹ ಹೊಂದಿದ್ದಾನೆ. ಮೊಹಮ್ಮದ್‌ ಜುನೈದ್‌ ಸಯ್ಯದ್‌ ಹೆಸರಿನಲ್ಲಿ ವಾಹನ ಪರವಾನಿಗೆ ಹೊಂದಿದ್ದಾನೆ. ಮತ್ತೂಬ್ಬ ಸಂಚುಕೋರ ಅಬ್ದುಲ್‌ ಮತೀನ್‌ ಅಹ್ಮದ್‌ (30 ವರ್ಷ) 5.5 ಅಡಿ ಎತ್ತರವಿದ್ದಾನೆ. ತಲೆಯ ಮುಂಭಾಗ ಬೋಳಾಗಿದ್ದು, ಕ್ಯಾಪ್‌ ಧರಿಸುತ್ತಾನೆ. ಆತ ವಿಘ್ನೇಶ್, ಸುಮಿತ್‌ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನೂ ಕೂಡ ಹೊಂದಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next