Advertisement

Rameshwaram Cafe Case; ಬಾಂಬರ್‌ ವೇಷ ತೊಡಿಸಿ ಪತ್ತೆ ಹಚ್ಚಲು ಶತಪ್ರಯತ್ನ

08:50 PM Mar 09, 2024 | Team Udayavani |

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳಿಂದ ಬಳ್ಳಾರಿಯ ವಿವಿಧೆಡೆ ತನಿಖೆ, ಹಲವರ ವಿಚಾರಣೆ ನಡೆಸಿದ್ದ ಎನ್‌ಐಎ ಅಧಿಕಾರಿಗಳ ತಂಡ ಬಾಂಬರ್‌ ಕಲಬುರಗಿಗೆ ತೆರಳಿರುವ ಶಂಕೆ ಹಿನ್ನೆಲೆಯಲ್ಲಿ ಶನಿವಾರ ಅಲ್ಲಿಗೆ ತೆರಳಿದೆ. ಜತೆಗೆ ಓರ್ವನ ತಲೆ ಮೇಲೆ ಕ್ಯಾಪ್‌ ಇಟ್ಟು, ಮುಖಕ್ಕೆ ಮಾಸ್ಕ್, ಬೆನ್ನಿಗೆ ಬ್ಯಾಗ್‌ ಹಾಕಿ ಪತ್ತೆ ಹಚ್ಚುವ ಕೆಲಸ ಸಹ ಮಾಡಿದ್ದಾರೆ.

Advertisement

ಆರೋಪಿ ಬೆಂಗಳೂರಿನಿಂದ ತುಮಕೂರು ಮೂಲಕ ಬಳ್ಳಾರಿ ಬಸ್‌ ನಿಲ್ದಾಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಿದ ಎನ್‌ಐಎ ಅಧಿಕಾರಿಗಳಿಗೆ ಆತ ಬಳ್ಳಾರಿಯಿಂದ ಕಲಬುರಗಿ ಬಸ್‌ ಹತ್ತಿರುವ ಸಿಸಿಟಿವಿ ದೃಶ್ಯಗಳು ಲಭಿಸಿವೆ ಎನ್ನಲಾಗುತ್ತಿದೆ.

ಹೀಗಾಗಿ ಅಧಿಕಾರಿಗಳು ಮೂರು ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ರಾಯಚೂರು, ನೆರೆಯ ಆಂಧ್ರದ ಆದೋನಿ, ಮಂತ್ರಾಲಯ, ಮಾರ್ಗದಲ್ಲಿ ಒಂದು ತಂಡ; ಸಿರುಗುಪ್ಪ, ಸಿಂಧನೂರು, ಶಹಾಪುರ, ಸುರಪುರ ಮಾರ್ಗದಲ್ಲಿ ಮತ್ತೂಂದು ತಂಡ ಹಾಗೂ ಗ್ರಾಮೀಣ ಭಾಗದ ಮೂಲಕ ಮತ್ತೊಂದು ತಂಡ ಕಲಬುರಗಿಗೆ ತೆರಳಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆಟೋ ಚಾಲಕನ ವಿಚಾರಣೆ:
ಇನ್ನು ಆರೋಪಿ ಬೆಂಗಳೂರಿನಿಂದ ಬಳ್ಳಾರಿ ಬಸ್‌ ನಿಲ್ದಾಣಕ್ಕೆ ಆಗಮಿಸಿ, ಬಳಿಕ ಆಟೋವೊಂದರಲ್ಲಿ ತೆರಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋ ನೋಂದಣಿ ಸಂಖ್ಯೆ ಮೂಲಕ ಚಾಲಕನನ್ನು ಪತ್ತೆ ಹಚ್ಚಿದ ಎನ್‌ಐಎ ಅ ಧಿಕಾರಿಗಳು ಆತನ ವಿಚಾರಣೆ ಮಾಡಿದ್ದಾರೆ. ಆಟೋದಲ್ಲಿ ಕೂತಿದ್ದ ಆರೋಪಿ ಬಸ್‌ ಹೋಗುತ್ತಿದೆ ಬೇಗ ಹೋಗು ಎಂದು ಅವಸರ ಮಾಡಿ, ಮೋತಿ ವೃತ್ತದಲ್ಲಿ ಆಟೋದಿಂದ ಕೆಳಗಿಳಿದಿದ್ದಾನೆಂದು ಚಾಲಕ ವಿಚಾರಣೆ ವೇಳೆ ತನಿಖಾಧಿ ಕಾರಿಗಳಿಗೆ ತಿಳಿಸಿದ್ದಾನೆ.

ಆರೋಪಿಯ ವೇಷ ಹಾಕಿ ವಿಚಾರಣೆ:
ಕಳೆದ ಡಿಸೆಂಬರ್‌ 18ರಂದು ಎನ್‌ಐಎ ಅಧಿಕಾರಿಗಳು ಬಳ್ಳಾರಿ ಹಾಗೂ ಬೆಂಗಳೂರಲ್ಲಿ ಎಂಟು ಮಂದಿಯನ್ನು ಬಂಧಿಸಿ ಸಂಭಾವ್ಯ ಬಾಂಬ್‌ ಸ್ಫೋಟ ಸಂಚನ್ನು ವಿಫಲಗೊಳಿಸಿದ್ದರು. ಬಳ್ಳಾರಿ ಮೂಲದ ಬಾಂಬ್‌ ಬ್ಲಾಸ್ಟ್‌ ಪ್ಲ್ಯಾನ್‌ ಹಾಗೂ ಕೆಫೆ ಬ್ಲಾಸ್ಟ್‌ಗೂ ನಂಟಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಡಿ.18ರಂದು ಬಂಧಿಸಿದ್ದ ಎಲ್ಲ ಆರೋಪಿಗಳನ್ನು ಎನ್‌ಐಎ ಅ ಧಿಕಾರಿಗಳು ಪುನಃ ವಿಚಾರಣೆ ಮಾಡಿದ್ದಾರೆ. ಅಲ್ಲದೇ, ಡಿ.18 ರಂದು ಸೆರೆಸಿಕ್ಕ ಶಂಕಿತ ಉಗ್ರ ಮೊಹಮ್ಮದ್‌ ಮುನೀರುದ್ದೀನ್‌ ಆಪ್ತನನ್ನು ಸಹಪುನಃವಿಚಾರಣೆಗೊಳಪಡಿಸಿದ್ದಾರೆ.

Advertisement

ನಗರದ ಠಾಣೆಯೊಂದರಲ್ಲಿ ಮುನೀರ್‌ ಆಪ್ತನಿಗೆ ತಲೆ ಮೇಲೆ ಕ್ಯಾಪ್‌ ಇಟ್ಟು, ಮುಖಕ್ಕೆ ಮಾಸ್ಕ್, ಬೆನ್ನಿಗೆ ಬ್ಯಾಗ್‌ ಹಾಕಿ ಚಹರೆ ಗುರುತು ಕಂಡುಹಿಡಿಯುವ ಕೆಲಸ ಮಾಡಿದ್ದಾರೆ. ರಾಮೇಶ್ವರಂ ಕೆಫೆಯ ಸಿಸಿಟಿವಿಯಲ್ಲಿ ದಾಖಲಾದ ಆರೋಪಿಯ ಡ್ರೆಸ್‌ನ್ನು ಈತನಿಗೆ ತೊಡಿಸಿ ಹೋಲಿಕೆ ಮಾಡಿ ನೋಡಲಾಗಿದೆ. ಆದರೆ ಹೋಲಿಕೆಯಾಗದ ಹಿನ್ನೆಲೆಯಲ್ಲಿ ಮುನೀರ್‌ ಆಪ್ತನಿಂದ ಕೆಲ ಮಾಹಿತಿ ಪಡೆದು ವಾಪಸ್‌ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಡಿಸೆಂಬರ್‌ನಲ್ಲಿ ಬಂಧಿಸಲ್ಪಟ್ಟಿರುವ ಶಂಕಿತ ಎಂಟು ಉಗ್ರರ ಪೈಕಿ ಸುಲೇಮಾನ್‌, ಸೈಯದ್‌ ಸಮೀರ್‌, ಸೈಯದ್‌ ಸಮೀವುಲ್ಲಾ ಮತ್ತು ಮುನೀರುದ್ದೀನ್‌ ಬಳ್ಳಾರಿ ಮೂಲದವರು. ಸುಲೇಮಾನ್‌ ಮತ್ತು ಸೈಯದ್‌ ಸಮೀರನನ್ನು ಬಳ್ಳಾರಿಯಲ್ಲಿ ಬಂ ಧಿಸಿದ್ದು, ಉಳಿದ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿ ಸಲಾಗಿತ್ತು.

ಕರಾವಳಿಯಲ್ಲೂ ಕಟ್ಟೆಚ್ಚರ: ಬೋಟ್‌ಗಳ ಮೇಲೆ ನಿಗಾ  
ಮಂಗಳೂರು: ಬೆಂಗಳೂರಿನ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದ ಆರೋಪಿಯ ಪತ್ತೆಗೆ ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿದ್ದು, ಕರಾವಳಿ ತೀರದಲ್ಲಿ ಕರಾವಳಿ ಕಾವಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಬೋಟ್‌ಗಳು, ತೀರದ ಸನಿಹ ಇರುವ ಬಾಡಿಗೆ ಮನೆಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಶಂಕಿತ ಉಗ್ರನ ಪತ್ತೆಗೆ ಎನ್‌ಐಎ ಈಗಾಗಲೇ ಸಾರ್ವಜನಿಕರ ನೆರವು ಕೋರಿದೆ. ಅಲ್ಲದೆ ಎಲ್ಲ ಭದ್ರತ ಏಜೆನ್ಸಿಗಳು ವಿಶೇಷ ನಿಗಾ ಇರಿಸುವಂತೆ ಸೂಚಿಸಿದೆ.

ಶಂಕಿತ ಉಗ್ರ ಭಟ್ಕಳ ಅಥವಾ ಬೇರೆ ಕಡೆಗೆ ತೆರಳಿರುವ ಶಂಕೆ ಇರುವ ಹಿನ್ನೆಲೆಯಲ್ಲಿ, ಸಮುದ್ರ ಮಾರ್ಗದ ಮೂಲಕವೂ ಬೇರೆಡೆಗೆ ಹೋಗಬಹುದಾದ ಸಾಧ್ಯತೆಯೂ ಇರುವುದರಿಂದ ವಿಶೇಷ ನಿಗಾ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next