Advertisement

Rameshwaram Cafe blast: ಬಿಜೆಪಿ ಕಾರ್ಯಕರ್ತನ ವಿಚಾರಣೆ

11:54 PM Apr 05, 2024 | Shreeram Nayak |

ಶಿವಮೊಗ್ಗ/ತೀರ್ಥಹಳ್ಳಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳು, ಆರೋಪಿಗಳ ಜತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನೊಬ್ಬನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮುಸಾವೀರ್‌ ಹುಸೇನ್‌ ಶಾಜೀಬ್‌ನ ಪತ್ತೆಗೆ ಎನ್‌ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಆಯಾಮದಲ್ಲಿ ತನಿಖೆ ಮಾಡುತ್ತಿರುವ ಎನ್‌ಐಎ ತಂಡ ಕೆಲವು ದಿನಗಳ ಹಿಂದೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಬೆಟ್ಟಮಕ್ಕಿ, ಇಂದಿರಾ ನಗರ, ಆಜಾದ್‌ ರಸ್ತೆ, ಮಾರ್ಕೆಟ್‌ ರಸ್ತೆಯ ಹಲವೆಡೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿತ್ತು. ಮುಖ್ಯವಾಗಿ ಶಂಕಿತ ಉಗ್ರರು ಹಾಗೂ ಸಂಬಂಧಿಕರ ಮನೆ ಮತ್ತು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಮನೆ ಹಾಗೂ ಅಂಗಡಿ ಮೇಲೆ ದಾಳಿ ಮಾಡಿ ದಾಖಲೆ ಹಾಗೂ ಮಾಹಿತಿ ಸಂಗ್ರಹಿಸಿದ್ದರು. ಜತೆಗೆ ಕೆಲವು ಯುವಕರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಈ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿರುವ ಎನ್‌ಐಎ ಅಧಿ ಕಾರಿಗಳು ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.

ತೀರ್ಥಹಳ್ಳಿಯಲ್ಲಿ ಕಳೆದ ವಾರ ದಾಳಿ ಮಾಡಿದ್ದ ಅಧಿಕಾರಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತನ ಮೊಬೈಲ್‌ ಶಾಪ್‌ ಮೇಲೆ ದಾಳಿ ಮಾಡಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತನಿಗೂ ಹಲವು ವರ್ಷಗಳಿಂದ ಸ್ನೇಹ ಇತ್ತು. ಇವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿ ಕಳಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಸ್ಫೋಟ: ಆರೋಪಿಗಳ
ಕಾಲೇಜು ಸ್ನೇಹಿತರ ವಿಚಾರಣೆ
ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಸಾಕ್ಷ್ಯ ಸಂಗ್ರಹಕ್ಕಾಗಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತರು ಹಾಗೂ ಬಂಧಿತ ಆರೋಪಿಗಳ ಶಾಲಾ, ಕಾಲೇಜು ಸಹಪಾಠಿಗಳು, ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಪ್ರಕರಣದ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ತಲೆಮರೆಸಿಕೊಂಡಿರುವ ಆರೋಪಿಗಳು ಹಾಗೂ ಬಂಧಿತ ಆರೋಪಿಗಳ ಕಾಲೇಜು, ಶಾಲಾ ಸ್ನೇಹಿತರು ಸಹಿತ ಅವರ ಎಲ್ಲ ಪರಿಚಯಸ್ಥರನ್ನು ಕರೆಸಿ ಎನ್‌ಐಎ ವಿಚಾರಣೆ ನಡೆಸುತ್ತಿದೆ. ಇದು ಭಯೋತ್ಪಾದಕ ಘಟನೆ ಆಗಿರುವುದರಿಂದ ವಿಚಾರಣೆ ಮಾಡುವವರ ವಿವರಗಳನ್ನು ಬಹಿರಂಗಪಡಿಸಿದರೆ ತನಿಖೆಗೆ ಅಡ್ಡಿಯಾಗಲಿದೆ. ಸಾಕ್ಷ್ಯಗಳ ಗುರುತನ್ನು ಬಹಿರಂಗಪಡಿಸಿದರೆ ವೈಯಕ್ತಿಕವಾಗಿ ಅವರಿಗೂ ಅಪಾಯ ಎದುರಾಗಬಹುದು. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರವನ್ನು ಎನ್‌ಐಎ ಕೋರಿದೆ ಎಂದು ಎನ್‌ಐಎ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಐಇಡಿ ತಂದಿದ್ದ ಮುಸಾವೀರ್‌
ತೀರ್ಥಹಳ್ಳಿಯ ನಿವಾಸಿ ಮುಸಾವೀರ್‌ ಹುಸೇನ್‌ ಶಾಜಿಬ್‌ ರಾಮೇಶ್ವರಂ ಕೆಫೆಗೆ ಐಇಡಿ ತಂದಿದ್ದ. ಶಿವಮೊಗ್ಗ ತೀರ್ಥಹಳ್ಳಿಯ ನಿವಾಸಿಯಾಗಿರುವ ಮತ್ತೂಬ್ಬ ಆರೋಪಿ ಅಬ್ದುಲ್‌ ಮತೀನ್‌ ತಾಹಾ ಇದಕ್ಕೆ ರೂಪುರೇಷೆ ಸಿದ್ಧಪಡಿಸಿದ್ದ. ಈ ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡುವುದಾಗಿ ಮಾ.29ರಂದೇ ತಿಳಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳಿಗೆ ಕೃತ್ಯ ಎಸಗಲು ಸಹಕಾರ ನೀಡಿದ್ದ ಚಿಕ್ಕಮಗಳೂರಿನ ಮುಜಾಮಿಲ್‌ ಷರೀಫ್ ಎಂಬಾತನನ್ನು ಮಾ.26ರಂದು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next