Advertisement

Rameshwaram Cafe Case; ಬಾಂಬ್‌ ಸ್ಫೋಟಿಸಿದ್ದು ಕರ್ನಾಟಕ ಮೂಲದವನು?

10:04 PM Mar 12, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಶಂಕಿತ ಕರ್ನಾಟಕ ಮೂಲದವನು ಎಂಬುದು ಗೊತ್ತಾಗಿದ್ದು, ಸೂಕ್ತ ತರಬೇತಿ ಪಡೆದೇ ಬಾಂಬ್‌ ಸ್ಫೋಟಿಸಿರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಗೆ ತನಿಖೆಯಲ್ಲಿ ಗೊತ್ತಾಗಿದೆ.

Advertisement

ಶಂಕಿತನಿಗೆ ಬೆಂಗಳೂರು ಪರಿಚಯ ಚೆನ್ನಾಗಿ ಇತ್ತು. ಆತ ಯಾವ ಸಂಘಟನೆಗೆ ಸೇರಿದವನು ಎಂಬುದೂ ಎನ್‌ಐಎಗೆ ಗೊತ್ತಾಗಿದೆ. ಬಾಂಬ್‌ ಸ್ಫೋಟಗೊಂಡು ರಾಮೇಶ್ವರಂ ಕೆಫೆಗೆ ಗ್ರಾಹಕರು ಬರುತ್ತಿದ್ದರೂ ನಿಗೂಢವಾಗಿ ನಾಪತ್ತೆಯಾಗಿರುವ ಶಂಕಿತನ ಪತ್ತೆ ಕಾರ್ಯವನ್ನು ಎನ್‌ಐಎ ಮುಂದುವರಿಸಿದೆ.

ಶಂಕಿತನ ಹಿನ್ನೆಲೆ ಕೆದಕುತ್ತಾ ಹೋದಾಗ ಆತ ಶಿವನ ಸಮುದ್ರ, ಕೃಷ್ಣಗಿರಿಯ ಅರಣ್ಯ ಪ್ರದೇಶ ಹಾಗೂ ನಿರ್ಜನ ಪ್ರದೇಶದಲ್ಲಿ ಬಾಂಬ್‌ ಸ್ಫೋಟಿಸುವ ಬಗ್ಗೆ ತರಬೇತಿ ಪಡೆದಿದ್ದ ಎನ್ನಲಾಗುತ್ತಿದೆ. ಟ್ರಯಲ್‌ ಬಾಂಬ್‌ ಬ್ಲಾಸ್ಟ್‌ ಮಾಡಿರುವುದು, ಸರ್ವೈವಲ್‌ ಕ್ಯಾಂಪ್‌ ನಡೆಸಿರುವ ಸುಳಿವು ಸಿಕ್ಕಿದೆ.

ಶಂಕಿತ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು ಹೇಗೆ ?
ಇನ್ನು ಶಂಕಿತ ಬಾಂಬ್‌ ಸ್ಫೋಟಕ್ಕೂ ಮುನ್ನ ಬೆಂಗಳೂರಿಗೆ ಬಂದಿರುವ ಪ್ರಯಾಣದ ಹಿಸ್ಟರಿಯನ್ನು ಎನ್‌ಐಎ ಅಧಿಕಾರಿಗಳು ಕೆದಕಿದ್ದಾರೆ. ಆ ವೇಳೆ ಶಂಕಿತ ಚೆನ್ನೈನಿಂದ ತಿರುಪತಿಗೆ ರೈಲಿನಲ್ಲಿ ತೆರಳಿದ್ದ. ಅಲ್ಲಿಂದ ಬಸ್‌ ಮೂಲಕ ಬಾಂಬ್‌ ಸ್ಫೋಟಿಸಿದ ದಿನವಾದ ಶುಕ್ರವಾರವೇ ಬೆಂಗಳೂರಿನ ಕೆ.ಆರ್‌.ಪುರ ಬಸ್‌ ನಿಲ್ದಾಣದಲ್ಲಿ ಬಂದಿಳಿದಿದ್ದ. ನಂತರ ಮಹದೇವಪುರಕ್ಕೆ ಬಂದು ಬಸ್‌ ಬದಲಾವಣೆ ಮಾಡಿದ್ದ. ಅಲ್ಲಿಂದ ಬ್ರೂಕ್‌ ಫೀಲ್ಡ್ ಕಡೆಗೆ ಸಾಗುವ ವೋಲ್ವೋ ಬಸ್‌ ಏರಿ ರಾಮೇಶ್ವರ ಕೆಫೆಗೆ ಎಂಟ್ರಿ ಕೊಟ್ಟಿರುವ ಇಂಚಿಂಚೂ ಮಾಹಿತಿಯು ಎನ್‌ಐಎ ಕೈ ಸೇರಿದೆ. ತನಿಖಾಧಿಕಾರಿಗಳಿಗೆ ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಶಂಕಿತನು ಸಂಚಾರಕ್ಕೆ ನೇರ ಮಾರ್ಗಗಳನ್ನು ಬಳಸದೇ ವಿವಿಧೆಡೆ ಸುತ್ತು ಬಳಸಿ ಬಂದಿದ್ದ. ಅದೇ ರೀತಿ ಕೃತ್ಯ ಎಸಗಿದ ನಂತರ ನೂರಾರು ಕಡೆ ಸುತ್ತಾಡಿಕೊಂಡು ನಿಗೂಢ ಸ್ಥಳಕ್ಕೆ ತಲುಪಿರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಊಹಾಪೋಹ ಹರಿದಾಡುತ್ತಿವೆ: ಗೃಹ ಸಚಿವ ಪರಂ
ಶಂಕಿತ ಬಾಂಬರ್‌ ಕರ್ನಾಟಕದವನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಇವುಗಳೆಲ್ಲ ಊಹಾಪೋಹಗಳು ಎಂದು ಹೇಳಿದ್ದಾರೆ. ಶಂಕಿತ ಕರ್ನಾಟಕದವನು, ಮಲೆನಾಡಿನವನು ಎಂಬೆಲ್ಲ ಊಹಾಪೋಹ ಹರಿದಾಡುತ್ತಿವೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಸಂಗತಿ ಬೆಳಕಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next