Advertisement

Rameshwaram Cafe ಬಾಂಬ್‌ ಸ್ಫೋಟ: ಎಲ್ಲ ಆಯಾಮಗಳಿಂದಲೂ ತನಿಖೆ

11:51 PM Mar 01, 2024 | Team Udayavani |

ಬೆಂಗಳೂರು/ಕುಣಿಗಲ್: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ಶುಕ್ರವಾರ ರಾತ್ರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದಕ್ಕೂ ಮುನ್ನ ಕುಣಿಗಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆಗೆ ಎಫ್‌ಎಸ್‌ಎಲ್‌ ಬಾಂಬ್‌ ದಳ ಕೂಡ ಹೋಗಿದೆ. ಸ್ಥಳದಿಂದ ಮಾದರಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಘಟನೆ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುವುದು. ಕುರುಹು ಆಧರಿಸಿ ತನಿಖೆ ಮಾಡಲಾಗುತ್ತದೆ. ಐಇಡಿ ಎನ್ನಲಾಗುತ್ತಿದೆಯಾದರೂ ಖಚಿತತೆ ಇಲ್ಲ. ಬ್ಯಾಗ್‌ ಇತ್ತು ಎನ್ನುತ್ತಿದ್ದಾರೆ. ಆದರೆ ನಿರ್ದಿಷ್ಟ ಮಾಹಿತಿ ಇಲಾಖೆಯಿಂದ ಬರಬೇಕಾಗಿದೆ. ಇಂತಹ ವಿಚಾರದಲ್ಲಿ ಊಹಿಸಿ ಮಾತನಾಡುವುದು ಸರಿಯಲ್ಲ ಎಂದರು.

ಉಗ್ರರ ಕೃತ್ಯ ಎಂಬುದು ತಿಳಿದಿಲ್ಲ: ಸಿಎಂ
ಸ್ಫೋಟ ಸಂಬಂಧಿಸಿ ಎಲ್ಲ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದ್ದು, ಸಿಸಿ ಕೆಮರಾ ತುಣುಕುಗಳನ್ನು ಪರಿಶೀಲಿಸಲಾಗಿದೆ.

Advertisement

ಹೊಟೇಲ್‌ನಲ್ಲಿ ಟೋಕನ್‌ ಪಡೆಯುವ ಸಂದರ್ಭದಲ್ಲಿ ಬ್ಯಾಗ್‌ ಇಟ್ಟಿರುವುದು ಕಂಡು ಬಂದಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಇದು ಉಗ್ರರ ಕೃತ್ಯ ಎಂಬುದು ತಿಳಿದಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದು, ಯಾರು, ಏನು ಎಂಬ ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ಮಾತನಾಡುತ್ತೇನೆ. ಆದರೆ ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡಬಾರದು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಹತ್ತು ಸೆಕೆಂಡ್‌ ಅಂತರದಲ್ಲಿ 2 ಬಾರಿ ಸ್ಫೋಟ
ಹತ್ತು ಸೆಕೆಂಡ್‌ ಅಂತರದಲ್ಲಿ ಎರಡು ಬಾರಿ ಸ್ಫೋಟವಾಗಿದೆ ಎಂದು ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ದಿವ್ಯಾ ಖಚಿತಪಡಿಸಿದ್ದಾರೆ. ರಾಮೇಶ್ವರಂ ಕೆಫೆಯ ಕೈತೊಳೆಯುವ ಸ್ಥಳ, ಕಿಚನ್‌ ಹೊರಗಡೆ ಪ್ಲೇಟ್‌ಗಳನ್ನು ಇಡುವ ಸ್ಥಳದಲ್ಲಿ ಸ್ಫೋಟವಾಗಿದೆ. ಹೊರಗಿನಿಂದ ಅಗಂತುಕನೊಬ್ಬ ಬ್ಯಾಗ್‌ ತಂದಿಟ್ಟ ಬಳಿಕ ಸ್ಫೋಟವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಎರಡು ಬಾರಿ ಅನುಮಾನಾಸ್ಪದ ಬ್ಯಾಗ್‌ ತಂದಿಟ್ಟು ಹೋಗಿದ್ದರು. ಒಂದು ಬ್ಯಾಗ್‌ ತೆಗೆದು ನೋಡಿದಾಗ ಮಡಕೆ ಪತ್ತೆಯಾಗಿತ್ತು. ಮತ್ತೂಂದು ಬ್ಯಾಗನ್ನು ನಿರ್ಜನ ಪ್ರದೇಶದಲ್ಲಿರಿಸಿದ್ದರು. ಆ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಗ್ರಾಹಕನ ಸೋಗಿನಲ್ಲಿ ಬಾಂಬ್‌ ಇಟ್ಟ!
ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಕ್ಯಾಶಿಯರ್‌ ಬಳಿ ಟೋಕನ್‌ ಪಡೆದು ಅಲ್ಲಿ ತಿಂಡಿ ತಿನ್ನುತ್ತಾನೆ. ಅನಂತರ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರುವ ಬ್ಯಾಗ್‌ ಅನ್ನು ಕಸದ ತೊಟ್ಟಿ ಬಳಿ ಇಟ್ಟಿರುವುದು ಅಲ್ಲಿನ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಸ್ಫೋಟದ ದೃಶ್ಯ ಹಾಗೂ ಜನ ಬೆಚ್ಚಿ ಬಿದ್ದು ಓಡಿರುವುದು ಕೂಡ ಕೆಮರಾದಲ್ಲಿ ದಾಖಲಾಗಿದೆ.

ರಾಜಧಾನಿಗೆ ಐಸಿಸ್‌ ಕರಿನೆರಳು ?
ಐಇಡಿ ಸಾಧನವನ್ನು ಸಾಮಾನ್ಯವಾಗಿ ಐಸಿಸ್‌ ಉಗ್ರರು ವಿಧ್ವಂಸಕ ಕೃತ್ಯ ಎಸಗಲು ಬಳಸುತ್ತಾರೆ. ಐಸಿಸ್‌ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಈ ಹಿಂದೆಯೂ ಐಇಡಿ ಬಳಸಲಾಗಿತ್ತು. ರಾಮೇ ಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್‌ ಸ್ಫೋಟವನ್ನು ಗಮನಿಸಿದಾಗ ರಾಜ್ಯ ರಾಜಧಾನಿಗೆ ಐಸಿಸ್‌ ಕರಿನೆರಳು ಬಿದ್ದಿರುವ ಅನುಮಾನ ವ್ಯಕ್ತವಾಗಿದೆ. ಮತ್ತೂಂದೆಡೆ ಬ್ಯಾಗಿನ ಒಳಗೆ ಟೈಮರ್‌ ಅಳವಡಿಸಿ ಸ್ಫೋಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸ್ಫೋಟದಲ್ಲಿ ಗಾಯಗೊಂಡವರು
ಖಾಸಗಿ ಕಂಪೆನಿ ಉದ್ಯೋಗಿಗಳಾದ ಮೋನಿ (30), ನವ್ಯಾ (25), ಶ್ರೀನಿವಾಸ್‌ (67), ನಾಗಶ್ರೀ (25), ಬಾಲಮುರುಳಿ (34), ಶಂಕರ್‌ (41), ಫಾರೂಕ್‌ ಹುಸಾಯ…, ದೀಪಾಂಶು ಮತ್ತು ಸ್ವರ್ಣ ನಾರಾಯಣಪ್ಪ.

ಮಧ್ಯಾಹ್ನ 1 ಗಂಟೆಗೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡಿದೆ. 9 ಮಂದಿ ಗಾಯಗೊಂಡಿದ್ದಾರೆ. ಯಾರಿಗೂ ಗಂಭೀರವಾಗಿ ಗಾಯಗಳಾಗಲಿಲ್ಲ. ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬಂದಿ ಪರಿಶೀಲಿಸುತ್ತಿದ್ದಾರೆ.
-ಅಲೋಕ್‌ ಮೋಹನ್‌,
ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next