“ನಾವು ಇಷ್ಟಪಟ್ಟ ಕೆಲಸವನ್ನು, ಇಷ್ಟಪಡುವ ಜನರ ಜೊತೆ, ಇಷ್ಟಪಡುವ ಜಾಗದಲ್ಲಿ, ಇಷ್ಟಪಟ್ಟು ಮಾಡುವುದೇ ಯಶಸ್ಸು. ನಾವು ಇಷ್ಟಪಟ್ಟು ಮಾಡಿದ ಕೆಲಸವನ್ನು ಜನರೂ ಇಷ್ಟಪಟ್ಟರೆ ಅದು ದೊಡ್ಡ ಯಶಸ್ಸು…’ ಹೀಗೆ ಹೇಳಿದ್ದು ರಮೇಶ್ ಅರವಿಂದ್. ಅವರು ಹೀಗೆ ಹೇಳ್ಳೋಕೆ ಕಾರಣ, “ಶಿವಾಜಿ ಸುರತ್ಕಲ್’ ಚಿತ್ರ. ಹೌದು, ರಮೇಶ್ ನಟನೆಯ 101ನೇ ಚಿತ್ರ “ಶಿವಾಜಿ ಸುರತ್ಕಲ್’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನದ ಜೊತೆ ಪ್ರೇಕ್ಷಕರು, ವಿಮರ್ಶಕರಿಂದ ಮೆಚ್ಚುಗೆ ಪಡೆದು 2ನೇ ವಾರದತ್ತ ಮುನ್ನಡೆಯುತ್ತಿದೆ.
ಈ ಕುರಿತು ಸಂತಸ ಹಂಚಿಕೊಂಡ ರಮೇಶ್, ಯಶಸ್ಸನ್ನು ಹೇಳಿಕೊಂಡ ಪರಿ ಹೀಗಿತ್ತು. “ಇತ್ತೀಚಿನ ವರ್ಷಗಳಲ್ಲಿ ಕೃತಕವಲ್ಲದ ಒಂದು ಸಕ್ಸಸ್ ಬರಬೇಕು ಎಂದುಕೊಂಡಿದ್ದೆ. ಅದು ಈಗ “ಶಿವಾಜಿ ಸುರತ್ಕಲ್’ ಮೂಲಕ ಈಡೇರಿದೆ. ಥಿಯೇಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಡಿಯನ್ಸ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದೆ ಇದಕ್ಕಿಂತಲೂ ಒಳ್ಳೆಯ ಸಿನಿಮಾ ಮಾಡಬೇಕೆಂಬ ಜವಬ್ದಾರಿ ಜಾಸ್ತಿ ಆಗಿದೆ. ಇನ್ನು ಸಿನಿಮಾವನ್ನು ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೆಚ್ಚಿಕೊಂಡಿದ್ದು ಖುಷಿಯಾಯ್ತು. ಟಿಕ್‌ಟಾಕ್‌ನಿಂದಲೂ ಸಿನಿಮಾಕ್ಕೆ ಒಂದಷ್ಟು ಪ್ರಚಾರ ಸಿಕ್ಕಿದೆ.
ಮುಂದೇ ಇಂಥ ಇನ್ನಷ್ಟು ಪಾತ್ರಗಳು ಬಂದರೂ ಬರಬಹುದು’ ಎನ್ನುವುದು ರಮೇಶ್ ಮಾತು. ಮೊದಲ ವಾರ ಸುಮಾರು 80 ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್’, 2ನೇ ವಾರದಿಂದ ಸುಮಾರು 120 ಕೇಂದ್ರಗಳಲ್ಲಿ ಪ್ರದರ್ಶನವಾಗುತ್ತಿದೆ. ಪರಭಾಷೆ ಚಿತ್ರಮಂದಿರವೆಂದು ಹೇಳುತ್ತಿದ್ದ ಊರ್ವಶಿ ಟಾಕೀಸ್‌ನಲ್ಲಿಯೂ ಚಿತ್ರ ಶೇ.80ರಷ್ಟು ಹೌಸ್‌ಫುಲ್ ಆಗಿ ಪ್ರದರ್ಶನವಾಗುತ್ತಿದೆ. ಆಸ್ಟ್ರೇಲಿಯಾ, ಯುಕೆಯಲ್ಲೂ 30 ಸೆಂಟರ್‌ಗಳಲ್ಲಿ ಬಿಡುಗಡೆಗೊಂಡಿದೆ ಎಂಬುದು ಚಿತ್ರತಂಡದ ಹೇಳಿಕೆ.
ಖುಷಿಯಲ್ಲಿರುವ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು, “ಈಗಾಗಲೇ “ಬದ್ಮಾಶ್’ ಚಿತ್ರದ ನಿರ್ಮಾಪಕರು ಯಎಸ್ ಜನರಿಗೆ ತೋರಿಸಲು ಹಕ್ಕು ಪಡೆದಿದ್ದಾರೆ. ಬಾಲಿವುಡ್ ದೊಡ್ಡ ಸಂಸ್ಥೆಯೊಂದು ರಿಮೇಕ್ ಮಾಡಲು ಉತ್ಸುಕವಾಗಿದೆ. ಇದರ ಜೊತೆಗೆ ತೆಲುಗು, ತಮಿಳಿನಿಂದಲೂ ಈ ಚಿತ್ರ ರಿಮೇಕ್ ಮಾಡುವ ಬಗ್ಗೆ ಕರೆ ಬಂದಿದೆ. ಬಹುಶಃ ಅಲ್ಲಿಯೂ ನಿರ್ದೇಶನ ಮಾಡಬಹುದೇನೋ ಗೊತ್ತಿಲ್ಲ. ಸಣ್ಣ ಸಣ್ಣ ಪಾತ್ರ ಗುರುತಿಸಿ ಕೆಲಸ ಮಾಡಿದ್ದು ಸಾರ್ಥಕವಾಯಿತು’ ಎಂಬುದು ಅವರ ಮಾತು. ನಿರ್ಮಾಪಕ ಅನೂಪ್ ಗೌಡ, “ಇದೇ ರೀತಿ ಮುಂದೆಯೂ ಸಹಕಾರ ಇರಲಿ’ ಎಂಬ ಮನವಿ ಇಟ್ಟರು. ಅಂದು ಬಂದಿದ್ದ ಚಿತ್ರತಂಡದವರು ಸಿನಿಮಾಗೆ ಸಿಗುತ್ತಿರುವ ಮೆಚ್ಚುಗೆ ಕುರಿತು ಮಾತನಾಡಿದರು.