ವಿಜಯಪುರ: ರಾಜ್ಯಪಾಲರು ಪಾಲ್ಗೊಂಡ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದ ಕುರಿತು ತಮಗೆ ಮಾಹಿತಿ ನೀಡದೇ ಅಧಿಕಾರಿಗಳು ಶಿಷ್ಠಾಚಾರ ಉಲ್ಲಂಘಿಸಿದ್ದಾರೆ, ಹೀಗಾಗಿ ಈ ಕುರಿತು ಸರ್ಕಾರ, ರಾಜ್ಯಪಾಲರು ಹಾಗೂ ಲೋಕಸಭೆ ಸ್ಪೀಕರ್ ಗೆ ದೂರು ನೀಡಲು ನಿರ್ಧರಿದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಹೇಳಿದ್ದಾರೆ.
ಹೇಳಿಕೆ ನೀಡಿರುವ ಸಂಸದ ಜಿಗಜಿಣಗಿ, ಸೋಮವಾರ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು ವಿಜಯಪುರ ತಲುಪುತ್ತಿದ್ದಂತೆ ನನಗೆ ದೂರವಾಣಿ ಕರೆ ಮಾಡಿ, ನಾನು ನಿಮ್ಮೂರಲ್ಲಿ ಇದ್ದೇನೆ ಎಂದು ತಿಳಿಸಿದರು. ಆಗಲೇ ರಾಜ್ಯಪಾಲರ ವಿಜಯಪುರ ಕಾರ್ಯಕ್ರಮ, ಮಹಿಳಾ ವಿಶ್ವವಿದ್ಯಾಲಯ ಹಮ್ಮಿಕೊಂಡ ಘಟಿಕೋತ್ಸವ ಕುರಿತು ನನಗೆ ತಿಳಿಯಿತು. ವಿಶ್ವವಿದ್ಯಾಲಯ ರಾಜ್ಯಪಾಲರನ್ನು ಆಮಂತ್ರಿಸಿದ್ದರಿಂದ ನನ್ನನ್ನು ಆಮಂತ್ರಿಸುವುದು ಸರಕಾರದ ಶಿಷ್ಠಾಚಾರ. ಕುಲಪತಿಗಳು ಈ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಒಂದೊಮ್ಮೆ ತಡವಾಗಿದ್ದರೆ ದೂರವಾಣಿ ಕರೆ ಮಾಡಿಯಾದರೂ ರಾಜ್ಯಪಾಲರ ಪ್ರವಾಸದ ಕಾರ್ಯಕ್ರಮದ ಕುರಿತು ತಿಳಿಸಬಹುದಾಗಿತ್ತು. ಆದರೆ ರಾಜ್ಯಪಾಲರ ವಿಜಯಪುರ ಭೇಟಿಯ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲದ ಕಾರಣ ನಾನು ದೆಹಲಿಗೆ ಬಂದಿದ್ದೇನೆ. ಇಲ್ಲಿರುವಾಗ ರಾಜ್ಯಪಾಲರು ಖುದ್ದು ನನ್ನನ್ನು ಸಂಪರ್ಕಿಸಿ ನಿಮ್ಮ ನಗರಕ್ಕೆ ಬಂದಿದ್ದೇನೆ ನೀವು ಎಲ್ಲಿ ಎಂದು ಪ್ರಶ್ನಿಸಿದಾಗಲೆ ನನಗೆ ಎಲ್ಲ ವಿಷಯ ತಿಳಿಯಿತು,ನನಗೆ ಮುಜುಗುರವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯ ಶಿಷ್ಟಾಚಾರ ಉಲ್ಲಂಘನೆ ಗಂಭೀರ ಲೋಪವಾಗಿದ್ದು, ಈ ಕುರಿತು ಸರಕಾರ, ರಾಜ್ಯಪಾಲ ಮತ್ತು ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದು ದೂರು ನೀಡುವುದಾಗಿ ತಿಳಿಸಿದ್ದಾರೆ.
ಓರ್ವ ಸಂಸದನಾಗಿ ನನಗೆ ಅನೇಕ ಜವಾಬ್ದಾರಿಗಳಿವೆ. ಶಿಷ್ಠಾಚಾರ ಪ್ರಕಾರ ನನಗೆ ಆಮಂತ್ರಿಸುವುದು ವಿಶ್ವವಿದ್ಯಾಲಯ ಕರ್ತವ್ಯ. ವಿಶ್ವವಿದ್ಯಾಲಯದ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮರೆತಿರುವುದು ಖಂಡನೀಯ ಎಂದು ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.