ಬೆಂಗಳೂರು: ಧಾರವಾಡದ ಸರ್ವೋದಯ ಶಿಕ್ಷಣ ಟ್ರಸ್ಟ್‌ನ್ ಸಿಬ್ಬಂದಿ ನೇಮಕದಲ್ಲಿ ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಮಾಡಿರುವ ಅಕ್ರಮಗಳ ಕುರಿತು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನೀಡಿರುವ ವರದಿ ಅನ್ವಯ ಕ್ರಮ ಕೈಗೊಳ್ಳುವಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ನಾಲ್ಕು ಪ್ರಮುಖ ವಿಷಯಗಳ ಕುರಿತು ಅಕ್ಟೋಬರ್ 24 ರಂದು ಪತ್ರ ಬರೆದಿರುವ ರಮೇಶ್ ಜಾರಕಿಹೊಳಿ, ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಆಡಳಿತವನ್ನು ಧಾರವಾಡ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಶ್ರೀ ಮಠಕ್ಕೆ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಅಲ್ಲದೇ ಎಸ್ಸಿ ಎಸ್ಟಿ ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬೇಕು. ಹೊಸ ಕಾಯ್ದೆ ರಾಷ್ಟ್ರಪತಿಗಳಿಂದ ಅಂಕಿತ ಪಡೆದಿರುವುದರಿಂದ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿ ಪಡೆದವರಿಗೆ ಮುಂಬಡ್ತಿ ನೀಡಲು ಯಾವುದೇ ನ್ಯಾಯಾಲಯದ ಆದೇಶಗಳು ಅನ್ವಯ ಆಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪರಿಶಿಷ್ಠ ಪಂಗಡದ ಜನಸಂಖ್ಯೆ ಆಧಾರದ ಮೇಲೆ ಈಗಿರುವ ಶೇ. 3% ಮೀಸಲಾತಿ ಪ್ರಮಾಣವನ್ನು ಶೇ. 7.5% ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಹಾಗೂ ಪರಿಶಿಷ್ಠ ಪಂಗಡಕ್ಕೆ ಒಳಪಡದ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಎಸ್ಟಿ ಸಮುದಾಯದ ಮೀಸಲಾತಿ ಪಡೆಯುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ರಮೇಶ್ ಜಾರಕಿಹೊಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.