ಬೆಂಗಳೂರು: “ರಮೇಶ ಜಾರಕಿಹೊಳಿ ಈಗ ಏಕಾಂಗಿಯಾಗಿದ್ದಾರೆ. ಅವರ ಬಳಿ ಮೊದಲಿದ್ದಷ್ಟು ಶಾಸಕರ ಸಂಖ್ಯಾಬಲ ಇಲ್ಲ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ರಮೇಶಗೆ ಶಾಸಕರ ಬೆಂಬಲವಿಲ್ಲ. ಹೀಗಾಗಿ, ಅವರು ಏಕಾಂಗಿ. ಇಬ್ಬರು-ಮೂವರು ಶಾಸಕರು ರಾಜೀನಾಮೆ ಕೊಟ್ಟರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದು.
ಸರ್ಕಾರ ರಚನೆಯಾದಾಗಿನಿಂದ ಪತನಗೊಳಿಸುವ ಪ್ರಯತ್ನ ನಡೆದಿದ್ದು, ಅವರ ಜತೆ ರಮೇಶ ಸೇರಿಕೊಂಡಿದ್ದಾರೆ. ಆದರೆ, ಅದು ಯಶಸ್ವಿಯಾಗಿಲ್ಲ, ಮುಂದೆಯೂ ಯಶಸ್ವಿಯಾಗಲ್ಲ. ರಮೇಶ ಜಾರಕಿಹೊಳಿ ಐದು ಬಾರಿ ಶಾಸಕರಾಗಿದ್ದಾರೆ. ಹೀಗಾಗಿ, ಅವರಿಗೆ ವಿಚಾರ ಮಾಡುವ ಶಕ್ತಿಯಿದೆ’ ಎಂದರು.
ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟಿದ್ದರಿಂದ ನನಗೆ ಅಸಮಾಧಾನವಿಲ್ಲ. ಇಬ್ಬರೂ ಸೇರಿಯೇ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಿರಿತನದ ಆಧಾರದಲ್ಲಿ ಅವರಿಗೆ ಉಸ್ತುವಾರಿ ನೀಡಲಾಗಿದೆ. ಈ ವಿಚಾರದಲ್ಲಿ ಬೇಸರಗೊಳ್ಳುವ ಮಾತೇ ಇಲ್ಲ.
-ಸತೀಶ ಜಾರಕಿಹೊಳಿ, ಸಚಿವ