Advertisement
ಯಾವುದೇ ಘಟನೆಗಳಾದರೂ, ಅದರ ಕುರಿತು ರಮೇಶ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿಯಾಗುತ್ತದೆ. ಸುದ್ದಿಯಾಗುತ್ತದೆಯೇ ಹೊರತು, ಆ ಸಿನಿಮಾಗಳು ಆಗಿಲ್ಲ. ರಾಜೀವ್ ಗಾಂಧಿ ಅವರ ಹತ್ಯೆಯ ಕುರಿತಾಗಿ ರಮೇಶ್, “ಆನ್ಪೋಟ’ ಎಂಬ ಚಿತ್ರ ಮಾಡುವುದಾಗಿ ಹೇಳಿದ್ದರು. ಅವರು ಹೇಳಿದಂತೆ ಆಗಿದ್ದರೆ, ಚಿತ್ರ ಮೇನಲ್ಲೇ ಬಿಡುಗಡೆಯಾಗಬೇಕಿತ್ತು. ಬಿಡುಗಡೆಯಾಗುವುದಿರಲಿ, ಚಿತ್ರ ಶುರುವೇ ಆಗಿಲ್ಲ. ಆಗಾಗ ಚಿತ್ರದ ಬಗ್ಗೆ ಸುದ್ದಿಯಾಗುವುದು ಬಿಟ್ಟರೆ, ಬೇರೇನೂ ಆಗಿಲ್ಲ. ಆ ಚಿತ್ರ ಶುರುವಾಗುವ ಮುನ್ನವೇಅವರು “ರೂಪಾ ವರ್ಸಸ್ ಶಶಿಕಲಾ’, “ಹೂ ಕಿಲ್ಡ್ ಗೌರಿ’ ಎಂಬ ಚಿತ್ರಗಳನ್ನು ಮಾಡುತ್ತಾರೆ ಎಂಬ ಸುದ್ದಿ ಇದೆ. ಈ ಚಿತ್ರಗಳು ಯಾವಾಗ ಶುರುವಾಗುತ್ತದೋ ಗೊತ್ತಿಲ್ಲ. ಆದರೆ, ರಮೇಶ್ ಸುದ್ದಿಯಲ್ಲಿರುವುದಕ್ಕೆಂದೇ ಈ ತರಹದ ಚಿತ್ರಗಳನ್ನು ಮಾಡುವುದಾಗಿ ಘೋಷಿಸುತ್ತಾರೆ ಎಂಬ ಆರೋಪವೊಂದು ಅವರ ಮೇಲಿದೆ. ಈ ಆರೋಪವನ್ನು ರಮೇಶ್ ತಳ್ಳಿಹಾಕುತ್ತಾರೆ.
ಯಾವುದೇ ಚಿತ್ರವನ್ನು ಸಾಕ್ಷ್ಯವಿಲ್ಲದೆ, ರೀಸರ್ಚ್ ಇಲ್ಲದೆ ಮಾಡಿಲ್ಲ. ಅದೇ ಕಾರಣಕ್ಕೆ ಅಂತಹ ಹಾಟ್ ಟಾಪಿಕ್‌ಗಳನ್ನು ತೆಗೆದುಕೊಂಡರೂ ವಿವಾದಕ್ಕೆ ಸಿಲುಕಿಲ್ಲ. ಸಂಶೋಧನೆ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಜನರನ್ನು ಭೇಟಿ ಮಾಡಬೇಕಾಗುತ್ತದೆ, ಹಲವು ಮಾಹಿತಿಗಳನ್ನು ತೆಗೆಯಬೇಕಾ ಗುತ್ತದೆ, ಇದೆಲ್ಲದರಿಂದ ಸಾಕಷ್ಟು ಸಮಯ ಆಗುತ್ತದೆ. ಈಗಾಗಲೇ “ಆಸ್ಫೋಟ’ ಸ್ಕ್ರಿಪ್ಟ್ ರೆಡಿಯಾಗಿದೆ. ರಾಣಾ ದಗ್ಗುಬಾಟಿ ಎಸ್ ಎನ್ನುತ್ತಿದ್ದಂತೆಯೇ ಚಿತ್ರ ಶುರು ಮಾಡಬಹುದು. ಅವರಿಗಾಗಿ ಕಾಯುತ್ತಲೇ, ಇನ್ನಷ್ಟು ಏನಾದರೂ ಸಿಗಬಹುದಾ ಅಂತ ನೋಡುತ್ತೀನಿ. ಒಂದೂವರೆ ವರ್ಷಗಳ ಹಿಂದೆಯೇ ನಾನು ಈ ಸಿನಿಮಾ ಮಾಡಿದ್ದರೆ, ಒಂದು ದೊಡ್ಡ ವಿಷಯವನ್ನೇ ಬಿಟ್ಟುಬಿಡುತ್ತಿದ್ದೆ. ಆದರೆ, ಸ್ವಲ್ಪ ತಡವಾಗಿ ತನಿಖೆ ಮಾಡಿದ್ದರಿಂದ, ಯಾರಿಗೂ ಗೊತ್ತಿಲ್ಲದ ಒಂದು ಅದ್ಭುತ ವಿಷಯ ನನಗೆ ಸಿಕ್ಕಿದೆ ಮತ್ತು ಆ ವಿಷಯವನ್ನು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೀನಿ’ ಎನ್ನುತ್ತಾರೆ ಅವರು.
Related Articles
Advertisement
ಇನ್ನು ರಾಜೀವ್ ಹತ್ಯೆ ಆದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಗೊತ್ತಿದೆ. ಹೀಗಾಗಿ ಬಿಡುವುದಕ್ಕೆ ಸಾಧ್ಯವೇ ಇಲ್ಲ. ಈಗಾಗಲೇ ಸಾಕಷ್ಟು ರೀಸರ್ಚ್ ಮಾಡಿದ್ದೀನಿ, ಅದನ್ನು ಇನ್ನೂ ಮುಂದುವರೆಸುತ್ತೀನಿ’ ಎನ್ನುತ್ತಾರೆ ಅವರು. ಎಲ್ಲಾ ಸರಿ, ರಮೇಶ್‌ಗೆ ಯಾಕೆ ಈ ನೈಜ ಘಟನೆಗಳ ಹಿಂದೆ ಬೆನ್ನು ಬೀಳುತ್ತಾರೆ. ಅದಕ್ಕೂ ಅವರ ಬಳಿ ಉತ್ತರವಿದೆ. “ಇಡೀ ಭಾರತದಲ್ಲಿ ನೈಜ ಘಟನೆಗಳನ್ನಿಟ್ಟುಕೊಂಡು, ಅಷ್ಟೇ ನೈಜವಾಗಿ ಚಿತ್ರಿಸುವುದು ಇಬ್ಬರೇ. ಒಬ್ಬರು ಶೇಖರ್ ಕಪೂರ್. ಇನ್ನೊಬ್ಬ ನಾನು. ನಾನು ಯಾವತ್ತೂ ನೈಜ ಘಟನೆಗಳನ್ನಿಟ್ಟುಕೊಂಡು, ನೈಜವಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತೇನೆ. ಅದೇ ಲೊಕೇಶನ್ಗಳಲ್ಲಿಶೂಟ್ ಮಾಡುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದೇ ಹೆಸರನ್ನು ಪಾತ್ರಗಳಿಗೆ ಇಡುತ್ತೇನೆ. ಇದಕ್ಕೆಲ್ಲಾ ಆಳವಾಗಿ ಅಧ್ಯಯನ ಮಾಡಬೇಕು ಮತ್ತು ಅದಕ್ಕೆ ಸಾಕಷ್ಟು ಸಮಯ ಬೇಕು. ಹಾಗಾಗಿ ಚಿತ್ರ ತಡವಾಗಬಹುದು. ಪ್ರಚಾರಕ್ಕೆ ಮಾಡಿದರೆ ಕಮರ್ಷಿಯಲ್ ಚಿತ್ರಗಳನ್ನು ಮಾಡಬಹುದು. ಆದರೆ, ನನಗೆ ಸುಮ್ಮನೆ ಏನೋ ಮಾಡುವುದಕ್ಕೆ ಇಷ್ಟವಿಲ್ಲ. ಐ ಲವ್ ಇನ್‌ವೆಸ್ಟಿಗೇಷನ್’
ಎಂದು ಮಾತು ಮುಗಿಸುತ್ತಾರೆ ಅವರು. ಚೇತನ್ ನಾಡಿಗೇರ್