ಬೆಂಗಳೂರು: ಜೆಡಿಎಸ್ ವರಿಷ್ಠರನ್ನು ಟೀಕಿಸಿದ ರಮೇಶ್ ಬಾಬು ಅವರ ಪತ್ರಿಕಾಗೋಷ್ಠಿ ಗಮನಿಸಿದೆ. ಅದರಲ್ಲಿ ತಾವು ವಿಧಾನಪರಿಷತ್‌ನ ಮಾಜಿ ಸದಸ್ಯ ಎಂದು ಬರೆದುಕೊಂಡಿದ್ದಾರೆ. ಜೆಡಿಎಸ್ ಅನ್ನು ಟೀಕಿಸುವ ಮುನ್ನ ರಮೇಶ್ ಅದನ್ನು ತೆಗೆದು ಹಾಕುವುದು ಸೂಕ್ತ. ಏನು ಆಗಿರದ ರಮೇಶ್ ಬಾಬು ಅವರನ್ನು ಪರಿಷತ್ ವರೆಗೆ ತೆಗೆದುಕೊಂಡು ಹೋಗಿದ್ದ ಜೆಡಿಎಸ್. ಈಗ ಜೆಡಿಎಸ್ ವಿರುದ್ಧ ಮಾತಾಡುವಾಗ, ಜೆಡಿಎಸ್‌ನಿಂದ ಪ್ರಾಪ್ತವಾಗಿದ್ದ ಸ್ಥಾನಮಾನಗಳನ್ನು ಉಲ್ಲೇಖಿಸುವುದು ಅಪರಾಧವೇ ಸರಿ ಎಂದು ವಿಧಾನಪರಿಷತ್ ಸದಸ್ಯರಾದ ಎಚ್.ಎಂ. ರಮೇಶಗೌಡ ಕಿಡಿಕಾರಿದ್ದಾರೆ.
ತೀರ ಇತ್ತೀಚಿನವರೆಗೆ ಜೆಡಿಎಸ್ ಮತ್ತು ನಾಯಕರ ಪರಮ ಪ್ರತಿಪಾದಕರಾಗಿದ್ದ ರಮೇಶ್ ಬಾಬು, ಅಧಿಕಾರ ಅರಸಿ ಕಾಂಗ್ರೆಸ್ ಸೇರಿದ್ದೀರಿ. ಅದೇ ಅಧಿಕಾರಕ್ಕಾಗಿ ಈಗ ಸಿದ್ದರಾಮಯ್ಯ ಅವರ ಆರಾಧನೆಯಲ್ಲಿ ತೊಡಗಿ, ಎಲ್ಲವನ್ನೂ ನೀಡಿದ ಜೆಡಿಎಸ್ ಮತ್ತು ನಾಯಕರ ವಿರುದ್ಧ ಅರುಚುತ್ತಿದ್ದೀರಿ. ನಮ್ಮ ಜೊತೆಗೆ ನಮ್ಮ ಪಕ್ಷದಲ್ಲಿದ್ದ ನಿಮ್ಮದು ಅದೆಂಥ ಅವಕಾಶವಾದವಿರಬಹುದು ಎಂದು ನನಗೆ ಆಶ್ಚರ್ಯವಾಗುತ್ತಿದೆ.
ಜೆಡಿಎಸ್ ನಲ್ಲಿ ಪರಿಷತ್ ಟಿಕೆಟ್ ಕೈತಪ್ಪುತ್ತದೆ ಎಂಬ ಸುಳಿವು ಸಿಕ್ಕಾಗ, ತಮ್ಮ ಸಿದ್ಧಾಂತಗಳನ್ನೆಲ್ಲ ಮರೆತು ಬಿಜೆಪಿ ಸೇರಲು ಮುಂದಾಗಿದ್ದ ನೀವು ಅಲ್ಲಿ ಅವಕಾಶ ಸಾಧ್ಯವಿಲ್ಲ ಎಂದು ಗೊತ್ತಾದಾಗ ಕಾಂಗ್ರೆಸ್ ಸೇರಿದಿರಿ. ಅದಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂತೋಷ್ ರವರನ್ನು ಭೇಟಿಯಾಗಿದ್ದು ಗುಟ್ಟೇನಲ್ಲ.
ಇದನ್ನೂ ಓದಿ: ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ: HDK
ಅಲ್ಲಿ ಅವಕಾಶವಾಗಲಿಲ್ಲ, ಇಲ್ಲಿ ಸೀಟು ಸಿಗಲ್ಲ ಎಂಬ ಕಾರಣಕ್ಕೆ ಕೊನೆಗೆ ಮುಳುಗುವ ಕಾಂಗ್ರೆಸ್ ಎಂಬ ಹಡಗನ್ನು ಹತ್ತಿದಿರಿ. ಆದರೆ ಅಲ್ಲಿಯೂ ಕೂಡ ದಕ್ಕಿದ್ದು ಶೂನ್ಯ. ನಿಮ್ಮ ಬುದ್ಧಿವಂತಿಕೆಯನ್ನು ಈಗ ತಾವಿರುವ ಪಕ್ಷದ ನಾಯಕರನ್ನು ಅಪ್ಪಿಕೊಳ್ಳಲು ಜೆಡಿಎಸ್ ಅನ್ನು ಟೀಕಿಸುವ ನೀವು ಒಮ್ಮೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ಇದಕ್ಕೆ ಉತ್ತರ ನಿಮಗೆ ಸ್ವಯಂವೇದ್ಯವಾಗುತ್ತದೆ. ಯಾರನ್ನೋ ಓಲೈಸಲು ನಿಮಗೊಂದು ‘ಐಡೆಂಟಿಟಿ’ ಕೊಟ್ಟ ಪಕ್ಷವನ್ನು ತೆಗಳುವುದು ನಿಮಗೆ ಶೋಭೆ ಅಲ್ಲ.
ನಿಮ್ಮ ಪತ್ರಿಕಾ ಹೇಳಿಕೆ ಗಮನಿಸಿದರೆ ಗಾಳಿ ಬಂದ ಕಡೆ ತೂರಿಕೊಳ್ಳುವ ಜಾಯಮಾನ ನಿಮ್ಮದು ಎಂಬುದು ಗೊತ್ತಾಗುತ್ತದೆ. ನಿಮ್ಮ ನಿಲುವಿನ ಬಗ್ಗೆ ಮರುಕವಿದೆ. ಎಂದು ರಮೇಶ್ ಗೌಡ ತಿರುಗೇಟು ನೀಡಿದ್ದಾರೆ.