ಇನ್ನೇನು ಎರಡು ದಿನಗಳು ಕಳೆದರೆ 2018 ಕಳೆದು 2019ರ ಹೊಸ ವರ್ಷ ಬರುತ್ತದೆ. ವಿಶ್ವದಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಜನ-ಮನ ಸಿದ್ಧವಾಗುತ್ತಿದೆ. ಅದರಲ್ಲೂ ಚಿತ್ರರಂಗದ ಮಂದಿಗಂತೂ ಹೊಸವರ್ಷದ ಸಂಭ್ರಮ ತುಸು ಹೆಚ್ಚಾಗಿಯೇ ಇರುತ್ತದೆ. ಹೊಸವರ್ಷಕ್ಕೆ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ತಿಂಗಳುಗಳ ಮುಂಚೆಯೇ ಯೋಜನೆಗಳು ಸಿದ್ಧವಾಗುತ್ತಿರುತ್ತವೆ.
ಇನ್ನು ಹೊಸವರ್ಷಕ್ಕೆ ಒಂದು ವಾರ ಬಾಕಿಯಿದೆ ಎನ್ನುವಾಗಲೇ ನಟ ಕಂ ನಿರ್ದೇಶಕ ರಮೇಶ್ ಅರವಿಂದ್, ಈ ವರ್ಷ ತಮಗೆ ನೀಡಿದ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ 2018ಕ್ಕೆ ಶುಭ ವಿದಾಯ ಹೇಳುವ ಸಲುವಾಗಿ ಪತ್ರಕರ್ತರು, ಮಾಧ್ಯಮಗಳ ಮುಂದೆ ಬಂದಿದ್ದರು. ಸಾಕಷ್ಟು ಅನುಭವಗಳನ್ನು ಹಂಚಿಕೊಂಡರು. “2018 ನನ್ನ ಪಾಲಿಗೆ ಖುಷಿ ನೀಡಿದೆ. ಅದರಲ್ಲೂ “ಬಟರ್ ಫ್ಲೈ’ ಚಿತ್ರದ ನಿರ್ದೇಶನ ಹೊಸಥರದ ಅನುಭವ ಕೊಟ್ಟಿದೆ’,
ಎನ್ನುವ ರಮೇಶ್ ಅರವಿಂದ್, “ಕನ್ನಡದ ಕೊಟ್ಯಾದಿಪತಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, “ಭೈರಾದೇವಿ’ ಚಿತ್ರದಲ್ಲಿ ನಟಿಸಿದ್ದು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ವರ್ಷಪೂರ್ತಿ ಬ್ಯುಸಿಯಾಗಿದ್ದು, ಅರ್ಥಪೂರ್ಣವಾಗಿ ಕಳೆದಿದೆ’ ಎನ್ನುತ್ತಾರೆ ರಮೇಶ್. “ನಟನಾಗಿ ಮತ್ತು ನಿರ್ದೇಶಕನಾಗಿ “ಆಪ್ತಮಿತ್ರ’, “ರಾಮ ಭಾಮ ಶಾಮ’ದಂತೆ ಕೃತಕವಲ್ಲದ ಮತ್ತೂಂದಷ್ಟು ಹಿಟ್ ಚಿತ್ರ ನೀಡುವ ಬಯಕೆ ಇದೆ.
ಆ ಚಿತ್ರಗಳು ನೋಡುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು ಎಂಬ ಆಸೆಯಿದೆ. ಯಾವುದೇ ಸ್ಟಾರ್ ನಟರಿಗೆ ಅಂತ ಕಥೆಯನ್ನ ಸಿದ್ದಪಡಿಸಿಕೊಂಡಿಲ್ಲ. ಚಿತ್ರ ಮಾಡಲು ಸೂಕ್ತವೆನಿಸುವ ಒಂದಷ್ಟು ವಿಷಯಗಳ ಬಗ್ಗೆ ಚಿಂತನೆ ಮಾಡುತ್ತಿರುತ್ತೇನೆ. ಇತ್ತೀಚೆಗೆ “ರಾಕ್ಷಸ’, “ಕಿಸ್ಮತ್’, “96′ ಚಿತ್ರಗಳನ್ನು ನೋಡಿದ್ದೇನೆ. “ಕೆಜಿಎಫ್’ ಬಗ್ಗೆ ಬರುವ ಪ್ರತಿಕ್ರಿಯೆಗಳನ್ನು ಕೇಳಿ ಖುಷಿಯಾಯಿತು.
ಇತ್ತೀಚೆಗೆ ಕಲಾದರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ನಮ್ಮದೆ ಕೆಲಸದಲ್ಲಿ ನಿರತರಾಗಿದ್ದೇನೆ. ರಾಧಿಕಾಚೇತನ್ ಅವರೊಂದಿಗೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ವಿಕೆಂಡ್ ವಿತ್ ರಮೇಶ್ ಮುಂದಿನ ದಿನಗಳಲ್ಲಿ ಬರಲಿದೆ’ ಎನ್ನುತ್ತಾರೆ ರಮೇಶ್. ಇನ್ನು ತಮ್ಮ “ಬಟರ್ ಫ್ಲೈ’ ಚಿತ್ರದ ಬಗ್ಗೆ ಮಾತನಾಡಿರುವ ರಮೇಶ್, “ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ನಮ್ಮ ಪ್ಲಾನ್ ಪ್ರಕಾರ ಮುಂದಿನ ಫೆಬ್ರವರಿಯಲ್ಲಿ ತೆರೆಗೆ ಬರಬಹುದು. ಕನ್ನಡದಲ್ಲಿ ಪಾರುಲ್ ಯಾದವ್, ತೆಲುಗಿನಲ್ಲಿ ಕಾಜಲ್ ಅಗರ್‌ವಾಲ್ ಚೆನ್ನಾಗಿ ಅಭಿನಯಿಸಿದ್ದಾರೆ. ಇಬ್ಬರ ಯೋಚನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಆಯಾ ಭಾಷೆಯ ಗಾಯಕರು ಹಾಡಿದ ಗೀತೆಯನ್ನು ಕೇಳಿದಾಗ ಖುಷಿಯಾಯಿತು. ಇದರ ಫಲಿತಾಂಶ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು.ಎಂದಿನಂತೆ ನಟನೆ ಮುಂದುವರೆದಿದೆ’ ಎನ್ನುತ್ತಾರೆ ರಮೇಶ್ ಅರವಿಂದ್.