ಮುಂಬಯಿ: ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರಕಾರ ಬರಲಿದೆ ಎಂದು ನಾರಾಯಣ ರಾಣೆ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಕೇಂದ್ರ ಸಚಿವರಾಗಿರುವ ರಾಮದಾಸ್ ಅಠಾವಳೆ ಕೂಡ ರಾಜ್ಯದಲ್ಲಿ ಮಹಾ ವಿಕಾಸ ಆಘಾಡಿ ಸರಕಾರದ ಭವಿಷ್ಯ ನುಡಿದಿದ್ದಾರೆ.
ಸಾಂಗ್ಲಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅಠಾವಳೆ ಅವರು, ಎರಡೂವರೆ ವರ್ಷಗಳ ನಂತರ ರಾಜ್ಯದಲ್ಲಿ ಮತ್ತೆ ಶಿವಸೇನೆ ಬಿಜೆಪಿ ಜೊತೆಯಾಗಿ ಸರಕಾರ ರಚಿಸಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸರಕಾರದ ನಡುವೆ ಸಾಕಷ್ಟು ವಿವಾದಗಳಿವೆ. ಬಹುಶಃ ಎರಡೂವರೆ ವರ್ಷ ಪೂರ್ಣಗೊಂಡ ನಂತರ ಶಿವಸೇನೆಯು ಮಹಾ ವಿಕಾಸ್ ಅಘಾಡಿಯನ್ನು ತೊರೆದು ಬಿಜೆಪಿಯೊಂದಿಗೆ ಹೋಗಬಹುದು. ಈ ಸರಕಾರ ಹೆಚ್ಚು ದಿನ ಇರುತ್ತದೆ ಎಂದು ನನಗನಿಸುವುದಿಲ್ಲ. ಅದು ಮಾರ್ಚ್ ಅಥವಾ ಏಪ್ರಿಲ್ ಆಗಿರಲಿ. ಸರಕಾರ ಶೀಘ್ರದಲ್ಲೇ ಬೀಳುವ ನಿರೀಕ್ಷೆಯಿದೆ ಎಂದು ಅಠಾವಳೆ ಹೇಳಿದರು.
ಇದನ್ನೂ ಓದಿ:ಬಿಎಸ್‌ಸಿ ಮುಡಿಗೆ ಲೀಲಾವತಿ ಪ್ಯಾಲೇಸ್ ಕಪ್
ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ನಂತರವೂ ರೈತರ ಹೋರಾಟದಲ್ಲಿ ರಾಕೇಶ್ ಟಿಕಾಯಿತ್ ಅವರು ಅಚಲವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ.
ರೈತರು ಆಕ್ರಮಣಕಾರಿ ನಿಲುವು ತಳೆದ ಬಳಿಕ ಎಲ್ಲಾ ಮೂರು ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ರೈತರು ತಮ್ಮ ಧರಣಿ ಹಿಂಪಡೆಯಬೇಕು. ಹಾಗಾಗದಿದ್ದಲ್ಲಿ ರಾಕೇಶ್ ಟಿಕಾಯತ್ ಹಾಗೂ ಇತರ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ. ಕಾನೂನುಗಳನ್ನು ರದ್ದುಪಡಿಸಿದ ನಂತರವೂ ಆಂದೋಲನ ಮಾಡುವುದು ಸೂಕ್ತವಲ್ಲ. ಈಗ ಆಂದೋಲನದ ಅಗತ್ಯವಿಲ್ಲ. ಇತರ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಅಠಾವಳೆ ಸಲಹೆ ನೀಡಿದರು.