Advertisement
ಚೀನದಲ್ಲಿ ಕಂಡುಬಂದ ಮೊದಲ ರಾಮಾಯಣದ ಕಥೆಯಲ್ಲಿ ಶ್ರೀರಾಮನ 14 ವರ್ಷಗಳ ವನವಾಸವನ್ನು ಹೊರತುಪಡಿಸಿ, ಉಳಿದೆಲ್ಲವೂ ಭಾರತದ ರಾಮಯಾಣವನ್ನೇ ಹೋಲುತ್ತದೆ. ಕ್ರಿ.ಶ.472 ಹಾಗೂ 251ರಲ್ಲಿ ಅನುವಾದಿತ ದಶರಥ ಜಾತಕ ಹಾಗೂ ಅನಾಮಿಕ ರಾಜನ ಕಥೆಯಲ್ಲಿ ರಾವಣನನ್ನು ನಾಗರ ರಾಜ ಎಂದು ಕರೆಯಲಾಗಿದೆ. ದಶರಥ ಜಾತಕವು ವಾಲ್ಮೀಕಿಯ ಸಂಸ್ಕೃತ ಶ್ಲೋಕದ ಪಾಲಿ ಭಾಷೆಯ ಅನುವಾದವನ್ನು ಒಳಗೊಂಡಿದೆ. ರಾಮನ ಕುರಿತಾದ ವಿವಿಧ ಜಾತಕ ಕಥೆಗಳು ಚೀನದಲ್ಲಿ ಜನಪ್ರಿಯತೆ ಯನ್ನು ಹೊಂದಿವೆ. ಬೌದ್ಧ ಗ್ರಂಥವಾದ ಲಿಉಡೂ ಜೀ ಜಿಂಗ್‌ನಲ್ಲಿ ಚೀನದಲ್ಲಿನ ಅತ್ಯಂತ ಪ್ರಾಚೀನ ರಾಮಾಯಣದ ಒಕ್ಕಣೆ ಕಂಡು ಬರುತ್ತದೆ. 16ನೇ ಶತಮಾನದಲ್ಲಿ ಬರೆದ ಗ್ರಂಥದಲ್ಲಿ ಕೋತಿಗಳ ರಾಜ, ಸುನ್ ವುಕೊಂಗ್ (ಹನುಮಾನ್) ನ ಉಲ್ಲೇಖವೂ ಇದೆ.ಕ್ರಿ.ಶ. 9 ನೇ ಶತಮಾನದಲ್ಲಿ ಥೈಲ್ಯಾಂಡ್, ಮ್ಯಾನ್ಮಾರ್, ಜಾವಾ ಹಾಗೂ ಇತರ ದೇಶ ಗಳಲ್ಲಿನ ಸಾಹಿತ್ಯಕಾರರು ರಾಮಾಯಣವನ್ನು ಅಯಾ ದೇಶಗಳ ಭಾಷೆಗಳಲ್ಲಿ ಅನುವಾದಿಸಲು ಆರಂಭಿಸಿದ್ದರು. ಇದೇ ಸಮಯದಲ್ಲಿ ಅತೀ ವೇಗವಾಗಿ ಇದು ದಕ್ಷಿಣ ಹಾಗೂ ನೈಋತ್ಯ ಚೀನದ ಪ್ರದೇಶಗಳಿಗೆ ತಲುಪಿತು. ಚೀನದ ದಾಈ ಸಮುದಾಯವು ಜಾನಪದ ಸಂಪ್ರದಾಯದಲ್ಲಿ ರಾಮಾಯಣವನ್ನು ಪ್ರಪ್ರಥಮವಾಗಿ ಅಳವಡಿಸಿ ಕೊಂಡಿತ್ತು. ಬಳಿಕ ರಾಮಾಯಣವು ಚೀನದ ವಿವಿಧ ಪ್ರದೇಶಗಳಲ್ಲಿ ಪ್ರಚುರ ಗೊಂಡಿತು. ಚೀನದ ಯುನ್ನಾನ್ ಪ್ರಾಂತದಲ್ಲಿ ರಾಮಾಯಣವನ್ನು ಲಂಗಾ ಸಿಪ ಹೋರ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತ ಹಾಗೂ ಪಾಲಿ ಭಾಷೆಯಿಂದ ಹೆಚ್ಚಿನ ಭಾಗಗಳನ್ನು ಅಳವಡಿಸಿಕೊಂಡಿದೆ. ಯುನ್ನಾನ್‌ನ ನೈಋತ್ಯ ಭಾಗದಲ್ಲಿರುವ ದಾಈ ಸಮುದಾಯದಲ್ಲಿ ರಾಮಾಯಣವು ಲಂಕಾದ ಹತ್ತು ತಲೆಗಳು ಎಂದು ಪ್ರಚಲಿತವಾಗಿದೆ. ಇಲ್ಲಿಂದಲೇ ಈ ಕಥೆಯು ಬೌದ್ಧ ಧರ್ಮದ ಮೂಲಕ ಟಿಬೆಟ್ ಹಾಗೂ ಮಂಗೋಲಿಯಾದಲ್ಲೂ ಕೆಲವು ಬದಲಾವಣೆಗಳೊಂದಿಗೆ ಪರಿಚಯವಾಯಿತು. ಇದರ ಪ್ರಕಾರ ವನವಾಸದಲ್ಲಿ ರಾಮನ ಜತೆಗೆ ಲಕ್ಷಣನ ಬದಲು ಭರತನು ಹೋಗುತ್ತಾನೆ.
ಶ್ರೀರಾಮ-ರಾವಣರ ನಡುವಿನ ಯುದ್ಧ ತಾರಕಕ್ಕೇರಿತ್ತು. ರಾವಣನನ್ನು ಏನೇ ಮಾಡಿದರೂ ಮಣಿಸಲು ಆಗುತ್ತಿರಲಿಲ್ಲ. ರಾಮಸೇನೆ ಹತಾಶೆಗೊಂಡಿತ್ತು. ಆ ಸಂದರ್ಭದಲ್ಲಿ ಯುದ್ಧರಂಗಕ್ಕೆ ಆಗಮಿಸಿದ ಅಗಸ್ತ್ಯ ಮಹರ್ಷಿಗಳು, ಶ್ರೀರಾಮನಿಗೆ ಆದಿತ್ಯಹೃದಯ ಮಂತ್ರವನ್ನು ಉಪದೇಶಿಸುತ್ತಾರೆ. ಆದಿತ್ಯಹೃದಯ ಸೂರ್ಯನನ್ನು ಆರಾಧಿಸುವ ಮಂತ್ರಗಳನ್ನೊಳಗೊಂಡಿದೆ. ಅದನ್ನು ಪಠಿಸಿ ಸೂರ್ಯನನ್ನು ಆರಾಧಿಸಿದ ನಂತರ, ಶ್ರೀರಾಮ, ರಾವಣನನ್ನು ಸಂಹರಿಸುತ್ತಾನೆ. ವಿಶ್ವಾದ್ಯಂತ ಕೋಟ್ಯಂತರ ಮಂದಿ ಪಠಿಸುವ ಆದಿತ್ಯಹೃದಯದ ಮೂಲವೂ ರಾಮಾಯಣ ಎನ್ನುವುದು ಈ ಕೃತಿಯ ಮಹತ್ವವನ್ನು ತೋರುತ್ತದೆ.