ಮೈಸೂರು: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ರಾಮಮಂದಿರ ಕಟ್ಟಬೇಕು ಎಂದು ಹೊರಟಿರುವವರು ವಾಲ್ಮೀಕಿ ರಾಮಾಯಣ ಅರಿಯಬೇಕು ಎಂದು ವಿಚಾರವಾದಿ ಪೊ›.ಕೆ.ಎಸ್.ಭಗವಾನ್ ಹೇಳಿದರು. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪ ಸಮಿತಿ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಕವಿಗೋಷ್ಠಿ ಅಂಗವಾಗಿ ನಡೆದ ವಿಶಿಷ್ಟ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲ್ಪನೆ: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ತನ್ನ ಭಾವನೆ, ಕಲ್ಪನೆಗಳನ್ನು 25 ಸಾವಿರ ಶ್ಲೋಕಗಳಲ್ಲಿ ಹೇಳಿರುವ ವಾಲ್ಮೀಕಿ, ರಾಮನನ್ನು ಚಾರ್ತುವರ್ಣದ ರಕ್ಷಕ ಎಂದು ಕರೆದಿದ್ದಾನೆ. ಮನುಷ್ಯ ಜನ್ಮ ಇರುವುದೇ 100 ವರ್ಷ ಹೀಗಾಗಿ 11 ಸಾವಿರ ವರ್ಷ ರಾಮ ರಾಜ್ಯಭಾರ ಮಾಡಿದ ಎಂಬುದು ಸರಿಯಲ್ಲ. ಅದನ್ನು 11 ವರ್ಷಗಳ ಕಾಲ ಆಳಿದ ಎಂದು ಕೊಳ್ಳಬೇಕು ಎಂದರು.
ಗುಂಡಿಡಲಾಗದು: ಸಾಹಿತಿ ಕೆ.ನೀಲಾ ಮಾತನಾಡಿ, ಕಾವ್ಯಕ್ಕೆ ಸಾವಿಲ್ಲ. ಹಣೆಗೆ ಗುಂಡಿಡಬಹುದು, ಆದರೆ, ನುಡಿಗೆ ಗುಂಡಿಡಲಾಗದು ಎಂದರು. ರಾಜ-ಮಹಾರಾಜರ ಚರಿತ್ರೆಯನ್ನು ಓದಿದ್ದೇವೆ, ಆದರೆ ಮಹಲು ಕಟ್ಟಿದವನ, ರಸ್ತೆ ಮಾಡಿದವನ ಚರಿತ್ರೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಜನರಿಗೆ ಮನ್ ಕೀ ಬಾತ್ ಬೇಕಾಗಿಲ್ಲ. ಹೃದಯದ ಮಾತು ಬೇಕಾಗಿದೆ. ಜಯಮಾಲ ವರದಿಯ ಶಿಫಾರಸುಗಳನ್ನು ಸರ್ಕಾರ ಶೀಘ್ರ ಜಾರಿಮಾಡಲಿ ಎಂದು ಒತ್ತಾಯಿಸಿದರು.
ಅರಿವು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಮಾತನಾಡಿ, ರಾಮನಿದ್ದಾಗ ರಾವಣನೂ ಇದ್ದ, ಕೌರವರಿದ್ದಾಗ ಪಾಂಡವರೂ ಇದ್ದರು, ಹಾಗೆಯೇ ಸರಿ-ತಪ್ಪು$, ಕಪ್ಪು$-ಬಿಳುಪು, ನ್ಯಾಯ-ಅನ್ಯಾಯ ಜತೆ ಜತೆಗೆ ಇದ್ದೇ ಇರುತ್ತವೆ ಅರಿತು ನಡೆಯಬೇಕು ಎಂದರು.
ಹೊಸ ಪದ್ಧತಿ: ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲ ಮಾತನಾಡಿ, ಆಧುನೀಕರಣ, ನಗರೀಕರಣದ ಪರಿಣಾಮಗಳನ್ನು ಯಾರೂ ಊಹಿಸಲಾರದಂತಾಗಿದೆ. ಹಿಂದೆ ದೇವದಾಸಿ ಪದ್ಧತಿ ಇದ್ದರೂ ಅದಕ್ಕೊಂದು ಗೌರವ ಇತ್ತು. ನಗರೀಕರಣ ಹೊಸ ರೀತಿಯ ದೇವದಾಸಿ ಪದ್ಧತಿಯನ್ನು ಹುಟ್ಟುಹಾಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುಪಿಎಸ್‌ಸಿ ರ್‍ಯಾಂಕ್ ವಿಜೇತ ಕೆಂಪ ಹೊನ್ನಯ್ಯ ಕವಿಗೋಷ್ಠಿ ಉದ್ಘಾಟಿಸಿದರು. ದಸರಾ ವಿಶೇಷಾಧಿಕಾರಿ ಡಿ. ರಂದೀಪ್, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್.ವರ್ಧನ್, ಸಮಿತಿ ಉಪಾಧ್ಯಕ್ಷರಾದ ರತ್ನ ಅರಸ್, ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಮಂಜುನಾಥ್ ಇತರರಿದ್ದರು.
ಕವನ ವಾಚನ: ಶಕ್ತಿಧಾನ, ಒಡನಾಡಿ, ಆಶೋದಯ, ಆರ್‌ಎಲ್‌ಎಚ್‌ಪಿಯ ವತಿಯಿಂದ ಬಂದಿದ್ದ ಪ್ರತಿನಿಧಿಗಳು ಕವನ ವಾಚನ ಮಾಡಿದರು. ಸರ್ಕಾರಿ ಅಂಧ ಮತ್ತು ಕಿವುಡರ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಯೇಸು, ಅಪ್ಪ-ಅಮ್ಮ ಕವನವನ್ನು ಮೂಕಾಭಿನಯದ ಮೂಲಕ ತೋರ್ಪಡಿಸಿದರೆ, ಅದೇ ಶಾಲೆಯ ಶರಶ್ಚಂದ್ರನ ಅನಂತ ನಗು ಕವನದ ಮೂಕಾಭಿನಯ ವಿಶೇಷವಾಗಿತ್ತು. ಶಕ್ತಿಧಾಮದ ವಯೋವೃದ್ಧೆ ಇಂದಿರಮ್ಮ ಅವರ ಅಮ್ಮ ಎನ್ನುವ ಶಬ್ದ ಎಷ್ಟು ಚೆನ್ನ ಕವನ ವಾಚನ ಗಮನಸೆಳೆಯಿತು.