Advertisement

ಬಿಜೆಪಿ ಪಕ್ಷದ ಕಡೆಗೆ ರಾಮಸ್ವಾಮಿ ನಡೆ…

12:49 AM Mar 31, 2023 | Team Udayavani |

ಹಾಸನ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಈ ಹೊತ್ತಿಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌  ಸೇರಬೇಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅವರು ಬಿಜೆಪಿ ಮನೆ ಬಾಗಿಲಲ್ಲಿ ನಿಂತುಕೊಂಡಿದ್ದಾರೆ.

Advertisement

ಮಾನಸಿಕವಾಗಿ ಜೆಡಿಎಸ್‌ನಿಂದ ಬಹಳ ಹಿಂದೆಯೇ ಹೊರಗೆ ಬಂದಿದ್ದ ರಾಮಸ್ವಾಮಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್‌ನವರು ಟಿಕೆಟ್‌ ನೀಡುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಕಮಲದ ಕಡೆ ಕಣ್ಣು ಹಾಯಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ನಾಯಕರೊಂದಿಗೆ ರಾಮಸ್ವಾಮಿ ಅವರು ಚರ್ಚೆ ನಡೆಸಿದ್ದು, ಇದಕ್ಕೆ ರಾಜ್ಯ ಮುಖಂಡರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಔಪಚಾರಿಕವಾಗಿ ದಿಲ್ಲಿ ನಾಯಕರ ಗಮನಕ್ಕೆ ತಂದು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಖಚಿತಪಡಿಸುವುದಾಗಿ ರಾಜ್ಯ ನಾಯಕರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ಒಂದು ವರ್ಷದಿಂದಲೂ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ನಿಂದ, ವಿಶೇಷವಾಗಿ ಎಚ್‌.ಡಿ.ರೇವಣ್ಣ ಅವರಿಂದ ಅಂತರಕಾಯ್ದುಕೊಂಡಿದ್ದರು. ಆದರೆ ದೇವೇಗೌಡರ ಸಂಪರ್ಕದಲ್ಲಿದ್ದರು. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರನ್ನು ಎದುರು ಹಾಕಿಕೊಂಡು ಜೆಡಿಎಸ್‌ನಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂದು ಭಾವಿಸಿದ್ದ ಅವರು ತಮ್ಮ ಮಾತೃಪಕ್ಷ  ಕಾಂಗ್ರೆಸ್‌ ಸೇರುವ ಪ್ರಯತ್ನವನ್ನು ನಡೆಸಿದ್ದರು.

ವಿಚಿತ್ರವೆಂದರೆ, ಅದೇ ಹೊತ್ತಿಗೆ ಬಿಜೆಪಿಯಲ್ಲಿದ್ದ ಎ.ಮಂಜು ಕೂಡ ಕಾಂಗ್ರೆಸ್‌ ಸೇರ್ಪಡೆಗೆ ಪ್ರಯತ್ನ ನಡೆಸಿದ್ದರು. ಈ ಬೆಳವಣಿಗೆ ರಾಜ್ಯ ನಾಯಕರಿಗೇ ಗೊಂದಲ ಮೂಡಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎ.ಮಂಜು ಪರ ಬ್ಯಾಟಿಂಗ್‌ ನಡೆಸಿದ್ದರೆ, ಸಿದ್ದರಾಮಯ್ಯ ಎ.ಟಿ.ರಾಮಸ್ವಾಮಿ ಪರ ಒಲವು ತೋರಿ, ಎ.ಮಂಜು ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಎ.ಮಂಜು ಜೆಡಿಎಸ್‌ ಸಹಿತ ಅರಕಲಗೂಡು ಟಿಕೆಟ್‌ ಖಚಿತಪಡಿಸಿಕೊಂಡರು.

ಎ.ಮಂಜು ಅವರು ಜೆಡಿಎಸ್‌ ಅಭ್ಯರ್ಥಿಯಾಗುವುದು ಖಚಿತವಾದ ಅನಂತರ ರಾಮಸ್ವಾಮಿ ಅವರು ಕಾಂಗ್ರೆಸ್‌ ಸೇರುವ ಪ್ರಯತ್ನ ತೀವ್ರಗೊಳಿಸಿದರು. ಆದರೆ ಅಷ್ಟರಲ್ಲಿ ಎಂ.ಟಿ.ಕೃಷ್ಣೇಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಅನ್ನು ಸಿದ್ದರಾಮಯ್ಯ ಅವರು ಖಚಿತಪಡಿಸಿದ್ದರು. ಹಾಗಾಗಿ  ರಾಮಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸಿದ್ಧರಾಮಯ್ಯ ಅವರು ಉತ್ಸುಕರಾಗಿದ್ದರೂ ವಿಧಾನಸಭಾ ಚುನಾವಣೆ ಟಿಕೆಟ್‌ ಕೇಳಬೇಡಿ. ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದ ಅಭ್ಯರ್ಥಿಯಾಗುವುದಾದರೆ ಕಾಂಗ್ರೆಸ್‌ ಸೇರ್ಪಡೆಗೆ ಸ್ವಾಗತ ಎಂದು ಸ್ಪಷ್ಟಪಡಿಸಿದ್ದರು.

Advertisement

ಬಿಜೆಪಿಯತ್ತ ಚಿತ್ತ

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯದಿದ್ದರೆ ಲೋಕಸಭಾ ಚುನಾವಣೆ ವರೆಗೆ ತಮ್ಮ ಬೆಂಬಲಿಗರನ್ನು  ಹಿಡಿದಿಟ್ಟುಕೊಳ್ಳುವುದು ಕಷ್ಟ. ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದ ರಾಮಸ್ವಾಮಿ ಅವರು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಆದರೆ ಈಗಾಗಲೇ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗಾರಮೇಶ್‌ ಅವರು ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಬಯಸಿದ್ದರು. ಆದರೆ ಈಗ ಬಿಜೆಪಿ ಮುಖಂಡರು ಯೋಗಾರಮೇಶ್‌ ಅವರಿಗೆ ಯಾವ ಭರವಸೆ ನೀಡಿ ರಾಮಸ್ವಾಮಿ ಅವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬುದು ನಿಗೂಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next