Advertisement
ನನಗೆ ಭರತನ ವ್ಯಕ್ತಿತ್ವದ ಪೂರ್ಣ ಪರಿಚಯವಾಗಿದ್ದೂ ಚಿತ್ರಕೂಟದಲ್ಲೇ. ಕಾಡಿಗೆ ಬಂದವನೇ ಅಣ್ಣನ ಪಾದಗಳನ್ನು ಹಿಡಿದು, ಗೊಳ್ಳೋ ಎಂದು ಅತ್ತ. “ನಿನ್ನಂಥ ಅಣ್ಣನಿಗೆ ತಮ್ಮನಾಗುವ ಯೋಗ್ಯತೆ ನನಗಿಲ್ಲ, ನನ್ನಮ್ಮನ ಸ್ವಾರ್ಥ ನಿನ್ನನ್ನು ಘೋರ ಕಷ್ಟಕ್ಕೆ ನೂಕಿತು, ಅಣ್ಣಾ, ಈ ತಮ್ಮನನ್ನು ಕ್ಷಮಿಸಲಾರೆಯಾ? ನೀನು ಅಯೋಧ್ಯೆಗೆ ಮರಳಿ ಬರುತ್ತೇನೆ ಎಂದು ಮಾತು ಕೊಡುವವರೆಗೂ ನಿನ್ನ ಕಾಲು ಬಿಡುವುದಿಲ್ಲ’ ಎಂದು ಅಂಗಲಾಚಿದ.ಮಾತಿನಲ್ಲಿ ನಾಟಕೀಯತೆಯ ಲವಲೇಶವೂ ಇಲ್ಲ.
Related Articles
Advertisement
ರಾಮ ಹಾಗೆ ಮಾಡಿದ. “ಇವು ಪಾದುಕೆಗಳಲ್ಲ, ನಿನ್ನ ನಿಜಪಾದಗಳು. ಮುಂದೆ ಹದಿನಾಲ್ಕು ವರ್ಷ ಈ ಪಾದುಕೆಗಳೇ (ಪಾದಗಳೇ) ರಾಜ್ಯವಾಳುತ್ತವೆ. ನಾನು ಆಳಾಗಿ ಮಾತ್ರ ಇರುತ್ತೇನೆ. ಪಾದಗಳು ತೋರಿಸಿದ್ದನ್ನು ಶಿರದಲ್ಲಿ ಹೊತ್ತು ಮಾಡುತ್ತೇನೆ. ಇಡೀ ರಾಜ್ಯ ನಿನ್ನ ಇಡುಗಂಟು (ನ್ಯಾಸ). ಅದನ್ನು ರಕ್ಷಿಸುವ ನಂಟು ಮಾತ್ರ ನನ್ನದು’. “ಆದರೆ, ಒಂದು ಮಾತು: 14 ವರ್ಷ ಕಳೆದ ದಿನ ನೀ ಅಯೋಧ್ಯೆಗೆ ಬರದಿದ್ದರೆ, ಈ ತಮ್ಮನನ್ನು ಮತ್ತೆ ಈ ಜಗತ್ತಿನಲ್ಲಿ ನೋಡಲಾರೆ. ಬರುತ್ತೇನೆಂದು ಭಾಷೆ ಕೊಡು’ ಎಂದ. ರಾಮ, “ತಥಾಸ್ತು’ ಅಂದ.
ಭರತ ಪಾದುಕೆಗಳನ್ನು ತಲೆಯ ಮೇಲೆ ಹೊತ್ತ. ಮುಂದೆ ಅಂಬಾರಿಸಹಿತವಾದ ಆನೆ ಮೇಲಿಟ್ಟ. ಭವ್ಯ ಮೆರವಣಿಗೆಯೊಂದಿಗೆ ಹೊರಟ. ನಿಜಕ್ಕೂ ಆ ದೃಶ್ಯ ನನ್ನ ಕಂಗಳನ್ನು ತುಂಬುವಂತೆ ಮಾಡಿತು. ಹಾಗೆಯೇ, ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ರಾಮ ಭರತನಿಗೆ ಕೂಗಿ ಹೇಳಿದ್ದು ಮನಸ್ಸನ್ನೂ ತುಂಬಿತು.ಇದೇ ಸಂದರ್ಭದಲ್ಲಿ ಇನ್ನೊಂದು ಅಂಶ ನಾನು ಗಮನಿಸಿದ್ದು… ಅಯೋಧ್ಯೆಯಿಂದ ಬಂದಿದ್ದ ಕೈಕೇಯಿ ಅತ್ತೆಯ ಮನಸ್ಸಿನಲ್ಲೂ, ರಾಮ ಮರಳಿ ಅಯೋಧ್ಯೆಗೆ ಬರಲಿ ಎಂಬ ಅಭಿಪ್ರಾಯವಿದ್ದಂತೆ ತೋರಿತು!
ಚರಿತ್ರೆಯಲ್ಲಿ ತ್ಯಾಗಕ್ಕೆ, ನಿಸ್ಪೃಹತೆಗೆ ನಿಜವಾದ ಮೌಲ್ಯ ಒದಗಿದ್ದಿದ್ದರೆ ಈ ಇಬ್ಬರಿಂದಲೇ ಇರಬೇಕು. ಜಗತ್ತಿನಲ್ಲಿ ಹಣ, ಅಧಿಕಾರ ಬೇಕು ಬೇಕು ಎಂದು ಬೇಕಾದಷ್ಟು ಜಗಳವಾಗುತ್ತೆ, ಬೇಡ ಬೇಡ ಎಂದು ಜಗಳವಾಡುವುದನ್ನು ಹೇಗೆ ವಿಶ್ಲೇಷಿಸುವುದು? ಧರಣಿಯೊಳೀಪರಿ ಜೋಡಿಯುಂಟೇ! ಸೋಜಿಗವುಂಟೇ ಎಂದು ಜೋರಾಗಿ ಹಾಡಿಬಿಡಲೇ? ಎನ್ನಿಸಿತು. ಕಾಡುದಾರಿಯಲ್ಲಿ ಮುಂದೆ ಮುಂದೆ ಸಾಗತೊಡಗಿದೆವು. ಈಗ ಇನ್ನೊಂದು ಅಚ್ಚರಿ ಎದುರಾಯಿತು.
* ಸಿ.ಎ. ಭಾಸ್ಕರ ಭಟ್ಟ