ದಾವಣಗೆರೆ: ಕಳೆದ ಜ. 29 ರಂದು ತೆರೆ ಕಂಡಿರುವ “ರಾಮಾರ್ಜುನ’ ಚಿತ್ರಕ್ಕೆ ದಾವಣಗೆರೆ ಒಳಗೊಂಡಂತೆ ರಾಜ್ಯದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕ ಅನೀಶ್ ತಿಳಿಸಿದ್ದಾರೆ.
ಕೊರೊನಾ, ಲಾಕ್‌ಡೌನ್ ನಂತರ ಚಿತ್ರ ಬಿಡುಗಡೆ ಮಾಡುವಾಗ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ದೊರೆಯುತ್ತದೆ. ಎಷ್ಟು ಪ್ರದರ್ಶನಕಾಣಬಹುದು ಎಂಬ ಭಯ ಇತ್ತು. ಎಲ್ಲಾ ಕಡೆ ಬಹಳ ಚೆನ್ನಾಗಿ ಚಿತ್ರ ಪ್ರದರ್ಶನ ನಡೆಯುತ್ತಿದೆ.ನಿರೀಕ್ಷೆಗೂ ಮೀರಿದ ಕಲೆಕ್ಷನ್ ಆಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದ ನಾಯಕ ವಿಮಾ ಏಜೆಂಟ್. ವೈದ್ಯರೊಬ್ಬರು ವೈರಸ್‌ಗೆ ನಿರ್ಮೂಲನೆಗೆ ಕಂಡು ಹಿಡಿದ ಔಷಧವನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಕ್ಕೆ ಮುಂದಾಗಿರುತ್ತಾರೆ. ಹಾಗಾಗಿ ಕೊಳಗೇರಿಯಲ್ಲಿ ಸಾಮೂಹಿಕ ಹತ್ಯೆ ನಡೆಯುತ್ತಿರುತ್ತವೆ. ನಾಯಕ ಆ ಎಲ್ಲವನ್ನೂ ಬಯಲಿಗೆಳೆಯುವುದರೊಂದಿಗೆ ಚಿತ್ರ ಸಾಗುತ್ತದೆ. ಚಿತ್ರದ ಪ್ರತಿಯೊಂದು ದೃಶ್ಯ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿ ಬಂದಿದೆ ಎಂದರು.
ಇದನ್ನೂ ಓದಿ :ಸೇವಾಲಾಲರ ಜಯಂತಿ ಯಶಸ್ವಿಗೊಳಿಸಿ
ಈವರೆಗೆ 7 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೇ ಮೊದಲ ಬಾರಿಗೆ ರಂಗಾಯಣ ರಘು, ಹರೀಶ್ ರಾಜ್, ರಾಜು ಕಾಳೆ ಮುಂತಾದ ದೊಡ್ಡ ತಾರಾ ಬಳಗ ಇಟ್ಟುಕೊಂಡು ಚಿತ್ರ ನಿರ್ದೇಶಿಸಿದ್ದೇನೆ. ಎಲ್ಲರೂ ಉತ್ತಮ ಸಹಕಾರ ನೀಡಿದ ಪರಿಣಾಮ ಚಿತ್ರ ಚೆನ್ನಾಗಿ ಬಂದಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಕೊರೊನಾ ನಿಯಾಮವಳಿಗಳನ್ನ ಪಾಲಿಸಲಾಗುತ್ತಿದೆ. ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದರಿಂದ ಎಲ್ಲಾ ಚಿತ್ರಗಳಿಗೆ ಅನುಕೂಲ ಆಗುತ್ತಿದೆ ಎಂದು ಹೇಳಿದರು.
ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಮಾತನಾಡಿ, ಚಿತ್ರದ ಯಶಸ್ವಿ ಪ್ರದರ್ಶನಕ್ಕೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ಉದ್ದೇಶದಿಂದ ಎಲ್ಲಾ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.