Advertisement

ಸಾಗರದಾಚೆ ಸಹಸ್ರ ರಾಮ : ವಿವಿಧ ದೇಶಗಳ ಕನ್ನಡಿಯೊಳಗೆ ಶ್ರೀರಾಮ

11:32 PM Apr 09, 2022 | Team Udayavani |

ರಾಮಾಯಣ ಮಹಾಕಾವ್ಯ ಭಾರತೀಯ ಪರಂಪರೆಯ ಜೀವಾಳ. ಈ ಕಥೆ ನಿಜವಾಗಿಯೂ ನಡೆದಿರಬಹುದು ಎಂಬ ವಾದಕ್ಕೆ ಪೂರಕವಾಗಿ ನಾನಾ ಕುರುಹುಗಳು ಇಂದಿಗೂ ಭಾರತ- ಶ್ರೀಲಂಕಾದ ನೆಲದಲ್ಲಿ ಕಾಣಸಿಗುತ್ತವೆ. ಹಾಗೆಯೇ ಸಾಗರದಾಚೆಗಿನ ದೇಶಗಳಲ್ಲೂ ರಾಮನ ತೇಜಸ್ಸು ಹಬ್ಬಿರುವುದನ್ನು ನೋಡಬಹುದು…

Advertisement

ಅಯುಥಾಯದಲ್ಲೇ ಪಟ್ಟಾಭಿಷೇಕ, ಸೀತೆ ಇಲ್ಲಿ ರಾವಣನ ಮಗಳು…
ಖ್ಮೇರ್ ಭಾಷೆಯಲ್ಲಿ ಪ್ರಖ್ಯಾತವಾಗಿರುವ ಕಾಂಬೋಡಿಯಾದ ರಾಮಾಯಣದ ಹೆಸರು “ರಾಮ್‌ಕೇರ್‌’. ಇದರಲ್ಲಿ, ವೈಕುಂಠದ ಅಧಿದೈವ ಮಹಾವಿಷ್ಣು ರಾಮನಾಗಿ ಅವತರಿಸಿದ ಎನ್ನುವುದಕ್ಕೆ ಹೆಚ್ಚಿನ ಪ್ರಾಮುಖ್ಯ ದೊರಕಿದೆ. ವೈಕುಂಠದಲ್ಲಿ ಮಹಾವಿಷ್ಣುವಿನ ದ್ವಾರಪಾಲಕರಾದ ಜಯ-­ವಿಜಯರು ಶಾಪಗ್ರಸ್ತರಾಗಿ, ತಮ್ಮ ಎರಡನೇ ಜನ್ಮದಲ್ಲಿ ರಾವಣ- ಕುಂಭಕರ್ಣರಾಗಿ ಹುಟ್ಟಿದರು ಎನ್ನುವ ಸಂಗತಿ ನಮ್ಮ ಪರಂಪರೆಯಲ್ಲಿ ಕಾಣುತ್ತದೆ. ಅದರಂತೆಯೇ “ರಾಮ್‌ ಕೇರ್‌’ನಲ್ಲಿ ವಿಷ್ಣುವಿನ ದ್ವಾರಪಾಲಕ ಅಕೇಂಗಮೇಸೊ, ರಾವಣನಾಗಿ ಹುಟ್ಟುತ್ತಾನೆ. ಇಲ್ಲಿನ ವಿಶೇಷ ಎಂದರೆ ಸೀತೆ, ದುಷ್ಟ ಶಿಕ್ಷಣಕ್ಕಾಗಿ, ರಾವಣನ ಮಗಳಾಗಿ ಹುಟ್ಟುತ್ತಾಳೆ. ರಾವಣ, ಜೋತಿಷಿ ವಿಭೀಷಣನ ಮಾತಿನಂತೆ ಮಗುವನ್ನು ಪೆಟ್ಟಿಗೆಯಲ್ಲಿಟ್ಟು ದೂರದ ಪ್ರದೇಶದ ನೆಲದಲ್ಲಿ ಹೂಳಿಸುತ್ತಾನೆ. ಅನಂತರ ಅದು ಜನಕನಿಗೆ ಸಿಗುವುದು ಹಾಗೂ ಲವಕುಶರ ಜನನದ ಸಂಗತಿಗಳು- ಇಲ್ಲಿ ನೋಡಬಹುದು.

ಫ್ರೇ ರೇಮ್‌ (ರಾಮ), ಫ್ರೇ ಲೇಕ್‌ (ಲಕ್ಷ್ಮಣ) ಹಾಗೂ ನೀಂಗ್‌ ಸೇದ (ಸೀತಾ)ರ ವನವಾಸದ ಸಮಯದಲ್ಲಿ, ವಾಲ್ಮೀಕಿ ರಾಮಾಯಣದಂತೆಯೇ “ರಾಮ್‌ಖೇರ್‌’ನಲ್ಲಿ ಶೂರ್ಪನಖೀಯ ಪ್ರವೇಶ­ವಾಗಿ, ಅವಳ ಮೂಗು ಕತ್ತರಿಸುವ ಪ್ರಸಂಗವಿದೆ. ಅವಳ ಅಣ್ಣ ಲಂಕೆಯ ರಾಜ, ಕ್ರಾಂಗ್‌ ರೇಪ್‌ (ರಾವಣ) ಸ್ವತಃ ಜಿಂಕೆಯಾಗಿ ರಾಮನನ್ನು ದೂರ ಒಯ್ಯುತ್ತಾನೆ. ನಂತರ ಅವನೇ ಸಾಧುವೇಷದಲ್ಲಿ ಬಂದು ಸೀತೆಯನ್ನು ಕದ್ದೊಯ್ಯುವುದು, ಸುಕ್ರೇಪ್‌ (ಸುಗ್ರೀವ) ನೊಂದಿಗೆ ಸಖ್ಯ, ವಾಲಿ ಹನನ, ಹನುಮಂತ ಸೀತೆಯನ್ನು ಅರಸುತ್ತಾ ಲಂಕೆಗೆ ಹಾರುವುದು ಎಲ್ಲವೂ ಚಿತ್ರಿತವಾಗಿದೆ. ರಾವಣವಧೆ­ಯಾಗಿ ಅಯುಥಾಯಕ್ಕೆ ಬಂದು ಪಟ್ಟಾಭಿಷೇಕವಾದ ಮೇಲೆ ರಾಮಚಂದ್ರ ಸೀತೆಯನ್ನು ಸಂದೇಹಿಸಿ ಕಾಡಿಗೆ ಕಳುಹಿಸುವುದು ಹಾಗೂ ಅಲ್ಲಿ ಲವಕುಶ ಜನನ ಮತ್ತು ಸೀತಾ- ರಾಮರು ಒಂದಾಗುವ ಪ್ರಸಂಗಗಳು ದಾಖಲಾಗಿವೆ.

ಇಲ್ಲಿನ ರಾಜರಿಗೆ ರಾಮನೇ ಆದರ್ಶ. ಹೀಗಾಗಿ, ರಾಮಾಯಣದ ಅನೇಕ ಪ್ರಮುಖ ಘಟನೆಗಳನ್ನು ತಮ್ಮ ಎಲ್ಲ ಪ್ರಮುಖ ದೇಗುಲಗಳ ಭಿತ್ತಿಗಳಲ್ಲಿ ಚಿತ್ರಿಸಿರುವುದಕ್ಕೆ ಇವತ್ತಿಗೂ ಆ ಶ್ರದ್ಧಾಕೇಂದ್ರಗಳು ಸಾಕ್ಷಿ.
**
ರಾಮ-ರಾವಣರ ಯುದ್ಧಕೆ ಥಾಯ್‌ ನೆಲವೇ ಸಾಕ್ಷಿ
ಥಾಯ್ಲೆಂಡ್‌- ಥಾಯ್‌ ಅಂದರೆ “ದೇವ’; ಹಾಗಾಗಿ, ಇದು ದೇವ­ಭೂಮಿ. ಅಲ್ಲಿನ ಜನರು ರಾಮಾಯಣದ ಘಟನೆ­ಗಳೊಡನೆ ತಮ್ಮ ದೇಶದ ಹಲವು ಪ್ರದೇಶಗಳನ್ನು ಗುರುತಿಸುತ್ತಾರೆ. ಈಗಿನ ರಾಜಧಾನಿ ಬ್ಯಾಂಕಾಕ್‌ನಿಂದ 70 ಕಿ.ಮೀ. ದೂರದಲ್ಲಿ “ಅಯುಥಾಯ (ಅಯೋಧ್ಯಾ) ಎಂಬ ನಗರ ಸಯಾಂ ದೇಶ’ ಎಂದು ಕರೆಯುತ್ತಿದ್ದ ಈ ದೇಶದ ರಾಜಧಾನಿಯಾಗಿತ್ತು. 1350ರಿಂದ 1767ರವರೆಗೆ ಅಲ್ಲಿ ರಾಜ್ಯವಾಳಿದ ವಿವಿಧ ವಂಶಗಳ ರಾಜರ ಹೆಸರುಗಳು, ರಾಮಾಧಿಬೋಧಿ, ರಾಮೇಶ್ವರ, ರಾಮರಾಜ, ರಾಮಾಧಿಪತಿ- ಹೀಗೆ ಎಲ್ಲವೂ ರಾಮಮಯ.
“ರಾಮಾಯಣದ ಎಲ್ಲ ಘಟನೆಗಳೂ ನಮ್ಮ ನೆಲದಲ್ಲಿಯೇ ನಡೆದವು’ ಎನ್ನುವುದು ಥಾಯ್ಲೆಂಡ್‌ ಜನರ ನಂಬಿಕೆ. ರಾಮ- ರಾವಣರ ಯುದ್ಧ ನಡೆದಿದ್ದೇ ಅಲ್ಲಂತೆ! ವಾನರ ಪುಂಗವ ಹನುಮಂತ ತಂದ ಸಂಜೀವಿನಿ ಪರ್ವತವೂ ಅಲ್ಲಿಯೇ ಇದೆ!

ರಾವಣನೊಡನೆ ಯುದ್ಧಮಾಡಲು ವಾನರ ಸೈನ್ಯದೊಂದಿಗೆ ಬಂದ ರಾಮನಿಗೆ, ಸಮುದ್ರಕ್ಕೆ ಸೇತುವೆ ಕಟ್ಟಲು, ವಾಲ್ಮೀಕಿ ರಾಮಾಯಣದಲ್ಲಿ 5 ದಿನಗಳು ಸಾಕಾಗುತ್ತವೆ. ಆದರೆ, ರಾಮ್‌ಕೀನ್‌ ರಾಮಾಯಣದಲ್ಲಿ ಇದು ದೀರ್ಘ‌ಕಾಲದ ಕಥಾ­ನಕ.

Advertisement

ಅಯುಥಾಯದಲ್ಲಿ ದೊರೆತಿರುವ 13ನೇ ಶತಮಾನಕ್ಕೂ ಹಿಂದಿನ ಶಿಲಾ ಶಾಸನದಲ್ಲಿ, ರಾಮನ ಗುಹೆ (ಧಾಮ ಪ್ರಾರಾಮಾ) ಹಾಗೂ ಸೀತೆಯ ಗುಹೆಗಳ (ಧಾಮ್‌ ಮಂಗಸಿದಾ) ಉಲ್ಲೇಖವಿದೆ.
ಈಗ, ಥಾಯ್ಲೆಂಡ್‌ನ‌ಲ್ಲಿ ರಾಜನಾಗಿರುವ ಮಹಾ ವಜಿರಲಾಂಕರ್ನ್, ಚಕ್ರಿವಂಶದ 10ನೇ ರಾಮ. ಅದೇ ವಂಶದ 2ನೇ ರಾಮ ಥಾಯ್‌ನ ರಾಮಕಥೆ, “ರಾಮ್‌ ಕೀನ್‌’ (ರಾಮ ಕೀರ್ತಿ) ಅನ್ನು ಗೀತ- ನೃತ್ಯಗಳಿಗೆ ಅನು ಕೂಲವಾಗುವಂತೆ ಅಳವಡಿಸಿದನಂತೆ. ಈಗಲೂ ಇಲ್ಲಿನ ದೇಗುಲಗಳಲ್ಲಿ ರಾಮಾಯಣದ ನೃತ್ಯ ನಡೆಯುತ್ತದೆ.
**
ಮುಸಲ್ಮಾನರ ಪ್ರೀತಿಯ ರಾಮ
ಇಂಡೋನೇಷ್ಯಾದ ಜಾವಾ ಹಾಗೂ ಬಾಲಿ ದ್ವೀಪಗಳಲ್ಲಿನ ರಾಮಾಯಣ ಬಹಳ ವಿಶೇಷ. ವಾಲ್ಮೀಕಿಗಳಿಂದ ರಾಮಾಯಣದ ರಚನೆಯಾದ ಕಾಲದಲ್ಲಿಯೇ ಈ ಪ್ರದೇಶದೊಂದಿಗೆ ಸಂಬಂಧ ವಿತ್ತು ಎನ್ನುವುದು ತಿಳಿದು ಬರುತ್ತದೆ. ರಾವಣನಿಂದ ಅಪ ಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳು ಹಿಸುವ ಸಮಯದಲ್ಲಿ ಸುಗ್ರೀವನು ಸಾಗರ ದಾಚೆಯ “ಜಾವಾ’ (ಯವ) ದ್ವೀಪವನ್ನು ವರ್ಣಿಸುತ್ತಾನೆ. ಸಂಸ್ಕೃತದಲ್ಲಿ “ಯವ’ ಎಂದರೆ “ಬಾರ್ಲಿ’. ಈ ಪ್ರದೇಶ ಬಾರ್ಲಿ ಧಾನ್ಯದಂತೆ ಇರುವುದರಿಂದಾಗಿ ಯವದ್ವೀಪ­ವೆಂದು ಕರೆಯುತ್ತಿದ್ದರು.
ಯತ್ನವಂತೋ ಯವದ್ವೀಪಮ್‌ ಸಪ್ತ
ರಾಜ್ಯೋಪಶೋಭಿತಮ್‌ |
ಸುವರ್ಣ ರೂಪ್ಯಕಮ್‌ ದ್ವೀಪಮ್‌
ಸುವರ್ಣಾಕಾರ ಮಂಡಿತಮ್‌ || 4-40-30
ಯವದ್ವೀಪಮತಿಕ್ರಮ್ಯ
ಶಿಶಿರೋ ನಾಮ ಪರ್ವತಃ |
ದಿವಂ ಸ್ಪೃಶತಿ ಶೃಂಗೇನ
ದೇವದಾನವ ಸೇವಿತಃ || 4-40-31
“”ಸಪ್ತ ರಾಜ್ಯಗಳ ಸೊಬಗನ್ನು ಹೊಂದಿರುವ ಯವದ್ವೀಪದಲ್ಲಿ ಹಾಗೂ ಹೇರಳವಾದ ಚಿನ್ನದ ಗಣಿಗಳಿಂದ ಕೂಡಿರುವ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಮಪತ್ನಿಯನ್ನು ಶೋಧಮಾಡಿ. ಯವದ್ವೀಪದಿಂದಾಚೆಗೆ ಬೃಹತ್‌ ಜಲಪಾತಗಳಿಂದಲೂ ಆಕಾಶವನ್ನು ಮುಟ್ಟುತ್ತಿರುವ ಶಿಖರಗಳಿಂದಲೂ ಕೂಡಿರುವ ಶಿಶಿರವೆಂಬ ಮಹೋನ್ನತ ಪರ್ವತವಿದೆ. ಅಲ್ಲಿನ ದುರ್ಗಮ ಅರಣ್ಯಗಳಲ್ಲಿ ರಾಮನ ಯಶಸ್ವಿನಿಯಾದ ರಾಮಪತ್ನಿಯನ್ನು ಅನ್ವೇಷಣೆಮಾಡಿರಿ.”

ಇಂಡೋನೇಷ್ಯಾದಲ್ಲಿ ಕವಿ ಭಾಷೆಯಲ್ಲಿ ಯೋಗೀಶ್ವರನಿಂದ ರಚಿತವಾಗಿರುವ ರಾಮಾಯಣ­ವನ್ನು ಆದಿಕಾವ್ಯ ಎನ್ನುತ್ತಾರೆ. ಇಂಡೋನೇಷ್ಯಾದ ಸುಪ್ರಸಿದ್ಧ ಪ್ರಾಂಬಣಂ (ಪರಂಬ್ರಹ್ಮ) ದೇಗುಲದ ಮುಂದೆ ನಿರ್ಮಿಸಿರುವ ವಿಸ್ತಾರವಾದ ಭವ್ಯ ನೃತ್ಯಾಂಗಣದಲ್ಲಿ ಪ್ರತಿನಿತ್ಯವೂ ರಾಮಾಯಣದ ನೃತ್ಯ ರೂಪಕವಿರುತ್ತದೆ. ಕಲಾವಿದರ ವಿಶಿಷ್ಟ ವೇಷ ಭೂಷಣಗಳೊಂದಿಗೆ ಗ್ಯಾಮೆಲನ್‌ ಸಂಗೀತ, ನೃತ್ಯ, ಕಲೆ ಹಾಗೂ ನಟನ ಕೌಶಲಗಳು ಒಂದರೊಳ­ಗೊಂದು ಸುಂದರವಾಗಿ ಹೆಣೆದುಕೊಂಡು, 2-3 ತಾಸುಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧರ­ನ್ನಾಗಿಸುತ್ತದೆ. ಈ ನೃತ್ಯರೂಪಕದ 200ಕ್ಕೂ ಮೇಲ್ಪಟ್ಟ ಎಲ್ಲ ಕಲಾವಿದರೂ ಮುಸಲ್ಮಾನರು. “”ಇಸ್ಲಾಮ್‌ ನಮ್ಮ ಧರ್ಮ ಮತ್ತು ರಾಮಾಯಣ ನಮ್ಮ ಸಂಸ್ಕೃತಿ” ಎಂದು ಅವರು ಹೇಳುತ್ತಾರೆ.
**
ರಾವಣನ ಸಂಹರಿಸಿದ್ದು ರಾಮನಲ್ಲ, ಲಕ್ಷ್ಮಣ!
ಲಾವೋದ ರಾಷ್ಟ್ರೀಯ ಮಹಾಕಾವ್ಯ ರಾಮಾಯಣ- “ಫ್ರ ಲಕ್‌ ಫ್ರ ಲಾಮ್‌’ (ಲಕ್ಷ್ಮಣ- ರಾಮ)- “ಪಲಕ್‌ ಪಲಂಗ್‌’
ಈ ರಾಮಾಯಣದ ಮೂಲ ಕಾಂಬೋಡಿಯಾ ದೇಶದ ಅಂಕುರ್‌ ಪ್ರದೇಶಕ್ಕೆ ಹೋಗುತ್ತದೆ. ಲಾವೋ ದೇಶದ ಪ್ರಥಮ ರಾಜ, ಲಾನೆ ಅಂಕುರ್‌ ಪ್ರದೇಶ­ದಿಂದ ಯೋಧರೊಡನೆ, ಕಲಾವಿದರು, ಸಂಗೀತಗಾರರು ಹಾಗೂ ನೃತ್ಯಪಟು­ಗಳನ್ನೂ ಕರೆತಂದ ಎನ್ನುತ್ತದೆ ಇಲ್ಲಿನ ಇತಿಹಾಸ. ಅದರೊಂದಿಗೇ ಭಾರತೀಯ ಸಂಸ್ಕೃತಿಯನ್ನು ಹೊತ್ತು ತಂದ ರಾಮಾ­ಯಣವೂ ರಚಿತವಾಯಿತು. ಇಲ್ಲಿ ಹನುಮಂತ ಪ್ರಮುಖ ಸ್ಥಾನ ಪಡೆದಿದ್ದಾನೆ. ಯೋಧರು ಹಾಗೂ ಕುಸ್ತಿಪಟುಗಳು ಹನುಮಾನ್‌ ಯಂತ್ರವನ್ನು ಧರಿಸುವ ಪರಂಪರೆ ಕಾಣಿಸುತ್ತದೆ. ಬುದ್ಧಿಶಕ್ತಿ, ಸಾಮರ್ಥ್ಯ, ಸ್ವಾಮಿಭಕ್ತಿಗಳ ಪ್ರತೀಕವಾದ ಹನು ಮಂತನ ಯಂತ್ರವನ್ನು ರಕ್ಷಣೆಗಾಗಿ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. “ತೇರಾವಾದ’ ಬೌದ್ಧಮತದ ಪ್ರಭಾವದಿಂದಾಗಿ, ಅಲ್ಲಿ ಅಹಿಂಸೆಯ ಪ್ರತೀಕನಾದ ರಾಮನನ್ನು ಬುದ್ಧನ ಹಿಂದಿನ ಅವತಾರ ಎನ್ನುವ ಪರಂಪರೆಯಿದೆ. ಧರ್ಮ- ತ್ಯಾಗಗಳನ್ನು ಎತ್ತಿಹಿಡಿ­ಯುವ ಈ ರಾಮಾಯಣದಲ್ಲಿ, ರಾವಣನ ವಧೆಯಾಗು­ವುದು ಲಕ್ಷ್ಮಣನಿಂದ. ಲಾವೋದ ರಾಷ್ಟ್ರೀಯ ಸಂಗೀತ- ನೃತ್ಯ ಶಾಲೆಗಳಲ್ಲಿ ರಾಮಾಯಣದ ಬ್ಯಾಲೆ ಕಲಿಸುತ್ತಾರೆ. ಬೌದ್ಧ ಮಠಗಳಲಿ, ಸ್ತೂಪಗಳಲ್ಲಿ ರಾಮಾಯಣದ ಶಿಲ್ಪಗಳಿವೆ.

(ಲೇಖಕಿ: “ಸಾಗರದಾಚೆ ಹರಡಿರುವ ಭಾರತೀಯ ಸಂಸ್ಕೃತಿ’ ಸಂಶೋಧನ ಕೃತಿಯ ಕರ್ತೃ)

– ಡಾ| ಜಯಂತಿ ಮನೋಹರ್‌

Advertisement

Udayavani is now on Telegram. Click here to join our channel and stay updated with the latest news.

Next