Advertisement

ರಮಾನಾಥ ರೈ ವಜಾಕ್ಕೆ ಯುವಮೋರ್ಚಾ ಆಗ್ರಹ

07:20 AM Aug 18, 2017 | |

ಉಡುಪಿ: ರಾಜ್ಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರ ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಪಿಎಫ್ಐ, ಕೆಎಫ್ಡಿ ಸಂಘಟನೆಗಳ ಪಾತ್ರ ರುಜುವಾತಾಗಿದ್ದು ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. 

Advertisement

ಈ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆ ಜತೆ ಸಂಪರ್ಕ ಹೊಂದಿವೆ. ಸಿಮಿ ಸಂಘಟನೆಯ ಪದಾಧಿಕಾರಿಗಳೇ ಈ ಸಂಘಟನೆಗಳಲ್ಲಿಯೂ ಪದಾಧಿಕಾರಿಗಳಾಗಿರುವುದು ಕಾನೂನಿಗೆ ಮಾಡಿದ ಅಣಕ. ದಕ್ಷಿಣ ಭಾರತದಲ್ಲಿ ಜಾಲ ಹರಡಿಕೊಂಡಿರುವ ಸಂಘಟನೆ ವಿಶೇಷವಾಗಿ ಕರ್ನಾಟಕದಲ್ಲಿ ಹಿಂದುಗಳ ಕೊಲೆ, ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಲಾಗಿದೆ. 

ಈ ಸಂಘಟನೆಗಳ ಬ್ಯಾಂಕ್‌ ಖಾತೆ, ಚರಾಸ್ತಿ, ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಹಿಂದುಗಳ ಮೇಲೆ ನಡೆಸಿದ ಎಲ್ಲಾ ಹತ್ಯೆ, ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು, ಇಂತಹ ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ನಾಯಕರು ಮನವಿ ಸಲ್ಲಿಸಿದರು. 

ಯುವ ಮೋರ್ಚಾ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಮಾಜಿ ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌, ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಾಯಕರಾದ ಗಿರೀಶ ಅಂಚನ್‌, ಸುಪ್ರಸಾದ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಉಪ್ಪೂರು, ಸುರೇಶ ನಾಯಕ್‌, ಯಶಪಾಲ್‌ ಸುವರ್ಣ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ರವಿ ಅಮೀನ್‌ ಮೊದಲಾದವರು ಪಾಲ್ಗೊಂಡಿದ್ದರು. 

ಬ್ಯಾನರ್‌ ಪ್ರಮಾದ- ವಿಷಾದ
ಶರತ್‌ ಮಡಿವಾಳರ ಹೆಸರಿನ ಬದಲು ಪ್ರಶಾಂತ್‌ ಮಡಿವಾಳ ಹೆಸರನ್ನು ಹೊತ್ತ ಬ್ಯಾನರ್‌ನಡಿ ಪ್ರತಿಭಟನೆ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಯಿತು. “ಇದು ಕಣ್ತಪ್ಪಿನಿಂದ ಆಗಿ ಹೋಯಿತು. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next