ರಾಮನಗರ: ಅಧಿಕಾರ ಇದ್ದರೂ, ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಬಗ್ಗೆ ಕಾಳಜಿ ಇದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದ ಗುರು ಭವನದಲ್ಲಿ ನಗರದ ಖಾಸಗಿ, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿವೆ. ಬೋಧನಾ ಶುಲ್ಕ ಸಂದಾಯವಾಗುತ್ತಿಲ್ಲ ಎಂಬ ಕಾರಣಕ್ಕೆ ಆಡಳಿತ ಮಂಡಳಿಗಳು ತಮ್ಮ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ. ಖಾಸಗಿ, ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಂಕಷ್ಟದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅರಿವಿದೆ ಎಂದರು,
ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ದಿನಸಿ ಕಿಟ್ ನೀಡಲಾಗುತ್ತಿದೆ. ಇಕ್ಬಾಲ್ ಹುಸೇನ್ ಅವರು ಯಾವ ಅಧಿಕಾರ ಹಿಡಿದಿಲ್ಲ. ಆದರೆ, ಅವರಿಗೆ ಸಮಾಜದ ಬಗ್ಗೆ ತುಡಿತವಿದೆ. ಹೀಗಾಗಿಯೇ ಅವರು ಖಾಸಗಿ ಶಾಲೆಗಳ ಶಿಕ್ಷಕರಿಗೂ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರನ್ನು ಬಿಕ್ಷುಕರನ್ನಾಗಿ ಮಾಡಬೇಡಿ: ಬೋಧನ ಶುಲ್ಕ ಸಂದಾಯವಾಗದಿರುವ ಕಾರಣ ಖಾಸಗಿ, ಅನುದಾನರಹಿತ ಶಾಲೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ವೇತನ ಸಿಗದೆ ಜೀವನ ನಡೆಸಲು ಪರ ದಾಡುತ್ತಿರುವ ಬಗ್ಗೆ ಕೆಲವು ಶಿಕ್ಷಕರು ತಮ್ಮ ಗಮನ ಸೆಳೆದರು. ತಾವು ಡಿಡಿಪಿಐ ಅವರಿಗೆ ಕರೆ ಮಾಡಿ, ಅಗತ್ಯವಿರುವ ಸಿಬ್ಬಂದಿಗೆ ಕನಿಷ್ಠ ಶೇ.50ರಷ್ಟು ವೇತನ ಕೊಡಿಸಿ ಎಂದು ತಾವು ಸಲಹೆ ನೀಡಿದ್ದಾಗಿ ತಿಳಿಸಿದರು. ಸದ್ಯ ದಿನಗೂಲಿಗೆ ಕನಿಷ್ಠ ಕೂಲಿ ದರ ದಿನನಿತ್ಯ 300 ರಿಂದ 350 ರೂ. ಇದೆ.
ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಇಷ್ಟೂ ವೇತನ ಸಿಗುತ್ತಿಲ್ಲ ಎಂಬ ವಿಚಾರ ತಮಗೆ ಗೊತ್ತಾಯಿತು. ಶೇ.50ರಷ್ಟು ವೇತನ ಕೊಟ್ಟರೂ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದು ತಮಗೆ ಅರಿವಾಯಿತು ಎಂದರು. ಕೋವಿಡ್ ಕರ್ಫ್ಯೂ ಕಾರಣ ಬಹುತೇಕ ವೃತ್ತಿದಾರರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಯಾಗಿರಲಿಲ್ಲ. ಹೀಗಾಗಿ ತಾವು ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದಿರುವ ಎಂ.ಎಲ್.ಸಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿ ಶಿಕ್ಷಕರನ್ನು ಬಿಕ್ಷುಕರನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದ್ದಾಗಿ ಹೇಳಿ ದರು. ತದನಂತರ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸ್ಪಂದಿಸಲು ಉದ್ದೇಶಿಸಿದೆ ಎಂದರು.
ಶಿಕ್ಷಕರ ಮಹತ್ವ: ತಾವಿಂದು ಸಂಸದನಾಗಿ, ವೇದಿಕೆ ಮೇಲೆ ನಿಂತು ಭಾಷಣ ಮಾಡಲು ತಮಗೆ ಶಿಕ್ಷಣ ನೀಡಿದ ಶಿಕ್ಷಕರೇ ಸ್ಫೂರ್ತಿ ಮತ್ತು ಶಕ್ತಿ. ದೇಶದ ಭವಿಷ್ಯ ಬರೆಯಬಲ್ಲ ಸಾಮರ್ಥ್ಯ ಶಿಕ್ಷಕ ವೃತ್ತಿಗಿದೆ ಎನ್ನುವ ಮೂಲಕ ಶಿಕ್ಷಣ ಮತ್ತು ಶಿಕ್ಷಕರ ಮಹತ್ವವನ್ನು ಸಾರಿದರು. ವಿಧಾನ ಪರಿಷತ್ ಸದಸ್ಯ ಸಿ. ಎಂ.ಲಿಂಗಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಲಾಯಿತು. ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಪ್ರಮುಖರಾದ ಕೆ.ಶೇಷಾದ್ರಿ, ಎ.ಬಿ.ಚೇತನ್ ಕುಮಾರ್, ಕಾಂತರಾಜ ಪಟೇಲ್, ನರಸಿಂಹಯ್ಯ ಹಾಜರಿದ್ದರು.