Advertisement
ಹೌದು, ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರೂ, ಅವರು ದೇವೇಗೌಡರ ಕುಟುಂಬದ ಭಾಗ. ರಾಮನಗರ ಜಿಲ್ಲೆಯಲ್ಲಿ ಅವರು ಗಳಿಸಿದ ಮತ ಡಿಕೆಎಸ್ ಸಹೋದರರ ಪ್ರಾಬಲ್ಯದಲ್ಲಿ ನಿತ್ರಾಣಗೊಂಡಿದ್ದ ಜಿಲ್ಲಾ ಜೆಡಿಎಸ್ ಗೆ ಶಕ್ತಿ ಮದ್ದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಎಚ್. ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಹೊರತು ಪಡಿಸಿದರೆ, ಉಳಿದ 3 ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು.
Related Articles
Advertisement
ಚನ್ನಪಟ್ಟದಲ್ಲಿ ಜೆಡಿಎಸ್, ಬಿಜೆಪಿ ನಿರೀಕ್ಷಿಸಿದ್ದ ಮತಗಳ ಲೀಡ್ ಅನ್ನು ಸಾಧಿಸಲು ಸಾಧ್ಯವಾಗದಿದ್ದರೂ ಕಳೆದ ಕ್ಷೇತ್ರದಲ್ಲಿ ಮಂಜುನಾಥ್ 22 ಸಾವಿರ ಮತಗಳ ಲೀಡ್ ಪಡೆದುಕೊಂಡಿದ್ದಾರೆ. ಇಲ್ಲಿ ಸುರೇಶ್ ಗಣನೀಯ ಪ್ರಮಾಣದಲ್ಲಿ ತನ್ನ ಮತ ಹೆಚ್ಚಿಸಿಕೊಂಡಿದ್ದಾರೆ.
ಉಭಯ ನಾಯಕರಿಗೆ ಸ್ವಕ್ಷೇತ್ರಗಳಲ್ಲಿ ಎಚ್ಚರಿಕೆ ಗಂಟೆ: ಕನಕಪುರದಲ್ಲಿ ಮತಗಳ ಪ್ರಮಾಣ ತೀವ್ರ ಕುಸಿತ ಡಿ.ಕೆ. ಶಿವಕುಮಾರ್‌ರಿಗೆ ಎಚ್ಚರಿಕೆ ಗಂಟೆಯಾಗಿದ್ದರೆ, ಇತ್ತ ಚನ್ನಪಟ್ಟಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲೀಡ್ ದೊರೆಯದಿರುವುದು ಮತ್ತು ಸುರೇಶ್ ಗಣನೀಯ ಮತ ಪಡೆದಿರುವುದು ಕುಮಾರಸ್ವಾಮಿ, ಯೋಗೇಶ್ವರ್ ರಿಗೆ ಎಚ್ಚರಿಕೆ ಗಂಟೆಯಾಗಿದೆ.
ಮುಂದೆ ಚನ್ನಪಟ್ಟಣದಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಆಸೆ ಕಾಂಗ್ರೆಸ್‌ನಲ್ಲಿ ಮೂಡಿದೆ. ಸ್ಪರ್ಧೆಗೆ ಸುರೇಶ್ ಹೆಸರು ಕೇಳಿ ಬರುತ್ತಿದೆ. ಇನ್ನು ಕನಕಪುರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲ್ಲಬಹುದು ಎನ್ನುವ ಚರ್ಚೆ ಜೆಡಿಎಸ್ ನಾಯಕರಲ್ಲಿ ಕೇಳಿ ಬರುತ್ತಿವೆ.
ಸೇಡು ತೀರಿಸಿಕೊಂಡ ಎಚ್‌ಡಿಕೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಕರ್ಮಭೂಮಿ ಎನಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಜೆಡಿಎಸ್ ಕೋಟೆಯನ್ನು ಕಾಂಗ್ರೆಸ್ ಉರುಳಿಸಿದ್ದರು. ರಾಮನಗರದಲ್ಲಿ ನಿಖಿಲ್ ಸೋಲಿನ ಹಿಂದೆ ಡಿ.ಕೆ.ಸುರೇಶ್ ಪಾತ್ರ ಸಾಕಷ್ಟಿತ್ತು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಭಾವನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.
ಕನಕಪುರಕ್ಕೆ ಡಾ.ಅನುಸೂಯ ಮಂಜುನಾಥ್ ಸಾರಥ್ಯ?: ಕನಕಪುರದಲ್ಲಿ ಡಿ.ಕೆ.ಎಸ್ ಸಹೋದರರಿಗೆ ಟಕ್ಕರ್ ಕೊಡಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರಿ ಡಾ. ಅನುಸೂಯ ಮಂಜುನಾಥ್‌ರಿಗೆ ಕ್ಷೇತ್ರದ ಉಸ್ತುವಾರಿ ವಹಿಸಬೇಕು ಎಂಬ ಕೂಗು ಕನಕಪುರ ಜೆಡಿಎಸ್ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ. ಕಳೆದ ಶನಿವಾರ ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದಾಗ, ಈ ಅಭಿಲಾಷೆಯನ್ನು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಬಹಿರಂಗವಾಗೇ ವ್ಯಕ್ತಪಡಿಸಿದರು. ಮೈತ್ರಿ ಅಭ್ಯರ್ಥಿ ಗಣನೀಯ ಪ್ರಮಾಣದ ಸ್ಕೋರ್ ಮಾಡಿರುವುದು ಕಳೆದ 34 ವರ್ಷಗಳಿಂದ ಡಿ.ಕೆ.ಶಿವಕುಮಾರ್ ಪ್ರಾಬಲ್ಯದ ವಿರುದ್ಧ ಹೋರಾಟ ಮಾಡುತ್ತಿದ್ದ ಜೆಡಿಎಸ್ ನಾಯಕರಲ್ಲಿ ಹುರುಪು ಮೂಡಿಸಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಬಲ ಪೈಪೋಟಿ ನೀಡಿದವರೆಲ್ಲಾ ಇದೀಗ ಅವರಿಗೆ ಶರಣಾಗಿ ಅವರ ಜತೆಗೆ ನಿಂತಿರುವ ಹಿನ್ನೆಲೆ ಪ್ರಬಲ ನಾಯಕತ್ವ ಬೇಕು ಎಂಬುದು ಕನಕಪುರ ಜೆಡಿಎಸ್ ಕಾರ್ಯಕರ್ತರ ಬೇಡಿಕೆಯಾಗಿದ್ದು ಡಾ.ಅನುಸೂಯಾ ಅವರಿಗೆ ಜವಾಬ್ದಾರಿ ವಹಿಸಲಿದ್ದಾರೆ ಎಂಬ ಚರ್ಚೆ ನಡೆದಿದೆ.
– ಸು.ನಾ.ನಂದಕುಮಾರ್