Advertisement

ಕಾಂಗೆ‹ಸ್‌ “ಖೆಡ್ಡಾ’ಗೆ ಬಿದ್ದರೆ ಬಿಜೆಪಿ ಅಭ್ಯರ್ಥಿ?

12:30 PM Nov 02, 2018 | Team Udayavani |

ಬೆಂಗಳೂರು: ರಾಮನಗರ ಉಪಚುನಾವಣೆ ಮತದಾನಕ್ಕೆ 48 ಗಂಟೆ ಬಾಕಿ ಇರುವಾಗ ಪಕ್ಷದ ಅಧಿಕೃತ ಅಭ್ಯರ್ಥಿ
ಸ್ಪರ್ಧೆಯಿಂದ ಹಿಂದೆ ಸರಿದು ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಿದ್ದರಿಂದ ಬಿಜೆಪಿಗೆ ಮರ್ಮಾಘಾತವಾಗಿದೆ. ಈ
ಕ್ಷಿಪ್ರ ಬೆಳವಣಿಗೆಯನ್ನು ಕಾಂಗ್ರೆಸ್‌ ತೋಡಿದ “ಖೆಡ್ಡಾ’ಕ್ಕೆ ಬಿಜೆಪಿ ಬಿದ್ದಿದೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.

Advertisement

ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯರ ಪುತ್ರನನ್ನೇ ಸೆಳೆದು ಅಚ್ಚರಿಯ ಫ‌ಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಅಧಿಕೃತ ಅಭ್ಯರ್ಥಿಯೇ “ಕೈ’ ಕೊಡುವಂತೆ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದು, ಕಮಲ ಪಾಳೆಯ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿಸಿದೆ. ಅಧಿಕೃತ ಅಭ್ಯರ್ಥಿ ಸ್ಪಧೆಯಿಂದ ಹಿಂದೆ ಸರಿದಿರುವುದರಿಂದ ಯಾರಿಗೆ ಮತದಾನ ಮಾಡಬೇಕು ಎಂಬ ಗೊಂದಲ ಕಾರ್ಯಕರ್ತರು, ಬೆಂಬಲಿಗರನ್ನು ಕಾಡುತ್ತಿದೆ.

ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾದ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ
ಗೆಲ್ಲುವ ಮೂಲಕ ಮೈತ್ರಿ ಪಕ್ಷಕ್ಕೆ ಜನಬೆಂಬಲವಿದೆ ಎಂಬುದನ್ನು ಸಾಬೀತು ಪಡಿಸುವುದು ಜೆಡಿಎಸ್‌ಗೆ ಅನಿವಾರ್ಯವಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ಪಕ್ಷದ ಹಿಡಿತ ಸಾಧಿಸುವುದು ಅಷ್ಟೇ ಮುಖ್ಯವಾಗಿತ್ತು. ಅಂತಿಮವಾಗಿ ಕುಮಾರಸ್ವಾಮಿ ಪತ್ನಿ ಅನಿತಾ
ಕುಮಾರಸ್ವಾಮಿಯವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮೈತ್ರಿ ಸರ್ಕಾರ ನಿರ್ಧರಿಸಿತ್ತು. ಹಾಗಿದ್ದರೂ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಒಮ್ಮತ ಮೂಡದಿರುವುದು ಹಲವು ಬಾರಿ ಬಹಿರಂಗವಾಗಿತ್ತು. ಈ ಒಡಕಿನ ಲಾಭ ಪಡೆಯುವ ಲೆಕ್ಕಾಚಾರ ನಡೆಸಿದ್ದ ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಪುತ್ರ ಎಲ್‌. ಚಂದ್ರಶೇಖರ್‌ರನ್ನು ಪಕ್ಷಕ್ಕೆ ಸೆಳೆದು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿತ್ತು.

ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ಕಾಂಗ್ರೆಸ್‌ ಕಟ್ಟಾಳುವಿನ ಪುತ್ರನನ್ನೇ ಸ್ಪರ್ಧೆಗಿಳಿಸಿ
ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿತ್ತು. ಹಾಗೆಂದೇ ಒಕ್ಕಲಿಗ ಸಮುದಾಯದ ನಾಯಕರಾದ ಕೇಂದ್ರ ಸಚಿವ
ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಮುಖಂಡ ಮುನಿರಾಜುಗೌಡರನ್ನು ಚುನಾವಣಾ
ಉಸ್ತುವಾರಿಯನ್ನಾಗಿ ನೇಮಿಸಿ ಮತದಾರರನ್ನು ಸೆಳೆಯಲು ಮುಂದಾಗಿತ್ತು. ಆದರೆ ರಾತ್ರಿ ಬೆಳಗಾಗುವುದರಲ್ಲಿ   ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರ ಮಗ್ಗುಲಲ್ಲಿ ಕುಳಿತು ಜೆಡಿಎಸ್‌ ಬೆಂಬಲಿಸುವುದಾಗಿ ಘೋಷಿಸಿರುವುದು,ಬಿಜೆಪಿಗೆ ಮಹಾ ಆಘಾತ ನೀಡಿದಂತಾಗಿದೆ.

ಬಿಜೆಪಿಗೆ “ಖೆಡ್ಡಾ’ ತೋಡಿತೇ ಕಾಂಗ್ರೆಸ್‌?: ಕಾಂಗ್ರೆಸ್‌ ನಾಯಕ ಸಿ.ಎಂ.ಲಿಂಗಪ್ಪ ಅವರ ಪುತ್ರನನ್ನು ಅ.10ರಂದು
ಬಿಜೆಪಿಗೆ ಬರ ಮಾಡಿಕೊಳ್ಳಲಾಯಿತು. ಆ ಮೂಲಕ ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರಕ್ಕೆ ತಿರುಗೇಟು ನೀಡಲು ಪ್ರತಿತಂತ್ರ ಹೆಣೆದಿರುವುದಾಗಿ ಬಿಜೆಪಿ ಬೀಗಿತ್ತು. ಆಗ ಸಿ.ಎಂ. ಲಿಂಗಪ್ಪಪುತ್ರನ ಬಗ್ಗೆ ಒಂದಷ್ಟು ಆಕ್ರೋಶದ ಮಾತುಗಳನ್ನಾಡಿದ್ದು ಬಿಟ್ಟರೆ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಆಕ್ರೋಶ ಇಲ್ಲವೇ ಅಸಮಾಧಾನದ ಮಾತುಗಳನ್ನಾಡಿರಲಿಲ್ಲ. ಅಲ್ಲದೇ ಪ್ರಚಾರದ ವೇಳೆಯೂ ಎಲ್ಲಿಯೂ ಚಂದ್ರಶೇಖರ್‌ ವಿರುದ್ಧ
ಕಾಂಗ್ರೆಸ್‌, ಜೆಡಿಎಸ್‌ ನಾಯಕರು ವಾಗ್ಧಾಳಿ ನಡೆಸಿದ್ದು ಕಂಡುಬರಲಿಲ್ಲ.

Advertisement

ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಮೈತ್ರಿ ಸರ್ಕಾರದ ಅಭ್ಯರ್ಥಿಯನ್ನೇ ಬೆಂಬಲಿಸುವಂತೆ ಮನವೊಲಿಸುತ್ತಿದ್ದ ಕಾಂಗ್ರೆಸ್‌ ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯನ್ನೇ ಮರಳಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲ ಬೆಳವಣಿಗೆ ಡಿ.ಕೆ. ಸಹೋದರರ ಪೂರ್ವಯೋಜಿತ ತಂತ್ರ ಎಂದೇ ಬಣ್ಣಿಸಲಾಗುತ್ತಿದೆ. ಕಾಂಗ್ರೆಸ್‌ ನಾಯಕರೇ ಚಂದ್ರಶೇಖರ್‌ರನ್ನು ಬಿಜೆಪಿಯತ್ತ ಹೋಗುವಂತೆ ಮಾಡಿ ಬಳಿಕ
ಅಭ್ಯರ್ಥಿಯಾಗಿ ಕಣಕ್ಕಿಳಿದು ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ “ಮಾಸ್ಟರ್‌ ಪ್ಲಾನ್‌’ ರೂಪುಗೊಂಡಿತ್ತೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಒಟ್ಟಿನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದ ರಾಮನಗರದಲ್ಲಿ ಪ್ರಬಲ ಸ್ಪರ್ಧೆಯೊಡ್ಡುವ ಬಿಜೆಪಿಯ ಹುಮ್ಮಸ್ಸು ಮತದಾನಕ್ಕೂ ಮುನ್ನವೇ ಕಮರಿದೆ. ಈ ಬೆಳವಣಿಗೆ ರಾಮನಗರ ಜಿಲ್ಲೆ ಮಾತ್ರವಲ್ಲದೆ ರಾಜ್ಯ ಬಿಜೆಪಿಯಲ್ಲೂ ತಲ್ಲಣ ಸೃಷ್ಟಿಸಿದೆ.

ಬೆದರಿಕೆ ತಂತ್ರ
ಇನ್ನೊಂದೆಡೆ ಮೈತ್ರಿ ಸರ್ಕಾರದ ಪ್ರಮುಖರೇ ಚಂದ್ರಶೇಖರ್‌ಗೆ ಬೆದರಿಕೆಯೊಡ್ಡಿ ಸ್ಪರ್ಧೆಯಿಂದ
ಹಿಂದೆ ಸರಿಯುವಂತೆ ಮಾಡಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಚಂದ್ರಶೇಖರ್‌ ವಿರುದ್ಧ ಕೆಲ ಪ್ರಕರಣಗಳಿದ್ದು,
ಅವುಗಳನ್ನಾಧರಿಸಿ ತೊಂದರೆಗೆ ಸಿಲುಕಿಸುವುದಾಗಿ ಬೆದರಿಸಿ ಪಕ್ಷ ತೊರೆಯುವಂತೆ ಒತ್ತಡ ಹೇರಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next