Advertisement

ದಶಪಥ ಹೆದ್ದಾರಿಯಲ್ಲಿ ಕಳ್ಳರದ್ದೇ ಕಾರುಬಾರು

12:53 PM Sep 18, 2022 | Team Udayavani |

ರಾಮನಗರ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಹಲವು ಅವಾಂತರಗಳ ಸರಮಾಲೆ ಹೆಚ್ಚಾಗಿವೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜನತೆ ಹೈರಾಣಾಗಿದ್ದರು ಅದರಲ್ಲೂ ಹೆದ್ದಾರಿ ರಸ್ತೆಯಿಂದಾದ ಅವಾಂತರಗಳು ಕಡಿಮೆಯೆನ್ನುತ್ತಲೇ, ಇದೀಗ ಹೆದ್ದಾರಿಯಲ್ಲಿ ಕಳ್ಳರ ಹಾವಳಿ ಜೋರಾಗಿದೆ.

Advertisement

ಇಲ್ಲಿ ತಂತಿಬೇಲಿಯೇ ಮಂಗಮಾಯವಾಗಿವೆ ಎಂಬ ದೂರುಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿವೆ. ಬೆಂಗಳೂರು ಮೈಸೂರು ದಶಪಥರಸ್ತೆ ಹಲವು ನಿರೀಕ್ಷೆಗಳನ್ನು ಹೊತ್ತು ಆರಂಭವಾಗಿತ್ತು. ಲೋಕಾರ್ಪಣೆಗೂ ಮುನ್ನವೇ ವರುಣಾಘಾತಕ್ಕೆ ತುತ್ತಾಗಿ ಅದರ ಲೋಪಗಳ ಫಲವಾಗಿ ಪ್ರವಾಹ ಭೀತಿಯನ್ನು ಎದುರಿಸುವಂತಾಗಿತ್ತು. ಇದೀಗ ಅದೇ ದಶಪಥಕ್ಕೆ ಕಳ್ಳರು ಲಗ್ಗೆ ಇಟ್ಟು ಸರ್ವಿಸ್‌ ರಸ್ತೆ ಹಾಗೂ ಹೆದ್ದಾರಿ ರಸ್ತೆಯ ನಡುವಿನ ವಿಭಜಕದಲ್ಲಿ ಹಾಕಿರುವ ಕಬ್ಬಿಣದ ಬೇಲಿ ರಾತ್ರೋ ರಾತ್ರಿ ಇಲ್ಲವಾಗುತ್ತಿವೆ, ಇದು ಹೆದ್ದಾರಿ ಪ್ರಾಧಿಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಪೊಲೀಸರಿಗೆ ತಲೆನೋವು: ಬಿಡದಿಯ ಶೇಷಗಿರಿಹಳ್ಳಿ ಬಳಿಯಿಂದ – ರಾಮನಗರ – ಚನ್ನಪಟ್ಟಣ ನಡುವಿನ ಬೈಪಾಸ್‌ನಲ್ಲಿ ವಿಭಜಕಕ್ಕೆಂದು ಹಾಕಿರುವ ಕಬ್ಬಿಣದ ಬೇಲಿಗಳ ಮತ್ತು ಕಂಬಗಳನ್ನು ಕಳ್ಳರು ದೋಚುತ್ತಿದ್ದಾರೆ. ಇದರಿಂದ ಹೈರಾಣಾದ ಸಿಬ್ಬಂದಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡುತ್ತಿದ್ದು ಕಳವು ತಡೆ ತಲೆನೋವಾಗಿಯೇ ಪರಿಣಮಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಬೈಪಾಸ್‌ ಹಾದು ಹೋಗುವ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ 15ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ಬೆಂಗಳೂರು – ಮೈಸೂರು ನಡುವಿನ ದಶಪಥದ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಎಂಟ್ರಿ ಎಕ್ಸಿಟ್‌ ಪಾಯಿಂಟ್‌ಗಳನ್ನು ಹೊರತು ಪಡಿಸಿ ಎಲ್ಲಾ ಕಡೆಗಳಲ್ಲಿ ಸರ್ವಿಸ್‌ ರಸ್ತೆಯನ್ನು ಈ ಬೇಲಿ ಮೂಲಕವೇ ಹೆದ್ದಾರಿಯಿಂದ ವಿಭಜಿಸಲಾಗುತ್ತಿದೆ.

ಇಡೀ ದಿನ ಬೇಲಿಯನ್ನು ಅಳವಡಿಸಿ ಬಂದು, ಮರುದಿನ ಪರಿಶೀಲನೆ ಮಾಡಿದರೆ ತಂತಿ ಬೇಲಿಗಳೇ ಮಾಯವಾಗಿ ಬಿಟ್ಟಿರುತ್ತವೆ. ಬಹುತೇಕ ಎಲ್ಲಾ ಕಡೆಗಳಲ್ಲಿ ವೆಲ್ಡಿಂಗ್‌ ಮಾಡುವ ಮೂಲಕ ಬೇಲಿಗಳನ್ನು ಬಲಿಷ್ಠಗೊಳಿಸಲಾಗಿದೆ. ಅದನ್ನೇ ಕತ್ತರಿಸಿ ಹೊತ್ತೂಯ್ಯುತ್ತಿದ್ದಾರೆ. ಇದು ಅನುಭವಿ ಕಳ್ಳರು ಮಾತ್ರ ಮಾಡಲು ಸಾಧ್ಯ ಮತ್ತು ಕಬ್ಬಿಣವನ್ನು ಕತ್ತರಿಸಲು ಬೇಕಾದ ಯಂತ್ರಗಳನ್ನು ಹೊಂದಿರುವವರೇ ಈ ಕಾರ್ಯದಲ್ಲಿದ್ದಾರೆ ಎನ್ನುವುದಂತೂ ಸ್ಪಷ್ಟ.

Advertisement

ಈಗಾಗಲೇ ಕೆಂಗೇರಿ ಬಳಿುಂದ ಕ್ರೈಸ್ಟ್‌ ಕಾಲೇಜಿನಿಂದ ಮದ್ದೂರಿನ ನಿಡಘಟ್ಟವರೆಗೆ ಎರಡೂ ಬದಿಯ ಸಂಚಾರಕ್ಕೆ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ಹೆದ್ದಾರಿಯಲ್ಲಿಯೂ ಈಗಾಗಲೇ ಗಸ್ತು ವಾಹನಗಳನ್ನು ಪೊಲೀಸ್‌ ಇಲಾಖೆ ನಿಯೋಜಿಸಿದೆ. ಇದರ ಹೊರತಾಗಿಯೂ ಹೆದ್ದಾರಿಯಲ್ಲಿ ಮತ್ತಷ್ಟು ನಿಗಾವನ್ನು ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್‌ ಇಲಾಖೆಯೇ ಮಾಡಬೇಕಿದೆ. ಹೆದ್ದಾರಿಯಲ್ಲಿ ಕಳವು ಮಾಡಿದ್ದ ಕಬ್ಬಿಣದ ಬೇಲಿ ಮತ್ತು ಕಂಬಗಳನ್ನು ತಮ್ಮ ಕುರಿಶೆಡ್‌ ರಕ್ಷಣೆಗೆ ಬಳಕೆ ಮಾಡಿಕೊಂಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ, ಮೊದಲಿಗೆ ತಾನೇ ಹಣ ಕೊಟ್ಟು ತಂದಿದ್ದೇ ಎಂದು ವಾದ ಮಾಡಿದ್ದ ವ್ಯಕ್ತಿ, ನಂತರ ಇದನ್ನು ಯಾರಿಂದಲೋ ಕೊಂಡುಕೊಂಡೆ ಎಂದು ಒಪ್ಪಿಕೊಂಡಿದ್ದಾನೆ. ಇಂತಹ ಅದೆಷ್ಟು ಕುರಿ, ಕೋಳಿ ಶೆಡ್‌ಗಳಿಗೆ ಹೆದ್ದಾರಿ ಬೇಲಿ ಬಳಕೆ ಆಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚ ಬೇಕಿದೆ.

ಸುಮಾರು 25 ಲಕ್ಷ ರೂ ಮೌಲ್ಯದ ವಸ್ತುಗಳು ಕಳುವಾಗಿವೆ. ಈ ಬಗ್ಗೆ ಹೆದ್ದಾರಿ ವ್ಯಾಪ್ತಿಯಲ್ಲಿನ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿದ್ದೇವೆ. ಆದರ್ಶಗೌಡ, ಹೆದ್ದಾರಿ ಪ್ರಾಧಿಕಾರದ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next