ರಾಮನಗರ: ಒಂದೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಗುರುವಾರ ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಇಂದು ಮತ್ತೆ ಹೇಳಿಕೆ ನೀಡಿದ್ದು, ‘ಅವರು ಹೋರಾಟ ಮಾಡಿದ್ದಾರೆ ಅದಕ್ಕೆ ಅವಕಾಶ ಕೇಳುತ್ತಿದ್ದೇವೆ’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪರ ನಿಲ್ಲಬೇಕೆಂಬ ಯಾವ ಒತ್ತಡವಿಲ್ಲ. ನ್ಯಾಯ, ಧರ್ಮ, ಸತ್ಯಕ್ಕೆ ಕಾಲ ಇದೆ. ಶ್ರಮ ಇದ್ದರೆ ಫಲವಿದೆ. ಕೆಲಸ ಮಾಡಿದ್ದಾರೆ ಬೆವರು ಸುರಿಸಿದ್ದಾರೆ, ಹೋರಾಟ ಮಾಡಿದ್ದಾರೆ. ಹೀಗಾಗಿ ಅವಕಾಶ ಬೇಕು ಅಂತ ಕೇಳುತ್ತಿದ್ದೇವೆ. ಇದರಲ್ಲಿ ಏನು ತಪ್ಪಿದೆ. ನಾನು ವ್ಯಕ್ತಿಪರವಾಗಿ ಇಲ್ಲ, ನ್ಯಾಯದ ಪರವಾಗಿದ್ದೇನೆ.
ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರಿಗೂ ಅವಕಾಶ ಬೇಕು. ಈಗಾಗಿ ಆ ಸಂದರ್ಭದಲ್ಲಿ ಹೈಕಮಾಂಡ್ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ. ನಮಗೆ ರಾಜ್ಯ ಅಭಿವೃದ್ಧಿ ಆಗಬೇಕು. ಆಗಾಗಿ ಎಲ್ಲರೂ ಒಗ್ಗಟ್ಡಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಅಲ್ಪಸಂಖ್ಯಾತರ ನಾಯಕ, ಡಿಕೆಶಿ ಸಿಎಂ ಆದರೆ ಶಾಸಕರಿಗೆ ಕಷ್ಟ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದು ಸತ್ಯಕ್ಕೆ ದೂರವಾದ ಮಾತು. ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲಾ ಜಾತಿಯವರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಶಾಸಕರ ಒಗ್ಗೂಡಿಸುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿ, ನನಗೆ ಅವರು ಯಾವುದೇ ಕರೆ ಮಾಡಿಲ್ಲ. ನಾನು ಅವರನ್ನು ಭೇಟಿ ಮಾಡಿ ಮೂರು ತಿಂಗಳಾಗಿದೆ. ನಾನು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದರು.
ಮುಸ್ಲಿಂರನ್ನು ಮತ ಹಾಕಿ ಎಂದು ಕಮಾಲ್ ಮಾಡಿದ್ದೇವೆಂಬ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಯಾವ ಜಾತಿ ಪರವಾಗಿಯೂ ಇಲ್ಲ. ಇದು ಎಲ್ಲಾ ಜಾತಿಗಳನ್ನು ಒಳಗೊಂಡಂತಹ ಪಕ್ಷ. ಆಯಾ ಧರ್ಮದವರು ಎಲ್ಲರು ಸಭೆಗಳನ್ನು ಮಾಡಿದ್ದಾರೆ. ಧರ್ಮದ ಕಷ್ಟ ಸುಖಗಳನ್ನು ಮಾತನಾಡಿಕೊಳ್ಳುವ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ. ನಾನು ಎಲ್ಲಾ ವರ್ಗದಲ್ಲಿ ಹುಟ್ಟಿರುವ ಮನೆ ಮಗ. ಹಾಗಾಗಿ ನನ್ನನ್ನ ಶಾಸಕನಾಗಿ ಮಾಡಿದ್ದಾರೆ ಎಂದರು.