Advertisement

ವನಿತಾ ಕ್ರಿಕೆಟ್‌ ತಂಡಕ್ಕೆ ರಾಮನ್‌ ಕೋಚ್‌

06:00 AM Dec 21, 2018 | |

ಮುಂಬಯಿ: ಮಾಜಿ ಆರಂಭಕಾರ, ತಮಿಳುನಾಡಿನ ಡಬ್ಲ್ಯು.ವಿ. ರಾಮನ್‌ ಭಾರತದ ವನಿತಾ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಅಂತಿಮ ಪಟ್ಟಿಯಲ್ಲಿದ್ದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಮತ್ತು ಕರ್ನಾಟಕದ ಮಾಜಿ ಬೌಲರ್‌ ವೆಂಕಟೇಶ ಪ್ರಸಾದ್‌ ಅವರನ್ನು ರಾಮನ್‌ ಮೀರಿ ನಿಂತರು. ತೀವ್ರ ಕುತೂಹಲ ಹುಟ್ಟಿಸಿದ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಅಭ್ಯರ್ಥಿಗಳ ಸಂದರ್ಶನ ಗುರುವಾರ ನಡೆಯಿತು. ಅಡ್‌-ಹಾಕ್‌ ಕಮಿಟಿ ಮೂವರ ಹೆಸರನ್ನು ಆಯ್ಕೆ ಮಾಡಿ ಬಿಸಿಸಿಐಗೆ ರವಾನಿಸಿತು. ಸಂಜೆಯ ವೇಳೆಗೆ ರಾಮನ್‌ ಹೆಸರು ಅಂತಿಮಗೊಂಡ ಸುದ್ದಿ ಹೊರಬಿತ್ತು. 

Advertisement

ಕಪಿಲ್‌ದೇವ್‌, ಅಂಶುಮನ್‌ ಗಾಯಕ್ವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಅಡ್‌-ಹಾಕ್‌ ಕಮಿಟಿಯು ಕೋಚ್‌ ಉಮೇದುವಾರರ ಸಂದರ್ಶನ ನಡೆಸಿತು. ಅಂತಿಮವಾಗಿ ಕರ್ಸ್ಟನ್‌, ರಾಮನ್‌ ಮತ್ತು ಪ್ರಸಾದ್‌ ಹೆಸರನ್ನು ಸೂಚಿಸಿತು. ಜನವರಿ 3ನೇ ವಾರ ಭಾರತೀಯ ವನಿತಾ ತಂಡ ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರಲ್ಲಿ ನೂತನ ತರಬೇತುದಾರನನ್ನು  ನೇಮಿಸಬೇಕಿತ್ತು. ಸಂದರ್ಶನದ ದಿನವೇ ಕೋಚ್‌ ಆಯ್ಕೆಯನ್ನು ಅಂತಿಮಗೊಳಿಸಲಾಯಿತು.

ಕೋಚ್‌ ಹುದ್ದೆಗೆ ಒಟ್ಟು 28 ಮಂದಿ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಸಲಾಗಿತ್ತು. ವೆಂಕಟೇಶ ಪ್ರಸಾದ್‌, ಮನೋಜ್‌ ಪ್ರಭಾಕರ್‌, ಟ್ರೆಂಟ್‌ ಜಾನ್‌ಸ್ಟನ್‌, ಡಿಮಿಟ್ರಿ ಮಸ್ಕರೇನಸ್‌, ಬ್ರಾಡ್‌ ಹಾಗ್‌ ಮತ್ತು ಕಲ್ಪನಾ ವೆಂಕಟಾಚಾರ್‌ ಸಂದರ್ಶಕರಲ್ಲಿ ಪ್ರಮುಖರು. ವಿವಾದಾತ್ಮಕ ಕೋಚ್‌ ರಮೇಶ್‌ ಪೊವಾರ್‌ ಮತ್ತೂಂದು ಅವಧಿಗೆ ಉಮೇದುವಾರಿಕೆ ಬಯಸಿ ಬಂದಿದ್ದರು. ಕರ್ಸ್ಟನ್‌ ಸಹಿತ ಐವರನ್ನು ಸ್ಕೈಪ್‌ ಮೂಲಕ, ಒಬ್ಬರನ್ನು ದೂರವಾಣಿಯಲ್ಲಿ ಸಂದರ್ಶಿಸಲಾಯಿತು. ಖುದ್ದಾಗಿ ಹಾಜರಾದವರು ಮೂವರು ಮಾತ್ರ. 

ದೇಶದ ಪ್ರಮುಖ ಕೋಚ್‌
ಎಡಗೈ ಆರಂಭಿಕನಾಗಿದ್ದ ರಾಮನ್‌ 11 ಟೆಸ್ಟ್‌, 27 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಶತಕ ಬಾರಿಸಿದ ಮೊದಲ ಭಾರತೀಯನೆಂಬುದು ರಾಮನ್‌ ಹೆಗ್ಗಳಿಕೆ (1992-93). ಪ್ರಸ್ತುತ ದೇಶದ ಪ್ರಮುಖ ಹಾಗೂ ಅರ್ಹ ತರಬೇತುದಾರರಲ್ಲಿ ಒಬ್ಬರು. ತಮಿಳುನಾಡು, ಬಂಗಾಲ ರಣಜಿ ತಂಡಗಳ ಕೋಚ್‌ ಆಗಿದ್ದ ರಾಮನ್‌ ಭಾರತದ ಅಂಡರ್‌-19 ತಂಡದ ಕೋಚ್‌ ಆಗಿಯೂ ದುಡಿದಿದ್ದರು. 53ರ ಹರೆಯದ ರಾಮನ್‌ ಈಗ ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಬ್ಯಾಟಿಂಗ್‌ ಸಲಹಾಕಾರನಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಕರ್ಸ್ಟನ್‌ಗೆ ಆರ್‌ಸಿಬಿ ತೊಡಕು
ದಕ್ಷಿಣ ಆಫ್ರಿಕಾದ ಮಾಜಿ ಆರಂಭಕಾರ ಗ್ಯಾರಿ ಕರ್ಸ್ಟನ್‌ 2008-2011ರ ಅವಧಿಯಲ್ಲಿ ಭಾರತದ ಪುರುಷರ ಕ್ರಿಕೆಟ್‌ ತಂಡದ ಯಶಸ್ವಿ ಕೋಚ್‌ ಆಗಿ ಗುರುತಿಸಲ್ಪಟ್ಟಿದ್ದರು. ಇವರ ಕಾರ್ಯಾವಧಿಯಲ್ಲೇ ಭಾರತ ಏಕದಿನ ವಿಶ್ವಕಪ್‌ ಗೆದ್ದು ಸಂಭ್ರಮಿಸಿತ್ತು. ಅನಂತರದ 2 ವರ್ಷ ದಕ್ಷಿಣ ಆಫ್ರಿಕಾ ತಂಡದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದರು. ವನಿತಾ ಕೋಚ್‌ ರೇಸ್‌ನಲ್ಲಿ ಇವರೇ ಮೊದಲ ಆಯ್ಕೆಯಾಗಿದ್ದರು. ಆದರೆ ಕರ್ಸ್ಟನ್‌ ಆಯ್ಕೆಗೆ ಇದ್ದ ತೊಡಕೆಂದರೆ ಐಪಿಎಲ್‌ ಒಪ್ಪಂದ. ಪ್ರಸ್ತುತ ಅವರು ಆರ್‌ಸಿಬಿ ತಂಡದ ಪ್ರಧಾನ ಕೋಚ್‌ ಹಾಗೂ ಮೆಂಟರ್‌ ಆಗಿದ್ದಾರೆ. ಕಳೆದ ಆಗಸ್ಟ್‌ ನಲ್ಲಷ್ಟೇ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹೀಗಾಗಿ ಅವರಿಗೆ ವನಿತಾ ತಂಡದ ಕೋಚ್‌ ಹುದ್ದೆ ತಪ್ಪಿತು ಎಂದು ಬಿಸಿಸಿಐ ಮೂಲೊವೊಂದು ತಿಳಿಸಿದೆ.

Advertisement

ಅವಸರದ ಕ್ರಮ: ಡಯಾನಾ ಎಡುಲ್ಜಿ
ಕೋಚ್‌ ಆಯ್ಕೆ ಪ್ರಕ್ರಿಯೆ ಯನ್ನು ಪ್ರಶ್ನಿಸಿದ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯೆ ಡಯಾನಾ ಎಡುಲ್ಜಿ ಮತ್ತು ಹಂಗಾಮಿ ಖಜಾಂಚಿ ಅನಿರುದ್ಧ್ ಚೌಧರಿ ಅವರು ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಮೇಲೆ ಹರಿಹಾಯ್ದಿದ್ದಾರೆ. ಇದೊಂದು ಅವಸರದ ಕ್ರಮ ಎಂದು ಕಿಡಿಕಾರಿದ್ದಾರೆ. ಜ. 17ರಂದು ಉಚ್ಚ ನ್ಯಾಯಾಲಯದ ವಿಚಾರಣೆ ಇದೆ. ಇದು ಮುಗಿದ ಬಳಿಕ ಕೋಚ್‌ ಆಯ್ಕೆ ಮಾಡಬಹುದಿತ್ತು. ಅಲ್ಲಿಯ ತನಕ ರಮೇಶ್‌ ಪೊವಾರ್‌ ಅವರನ್ನೇ ಮುಂದುವರಿಸಬಹುದಿತ್ತು ಅಥವಾ ತಾತ್ಕಾಲಿಕ ಕೋಚ್‌ ಒಬ್ಬರನ್ನು ನೇಮಿಸಬಹುದಿತ್ತು ಎಂದು ಡಯಾನಾ ಎಡುಲ್ಜಿ ಹೇಳಿದ್ದಾರೆ.

“ನನ್ನ ಪಾಲಿಗೆ ಇದೊಂದು ಹೊಸ ಜವಾಬ್ದಾರಿ. ದೇಶದ ವನಿತಾ ಕ್ರಿಕೆಟನ್ನು ವಿಶ್ವ ಮಟ್ಟದಲ್ಲಿ ಇನ್ನಷ್ಟು ಬೆಳೆಸುವ, ಎತ್ತರಕ್ಕೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುವ ಭರವಸೆ ನೀಡುತ್ತೇನೆ. ಇದಕ್ಕೆ ಎಲ್ಲರ ಸಹಕಾರವನ್ನೂ ಕೋರುತ್ತಿದ್ದೇನೆ…’

ಡಬ್ಲ್ಯು.ವಿ. ರಾಮನ್‌  

Advertisement

Udayavani is now on Telegram. Click here to join our channel and stay updated with the latest news.

Next