Advertisement
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ವೀಣಾ ಕಛೇರಿ ಜರಗಿತು.ಕೇವಲ 17 ವರ್ಷ ವಯಸ್ಸಿನ ಈ ಪ್ರತಿಭೆ, ವೀಣೆಯಲ್ಲಿ ಗಮಕಯುಕ್ತವಾಗಿ ಬೇಗಡೆಯಂತಹ ಘನರಾಗದ ಎಲ್ಲ ಮಜಲು ಗಳನ್ನು, ದೀಕ್ಷಿತರ ರಚನೆಯಾದ ವಲ್ಲಭ ನಾಯಕಸ್ಯದ ಪ್ರಸ್ತುತಿ ಮತ್ತು ಚುಟುಕಾದ ಸ್ವರ ವಿನ್ಯಾಸದ ಮೂಲಕ ಕಛೇರಿಯನ್ನು ಆರಂಭಿಸಿದರು; ಅದರ ಹಿಂದಿನ ಸಾಧನೆ ಮತ್ತು ಪ್ರತಿಭೆ ಕೇಳುಗರನ್ನು ಬೆರಗುಗೊಳಿಸಿತು ಅಂದರೆ ಅತಿಶಯೋಕ್ತಿಯಲ್ಲ. ಇದಾದ ಅನಂತರ ಪುರಂದರದಾಸರ ರಚನೆ ಎಂಥ ಚೆಲುವಗೆ ಅಭೇರಿ ರಾಗದಲ್ಲಿ ಚುರುಕಾಗಿ ಮೂಡಿಬಂದು ಕಛೇರಿಯಲ್ಲಿ “ಘನ – ಲಘು’ ಇವೆರಡರ ಸಮ ಮಿಶ್ರಣದ ಸುಳಿವನ್ನು ನೀಡಿತು. ಅನಂತರ ತ್ಯಾಗರಾಜರ ಕೀರ್ತನೆ ಅನುಪಮ ಗುಣಾಂಬುಧಿ ಅಠಾಣ ರಾಗದಲ್ಲಿ ಲವಲವಿಕೆಯಿಂದ ಪ್ರಸ್ತುತಗೊಂಡಿತು. ಬಳಿಕ ಹದವರಿತ ಗಮಕಗಳೊಂದಿಗೆ ಮೂಡಿ ಬಂದುದು ಅಪರೂಪದ ರಾಗ ಧೇನುಕ. ಅವರು ವೀಣೆಯಲ್ಲಿ ರಾಗಾಲಾಪನೆ ಮಾಡುತ್ತಾ ಮಾಡುತ್ತಾ ಮಧ್ಯದಲ್ಲಿ ನೀಡುವ ಸಣ್ಣ ವಿರಾಮಗಳು ಮನಸ್ಸನ್ನು ತಟ್ಟುವ ಗುಣ ಹೊಂದಿದ್ದು, ರಸಾನುಭವದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾದವು. ತ್ಯಾಗರಾಜರ ಕೀರ್ತನೆ ತೆಲಿಯಲೇದು ರಾಮ ಭಕ್ತಿ ಸಹಿತವಾಗಿ, ಗಾಯಕಿ ಮನೋಧರ್ಮದಲ್ಲಿ ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಿಗೊಂಡು ವಿಶಿಷ್ಟ ಅನುಭವವನ್ನು ನೀಡಿತು. ವೀಣೆಯ ಝೇಂಕಾರ ಅನುರಣನಗೊಂಡದ್ದು ಪೂರ್ವಿಕಲ್ಯಾಣಿ ರಾಗದ ಆಲಾಪನೆಯಲ್ಲಿ. ಪೂರ್ವಿ ಕಲ್ಯಾಣಿ ರಾಗದ ವಿವಿಧ ಭಾವಗಳನ್ನು ಎಳ್ಳಷ್ಟೂ ಪಾಕ ಮೀರದಂತೆ, ಹದವರಿತು ವಿಸ್ತರಿಸುತ್ತಾ ಹೋದವರು ವಿ| ರಮಣ ಬಾಲಚಂದ್ರ. ತ್ಯಾಗರಾಜರ ಕೃತಿ ಜ್ಞಾನಮುಸಗಾ ರಾಗ ಅನಾವರಣಗೊಳ್ಳುತ್ತಾ ಹೋದಂತೆ, ವೀಣೆ ಮತ್ತು ಮೃದಂಗಗಳ ಹದವಾದ ನಾದ ಮಿಳಿತಗೊಂಡು ಮನಸ್ಸನ್ನು ಮುದಗೊಳಿಸಿತು. ಕಲ್ಪನಾ ಸ್ವರದ ವಿನ್ಯಾಸಗಳು ಈ ಯುವ ವೈಣಿಕನ ಅಸಾಮಾನ್ಯ ಪ್ರತಿಭೆಯನ್ನು ಅನಾವರಣಗೊಳಿಸಿದವು.
Related Articles
Advertisement
ಮುಂದೆ ಪುರಂದರದಾಸರ ರಚನೆ ಚಂದ್ರಚೂಡ ಶಿವಶಂಕರ ದರ್ಬಾರಿ ಕಾನಡದಲ್ಲಿ ವೀಣೆಯ ಝೇಂಕಾರದೊಂದಿಗೆ, ಮೃದಂಗಗಳ ಸುನಾದದೊಂದಿಗೆ ಮನಸೂರೆಗೊಂಡಿತು. ಅರುಣಾಚಲ ಶಿವ ರಚನೆ ಆ ದಿನದ ಕಛೇರಿಯಲ್ಲಿ ಕೊನೆಯ ಪ್ರಸ್ತುತಿ. ಇಡೀ ಕಛೇರಿಯಲ್ಲಿ ಸಹೃದಯರೆಲ್ಲ ಪ್ರಧಾನವಾಗಿ ಗಮನಿಸಿದ ಅಂಶವೆಂದರೆ, ಚೆನ್ನಾಗಿ ಹಾಡಬಲ್ಲವರೂ ಆಗಿರುವ ವೀಣೆ ಕಲಾವಿದ ರಮಣ ಬಾಲಚಂದ್ರ ಅವರು ಕೀರ್ತನೆಯ ಆರಂಭದಲ್ಲಿ ಮತ್ತು ಚರಣಗಳಲ್ಲಿ ವೀಣೆಯ ವಾದನದೊಂದಿಗೆ ಹಾಡುತ್ತಲೂ ಇದ್ದರು. ಇದರಿಂದ ಕೇಳುಗರು ಅವರು ನುಡಿಸುವ ಕೀರ್ತನೆಗಳ ಸಾಹಿತ್ಯವನ್ನು ಮನದಲ್ಲಿಯೇ ಗುನುಗುವುದಕ್ಕೆ, ಆ ಮೂಲಕ ಕಛೇರಿಯಲ್ಲಿ ವಿಶಿಷ್ಟವಾಗಿ ಒಳಗೊಳ್ಳುವುದಕ್ಕೆ ಅನುವಾಯಿತು. ವೀಣೆಯು ಮುಖ್ಯ ನೆಲೆಯಲ್ಲಿದ್ದುಕೊಂಡೇ ಹಿನ್ನೆಲೆಯಲ್ಲಿ ಹಾಡಿ, ಕೇಳುಗರು ಮನಸ್ಸಿನಲ್ಲೇ ಹಾಡಿಕೊಳ್ಳುವಂತೆ ಮಾಡಿದ ರಮಣ ಬಾಲಚಂದ್ರ ಅಭಿನಂದನಾರ್ಹರು.
ಇಂತಹದೊಂದು ವೀಣೆಯ ವಿಶಿಷ್ಟ ಅನುಭವಕ್ಕೆ ಕಾರಣರಾದವರು ಸ್ವತಃ ಕಲಾವಿದರೂ ಆಗಿರುವ ಪುತ್ತೂರಿನ ಡಾ| ಶ್ರೀಪ್ರಕಾಶ್. ಮಹಾಬಲ – ಲಲಿತ ಕಲಾಸಭಾ (ರಿ.)ದ ಮೂಲಕ ಈ ಆಷಾಢ ಮಾಸದ ವೀಣೆ ಕಛೇರಿಯು ಬಹಳ ಅದ್ಭುತವಾಗಿ ಮೂಡಿಬಂತು. ಪುತ್ತೂರಿನ ಮತ್ತು ಹತ್ತೂರಿನ ಸಂಗೀತಾಸಕ್ತರ ಪರವಾಗಿ ಅವರಿಗೆ ಮನದಾಳದ ಅಭಿನಂದನೆಯನ್ನು ಹೇಳದಿರುವುದು ಹೇಗೆ!
ವಿ| ಬಾಲಕೃಷ್ಣ ಹೊಸಮನೆ, ಪುತ್ತೂರು