ಬೆಂಗಳೂರು: ಜನಾಶೀರ್ವಾದ ಯಾತ್ರೆ ನಿರತ ಕೇಂದ್ರ ಸಚಿವರಿಗೆ ಕೊರೊನಾ ಮಾರ್ಗಸೂಚಿ ಅನ್ವಯ ಆಗುವುದಿಲ್ಲವೇ? ಅವರು ಕಾನೂನಿಗಿಂತ ದೊಡ್ಡವರೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಲೀಂ ಅಹಮದ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರಿಗೊಂದು ಕಾನೂನು, ಜನಸಾಮಾನ್ಯರು ಮತ್ತು ವಿಪಕ್ಷದವರಿಗೊಂದು ಕಾನೂನು ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವರಾದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ ಅವರು 700ರಿಂದ 800 ಕಿ.ಮೀ. ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಇವರು ಹೋದಲ್ಲೆಲ್ಲ ಸಾವಿರಾರು ಜನರನ್ನು ಸೇರಿಸಿಕೊಂಡು ಸಭೆ ಸಮಾರಂಭ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂ ಸಿದ್ದರೂ ಪೊಲೀಸರು ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದರು.
ಇತ್ತೀಚೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನಿರಾಕರಿಸಿತ್ತು. ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಬೆಂಬಲಿಗರ ವಿರುದ್ಧ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಪಕ್ಷಪಾತ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕ್ಷಮೆ ಕೋರುವ ಯಾತ್ರೆ :
ಮತ್ತೂಬ್ಬ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದು, ಜನಾಶೀರ್ವಾದ ಯಾತ್ರೆ ಬದಲು ಜನರ ಕ್ಷಮೆ ಕೋರುವ ಯಾತ್ರೆ ನಡೆಸಬೇಕು ಎಂದರು. ಮಾಧ್ಯಮ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ, ಸಲೀಂ ಮುಂತಾದವರು ಉಪಸ್ಥಿತರಿ ದ್ದರು.