ಬೆಂಗಳೂರು: ಅಧಿಕಾರ “ನಾಮ್‌ಕೆವಾಸ್ತೆ’ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಮಧ್ಯೆ ಮಾತಿನ ಸಮರ ನಡೆದಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಸರ್ಕಾರಿ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಸರ್ಕಾರಕ್ಕೆ ಬರೆದಿರುವ ಪತ್ರ ಪ್ರಸ್ತಾಪಿಸಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಎಲ್ಲ ಅಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸೂಪರ್ ಸಿಎಂ ಕೆಂಪಯ್ಯ ಕೈಯ್ಯಲ್ಲಿದ್ದು, ಗೃಹ ಸಚಿವ ರಾಮಲಿಂಗಾರೆಡ್ಡಿ ನಾಮ್‌ಕೆವಾಸ್ತೇ ಗೃಹ ಸಚಿವರಾಗಿದ್ದಾರೆ ಎಂದು ಟೀಕಿಸಿದರು.
ಇದಕ್ಕೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರು ಎಲುಬಿಲ್ಲದ ನಾಲಿಗೆಯಿಂದ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಶಾಸಕರಾಗುವ ವೇಳೆ ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಗೃಹ ಇಲಾಖೆಯ ಸಂಪೂರ್ಣ ಅಧಿಕಾರ ನನ್ನ ಕೈಯ್ಯಲ್ಲೇ ಇದೆ. ಆದರೆ, ಆರ್‌ಎಸ್‌ಎಸ್‌ನವರು ಹೇಳಿದ ಗಿಣಿಪಾಠವನ್ನು ಜಗದೀಶ್ ಶೆಟ್ಟರ್ ಒಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಪಿ.ಶರ್ಮಾ ಕೆಲವು ಆರೋಪಗಳನ್ನು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ