Advertisement

 ರಾಮಕುಂಜ: ಪದವಿ ಕಾಲೇಜಿನಲ್ಲಿ ಮಾಧ್ಯಮ ಸಂವಾದ

04:43 PM Dec 21, 2017 | |

ಕಡಬ: ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಹಿಂದೆ ಚಾಲ್ತಿಯಲ್ಲಿದ್ದ ಅಭ್ಯುದಯ ಪತ್ರಿಕೋದ್ಯಮ ಇಂದು ತೆರೆಮರೆಗೆ ಸರಿದಿದೆ. ಬಹುತೇಕ ಸುದ್ದಿ ಮಾಧ್ಯಮ ಸಂಸ್ಥೆಗಳು ರಾಜಕೀಯ ನೇತಾರರ ಕೈಯಲ್ಲಿದ್ದು, ನಿರ್ದಿಷ್ಟ ವಿಚಾರಗಳಿಗೆ ಅಂಟಿಕೊಂಡಿರುವುದು ಮಾಧ್ಯಮ ಕ್ಷೇತ್ರದ ದುರಂತ ಎಂದು ಅಂಕಣಕಾರ, ವಿಮರ್ಶಕ ಜೋಗಿ ಬೆಂಗಳೂರು (ಗಿರೀಶ್‌ ರಾವ್‌) ಅವರು ಅಭಿಪ್ರಾಯಪಟ್ಟರು. ಅವರು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

ಮಾಧ್ಯಮ ಕ್ಷೇತ್ರ ಎನ್ನುವುದು ಒಂದು ಪಕ್ಷ ಅಥವಾ ಇಸಂಗೆ ಸೀಮಿತವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಿಂದ ಏನನ್ನು ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಜೋಗಿ, ಇಂದು ಅಭ್ಯುದಯ ಪತ್ರಿಕೋದ್ಯಮ ಎನ್ನುವುದು ಮರೆಯಾಗಿದೆ. ಅದರ ಅಗತ್ಯವೂ ಸಮಾಜಕ್ಕಿಲ್ಲ. ಆದರೂ ಆ ಕೆಲಸವನ್ನು ಇಂದು ಸಾಮಾಜಿಕ ಜಾಲತಾಣಗಳು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಓದುವ ಹವ್ಯಾಸ ಬೆಳೆಸಿಕೊಳ್ಳಿ
ಮೊಬೈಲ್‌ ಹಾಗೂ ಸಾಮಾಜಿಕ ಜಾಲ ತಾಣಗಳಿಂದ ನಮಗೆ ಮಾಹಿತಿಗಳು ಲಭಿಸಬಹುದೇ ಹೊರತು ನಮ್ಮ ಜ್ಞಾನ ವೃದ್ಧಿಸಲು ಸಾಧ್ಯವಿಲ್ಲ. ಆದಕ್ಕಾಗಿ ನಾವು ಪುಸ್ತಕಗಳನ್ನು ಓದುವುದನ್ನು ದಿನದ ಭಾಗವಾಗಿ ಅಳವಡಿಸಿಕೊಳ್ಳಬೇಕು
ಎಂದರು. ನಾವು ಯಾವುದೇ ಪರಿಸ್ಥಿತಿಯಲ್ಲಿ ಕೂಡಾ ಜೀವನೋತ್ಸಾಹವನ್ನು ಕಳೆದುಕೊಳ್ಳಬಾರದು, ಬದುಕನ್ನು
ಅನುಭವಿಸಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ಬ್ಯಾಂಕ್‌ ಪ್ರಬಂಧಕ ಮಹಮ್ಮದ್‌ ಕುಂಞಿ ಕಡಬ, ಪತ್ರಕರ್ತ ಗೋಪಾಲ ಕೃಷ್ಣ ಕುಂಟಿನಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌., ಪ್ರಾಂಶುಪಾಲ ಡಾ| ಸಂಕೀರ್ತ್‌ ಹೆಬ್ಟಾರ್‌, ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ, ನಿವೃತ್ತ ತಹಶಿಲ್ದಾರ್‌ ಮೋಹನ್‌ ರಾವ್‌ ಆತೂರು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಧೂರು ಮೋಹನ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು. ಸುಕ್ಷಿತಾ ಶೆಟ್ಟಿ ನಿರೂಪಿಸಿದರು.

ಉದಯವಾಣಿ ವರದಿಗಳ ಉಲ್ಲೇಖ
ಅಭ್ಯುದಯ ಪತ್ರಿಕೋದ್ಯಮದ ಕುರಿತು ಮಾತಾನಾಡಿದ ಜೋಗಿ ಅವರು ಸುಮಾರು 35 ವರ್ಷಗಳ ಹಿಂದೆ ಕುಗ್ರಾಮ ಗುರುತಿಸಿ ಎನ್ನುವ ಪತ್ರಿಕೋದ್ಯಮದ ಕ್ರಾಂತಿಕಾರಕ ವರದಿಗಳ ಮೂಲಕ ಉದಯವಾಣಿ ದೈನಿಕವು ಬೆಳ್ತಂಗಡಿಯ ದಿಡುಪೆ, ಪುತ್ತೂರಿನ ಆಲಂತಾಯ, ಸುಳ್ಯದ ತೊಡಿಕಾನ, ಬಂಟ್ವಾಳದ ಮಾಣಿಲದಂತಹ ಅತ್ಯಂತ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗಿರು ದನ್ನು ವಿಶೇಷವಾಗಿ ಉಲ್ಲೇಖಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next