Advertisement
ಮುಳಿಹಿತ್ಲು: ಶ್ರೀ ಅಂಬಾಮಹೇಶ್ವರಿ ಭಜನ ಮಂಡಳಿಯ ಸದಸ್ಯರು ಮುಳಿ ಹಿತ್ಲುವಿನಲ್ಲಿ 65ನೇ ದಿನದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಉಮಾನಾಥ ಕೋಟೆಕಾರ್ ನೇತೃತ್ವದಲ್ಲಿ ಎರಡು ಗುಂಪುಗಳಲ್ಲಿ ಮನೆ ಮತ್ತು ಅಂಗಡಿಗಳನ್ನು ಸಂದರ್ಶಿಸಿ ಸ್ವಚ್ಛತಾ ಜಾಗೃತಿ ಕರಪತ್ರವನ್ನು ವಿತರಿಸಿ ಜನರಲ್ಲಿ ಸ್ವಚ್ಛತೆ ಕಾಯ್ದಿರಿಸುವಂತೆ ಮನವಿ ಮಾಡಿ ಕೊಂಡರು. ಜತೆಗೆ ಕಾರ್ಯಪ್ರವೃತ್ತ ಕಟ್ಟಡಗಳಿಗೆ ತೆರಳಿ ಶುಚಿತ್ವ ಕಾಯ್ದಿರಿಸುವಂತೆ ಸಿಬಂದಿಯಲ್ಲಿ ಒತ್ತಾಯಿಸಿದರು.
Related Articles
Advertisement
ಅತ್ತಾವರ: ಕಳೆದ ಬಾರಿ ಸ್ವಚ್ಛತಾ ಶ್ರಮದಾನದ ಮೂಲಕ ಶುಚಿಗೊಳಿಸಿದ ಅತ್ತಾವರ ಸೆಂಟರ್ ಮತ್ತು ಅತ್ತಾವರಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛ ಅತ್ತಾವರ ತಂಡದ ಸದಸ್ಯರಿಂದ 69ನೇ ನಿತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಕ್ಷಿತ್‌ಅತ್ತಾವರ ಮತ್ತು ಮೊಹ್ಮದ್ ಶಮೀಮ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸಿದರು. ಸಿಟಿ ಫ್ರೆಂಡ್ಸ್ ಸದಸ್ಯರು ಮತ್ತು ಎಸ್.ಎಂ. ಕುಶೆ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು ಸಾಥ್ ನೀಡಿದರು.
ಭವಂತಿ ಸ್ಟ್ರೀಟ್: ಶ್ರೀ ಗೋಕರ್ಣ ಮಠದ ಅನುಯಾಯಿಗಳು ಹಾಗೂ ಸ್ಥಳೀಯರು ನಂದಾ ದೀಪರಸ್ತೆಯಲ್ಲಿ 70ನೇ ನಿತ್ಯಜಾಗೃತಿ ಅಭಿಯಾನವನ್ನು ಹಮ್ಮಿಕೊಂಡರು. ಈ ಸಂದರ್ಭ ಪುಣೆಯ ನಿವೃತ್ತ ಶಿಕ್ಷಕ ಹಾಗೂ ಪ್ರಧಾನಿಯವರಿಂದ ಪ್ರಶಂಸೆ ಪಡೆದ ಚಂದ್ರಕಾಂತ ಕುಲಕರ್ಣಿ ಈ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದಾಮೋದರ ಭಟ್, ದಿನಕರ್‌ಕಾಮತ್ ಸೇರಿದಂತೆ ಅನೇಕ ಕಾರ್ಯಕರ್ತರು ಸುಮಾರು ನೂರೈವತ್ತಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಕರಪತ್ರ ವಿತರಿಸಿದರು.
ಮಲ್ಲಿಕಟ್ಟೆ: ಲಯನ್ಸ್‌ಕ್ಲಬ್ ಸದಸ್ಯರು ಮಲ್ಲಿಕಟ್ಟೆ ವೃತ್ತದಿಂದ ಕೆಎಸ್‌ಆರ್‌ಟಿಸಿ ಸಾಗುವ ರಸ್ತೆಯಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಕಸದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿ ಸ್ವಚ್ಛತೆಗೆ ಸಂಬಂಧಿಸಿದ ಮಾಹಿತಿ ಪತ್ರವನ್ನು ನೀಡಿದರು. 72ನೇ ದಿನದ ಈ ಅಭಿಯಾನದಲ್ಲಿ ಲ್ಯಾನ್ಸಿ ಮಸ್ಕರೇನ್ಹಸ್, ಉಮಾ ರಾವ್ ಮೊದಲಾದವರು ಭಾಗವಹಿಸಿದ್ದರು.
ಜ್ಯೋತಿ ವೃತ್ತ: ಹಿಂದೂ ವಾರಿಯರ್ಸ್ ತಂಡದ ಸದಸ್ಯರು ಜ್ಯೋತಿ ವೃತ್ತದಿಂದ ಬಲ್ಮಠ ಸಾಗುವ ರಸ್ತೆಯಲ್ಲಿ 73ನೇ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸ್ವಯಂ ಸೇವಕರು ಶಶಿಕಾಂತ ಬೆಳ್ತಂಗಡಿ, ಸೌಮ್ಯಕೋಡಿಕಲ್ ಜತೆಗೂಡಿ ವ್ಯಾಪಾರ ಮಳಿಗೆಗಳಿಗೆ ತೆರಳಿ ಜಾಗೃತಿ ಪತ್ರ ನೀಡಿ ಸ್ವಚ್ಛತೆಗೆ ಆದ್ಯತೆಯನ್ನು ನೀಡುವಂತೆ ವಿನಂತಿಸಿದರು. ಅಲ್ಲದೆ ರಸ್ತೆಯ ಬೀದಿ ದೀಪಗಳಿಗೆ ಕಟ್ಟಿದ್ದ ಬ್ಯಾನರ್‌ಗಳನ್ನು ಸೌರಜ್ ಮಂಗಳೂರು ಹಾಗೂ ಕಾರ್ಯಕರ್ತರು ತೆರವುಗೊಳಿಸಿದರು.
ಮಣ್ಣಗುಡ್ಡೆ: ಆರ್ಟ್ ಅಫ್ ಲಿವಿಂಗ್ ನ ಸದಸ್ಯರು ಸದಾಶಿವ ಕಾಮತ್ ನೇತೃತ್ವದಲ್ಲಿ ಮಣ್ಣಗುಡ್ಡ ಗುರ್ಜಿಪರಿಸರದ ಮನೆಗಳಿಗೆ ಭೇಟಿಕೊಟ್ಟು , ಸ್ವಚ್ಛತಾ ಸಂಕಲ್ಪ ಕರಪತ್ರ ನೀಡುವುದರೊಂದಿಗೆ, ಮಾರ್ಗದಲ್ಲಿ ಕಸ ಎಸೆಯದಂತೆ ಮತ್ತು ಎಸೆಯುವವರಿಗೆ ತಿಳಿಹೇಳುವಂತೆ ಕೇಳಿಕೊಳ್ಳಲಾಯಿತು. 74ನೇ ದಿನದ ಅಭಿಯಾನದಲ್ಲಿ ಮಧು ರಾಜ್, ಜಯಸಾಧನಾ ಪ್ರಸಾದ್ ಮತ್ತಿತರರು ಪಾಲ್ಗೊಂಡರು.
ದಿನಂಪ್ರತಿ ಸಂಜೆ ನಡೆಯುತ್ತಿರುವ ಸ್ವಚ್ಛತಾ ಜಾಗೃತಿ ಅಭಿಯಾನದ ನೇತೃತ್ವವನ್ನು ಬ್ರಹ್ಮಚಾರಿ ಶಿವಕುಮಾರ ಮಹರಾಜ್ ವಹಿಸಿದ್ದರು. ಮುಖ್ಯ ಸಂಯೋಜಕ ಉಮಾನಾಥ ಕೋಟೆಕಾರ್ ಕಾರ್ಯಕ್ರಮ ಸಂಘಟಿಸಿದರು. ಎಂಆರ್‌ಪಿಎಲ್ ಸಂಸ್ಥೆ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿತ್ತು.
ಉರ್ವ ಮಾರ್ಕೆಟ್ಓಬಿಸಿ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಉರ್ವ ಮಾರುಕಟ್ಟೆ ಆವರಣದಲ್ಲಿ 71ನೇ ಅಭಿಯಾನವನ್ನು ಏರ್ಪಡಿಸಿದ್ದರು. ವ್ಯಾಪಾರಿಗಳನ್ನು ಸಂಪರ್ಕಿಸಿ ತಮ್ಮತಮ್ಮ ಸ್ಥಳದ ಶುಚಿತ್ವಕ್ಕೆ ಆದ್ಯತೆ ನೀಡಲು ಮನವಿ ಮಾಡಿದರು ಮತ್ತು ಕಸದಬುಟ್ಟಿಗಳನ್ನಿಡುವಂತೆ ಸ್ವಚ್ಛತಾ ಮಾಹಿತಿ ಪತ್ರನೀಡಿ ವಿನಂತಿಸಿಕೊಂಡರು. ಇದಲ್ಲದೆ ಗಾಂಧಿ ನಗರದ ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು. ಒಟ್ಟು 50 ವಿದ್ಯಾರ್ಥಿನಿಯರು ವಿಠ್ಠಲ ದಾಸ ಪ್ರಭು ಮಾರ್ಗದರ್ಶನದಲ್ಲಿ ನಾಲ್ಕು ಗುಂಪುಗಳಲ್ಲಿ ಈ ಕಾರ್ಯಕೈಗೊಂಡರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಹಾಲಕ್ಷ್ಮೀ ಬೋಳಾರ ಕಾರ್ಯಕ್ರಮಕ್ಕೆ ಸಹಕರಿಸಿದರು.