ಬೆಂಗಳೂರು: ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆ ಆವರಣದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ “ಹೃದ್ರೋಗ ಪುನರ್ವಸತಿ ಕೇಂದ್ರ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ನೂತನವಾಗಿ ಆರಂಭಗೊಂಡಿರುವ ಈ ಪುನರ್ವಸತಿ ಕೇಂದ್ರದಲ್ಲಿ ಸಮಗ್ರ ಹೃದಯ ಆರೈಕೆ ಚಿಕಿತ್ಸೆ ದೊರೆಯಲಿದೆ. ಜತೆಗೆ ಆಂಜಿಯೊಪ್ಲಾಸ್ಟಿ, ಪೇಸ್‌ಮೇಕರ್ ಇಂಪ್ಲಾಂಟೇಷನ್, ಬೈಪಾಸ್ ಸರ್ಜರಿ, ವಾಲ್‌ವುಲರ್ ಸರ್ಜರಿ, ಎಕೊ, ಎಲೆಕ್ಟ್ರೋಫಿಸಿಯೋತೆರಪಿ ಚಿಕಿತ್ಸೆ ಸಿಗಲಿದೆ.
ಚಿಕಿತ್ಸೆಯೊಂದಿಗೆ ಇಂತಹ ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಇದಕ್ಕೆ ಕೆಲವೊಂದು ಚಿಕಿತ್ಸಾ ಕ್ರಮ ಆರಂಭಿಸಿ, ಶಸ್ತ್ರಚಿಕಿತ್ಸೆಯ ಬಳಿಕ ಪಾಲಿಸಬೇಕು. ಅದಕ್ಕಾಗಿಯೇ ಈ ಕೇಂದ್ರ ಸ್ಥಾಪಿಸಲಾಗಿದೆ. ಚಿಕಿತ್ಸೆ ನಂತರ ದೈಹಿಕ ವ್ಯಾಯಾಮ, ಜೀವನಶೈಲಿಯಲ್ಲಿ ಬದಲಾವಣೆ, ಮಾನಸಿಕ ಒತ್ತಡ ಕುಗ್ಗಿಸುವ ಕಾರ್ಯವನ್ನು ಕೇಂದ್ರ ನಿರ್ವಹಿಸಲಿದೆ ಎಂದು ಎಂ.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್‌ನ ಹಿರಿಯ ಹೃದ್ರೋಗ ತಜ್ಞ ಡಾ.ಯು.ಎಂ.ನಾಗಮಲ್ಲೇಶ್ ಸುದ್ದಿಗಾರರಿಗೆ ತಿಳಿಸಿದರು.
ರೋಗಿಗಳು ಹೃದಯ ಕಸಿ ನಂತರ ಆಗಾಗ ಬಂದು ತಪಾಸಣೆಗೆ ಒಳಗಾಗಬೇಕಾ ಗುತ್ತದೆ. ಆ ಸಂದರ್ಭದಲ್ಲಿ ಅವರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಕಸಿ ಮಾಡಿಕೊಂಡವರಿಗೆ ಔಷಧಿ ಕಂಪನಿಗಳೊಡನೆ ಮಾತನಾಡಿ ಶೇ.25ರಷ್ಟು ರಿಯಾಯಿತಿಯಲ್ಲಿ ಔಷಧಿ ಕೊಡುವಂತೆ ಮನವಿ ಮಾಡಲಾಗುವುದು. ಕೆಲವೊಂದು ಆರೈಕೆಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ರೋಗಿಗಳನ್ನು ಹೃದ್ರೋಗ ಮುಕ್ತರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಹೃದಯ ಕಸಿ ಚಿಕಿತ್ಸೆಯು ಕಾರ್ಡಿಯೊಮಿಯೊಪಥಿ ಕರೊನರಿ ಅರ್ಟರಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ವರದಾನ. 70 ವರ್ಷಕ್ಕಿಂತಲೂ ಕೆಳಗಿನವರು ಇಂತಹ ಚಿಕಿತ್ಸೆಗೆ ಒಳಗಾಗಬಹುದು. ಆರೋಗ್ಯಕರವಾದ ಹೃದಯ ಹಾಗೂ ಯಾವುದೇ ದೈಹಿಕ ಸಮಸ್ಯೆಗಳಿಂದ ಬಳಲದ 40 ವರ್ಷ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನವರು ದಾನಕ್ಕೆ ಅರ್ಹರಾಗಿದ್ದು. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಹೃದ್ರೋಗ ಪುನರ್ವಸತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ನಾರಾಯಣ ಹೆಲ್ತ್ ಕೇರ್ ಅಧ್ಯಕ್ಷ ಡಾ.ದೇವಿಶೆಟ್ಟಿ, ಹೃದಯ ಕಸಿ ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಮತ್ತೆ ಸಕ್ರಿಯ ಜೀವನ ಶೈಲಿಗೆ ವಾಪಸಾಗಲು ಅನುವಾಗುವಂತೆ ಅಗತ್ಯ ಆರೈಕೆಯನ್ನು ಹೃದ್ರೋಗ ಪುನರ್ವಸತಿ ಕೇಂದ್ರ ನೀಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೋಕುಲ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಜಯರಾಂ, ಹೃದಯ ಕಸಿಗೆ ಒಳಗಾಗಿದ್ದ ಸುಬ್ರಹ್ಮಣ್ಯಂ, ಎಚ್.ಜಿ. ವೆಂಕಟರಾಮ್, ಆನಂದಮೂರ್ತಿ, ಛಾಯಾ, ಎಸ್.ವೆಂಕಟೇಶ್, ಲಕ್ಷ್ಮೀನರಸಿಂಹಯ್ಯ, ಎ. ವಿಶ್ವನಾಥ್ ಇದ್ದರು.