Advertisement

ಜಿಲ್ಲಾದ್ಯಂತ ರಂಜಾನ್‌ ಸಂಭ್ರಮಾಚರಣೆ

04:17 PM May 04, 2022 | Team Udayavani |

ಹಾವೇರಿ: ದಾನ ಧರ್ಮಗಳ ಹಾಗೂ ಮಾನವ ಮೈತ್ರಿ ಸಂದೇಶ ಸಾರುವ, ಪರಸ್ಪರ ಬಾಂಧವ್ಯ, ಸಹೋದರತ್ವ, ಸಮಾನತೆಯ ಬದುಕಿಗೆ ಪ್ರೇರಣೆಯಾಗಿರುವ ರಂಜಾನ್‌ (ಈದ್‌ ಉಲ್‌ ಫಿತ್ರ) ಹಬ್ಬವನ್ನು ಮಂಗಳವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

Advertisement

ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಂ ಬಾಂಧವರು ಹಾವೇರಿಯ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ, ಭಕ್ತಿಯಿಂದ ನಾಡಿನ ಶ್ರೇಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವೃದ್ಧರು, ಯುವಕರು, ವಿಕಲಚೇತನರು, ಮಕ್ಕಳು ಎಲ್ಲರೂ ಒಂದಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು (ಮೌಲ್ವಿಗಳು)ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿಕೊಂಡು, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತಲಾಘವದಿಂದ ಪರಸ್ಪರ ಶುಭ ಕೋರಿದರು.

ನಂತರ ಆವರಣದಲ್ಲಿದ್ದ ಭಿಕ್ಷುಕರು, ಬಡವರಿಗೆ ದಾನ ಮಾಡಿದರು. ಒಂದು ತಿಂಗಳ ಭಕ್ತಿ ಸಾಂದ್ರವಾದ ಕಠಿಣ ಉಪವಾಸ ವ್ರತಾಚರಣೆಯ ನಂತರ ಚಂದ್ರ ದರ್ಶನ ಆಧಾರದಲ್ಲಿ ಹಬ್ಬ ಆಚರಿಸಲಾಯಿತು. ಈ ಹಬ್ಬವನ್ನು ಜಿಲ್ಲಾದ್ಯಂತ ವೈಭವದಿಂದ ಆಚರಿಸಿ, ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮಧ್ಯಾಹ್ನ ಸೂರಕುಂಬಾ, ಬಿರಿಯಾನಿ ಸೇರಿ ಬಗೆಬಗೆಯ ಆಹಾರ ಸೇವಿಸಿದರು. ಕಾಂಗ್ರೆಸ್‌ ಮುಖಂಡ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಇತರ ಗಣ್ಯರು ಮಸ್ಲಿಂ ಬಾಂಧವರಿಗೆ ರಂಜಾನ್‌ ಹಬ್ಬದ ಶುಭಾಶಯ ಕೋರಿದರು.

Advertisement

ಪ್ರಾರ್ಥನೆ ವೇಳೆ ಅಂಜುಮನ್‌ ಕಮಿಟಿ ಅಧ್ಯಕ್ಷ ಇಮಾಮ್‌ಸಾಬ ಜಮಾದಾರ್‌, ಉಪಾಧ್ಯಕ್ಷ ಪಿ.ಎಂ. ಚೌಪದಾರ್‌, ಸದಸ್ಯರಾದ ಐ.ಯು. ಪಠಾಣ, ದಾವುದ್‌ ಮರೂಟಗಿ, ಬಾಬುಸಾಬ ಮೋಮಿನಗಾರ, ಸುಭಾನಿ ಚೂಡಿಗಾರ ಇತರರಿದ್ದರು. ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ನೇತೃತ್ವದಲ್ಲಿ ಪೊಲೀಸರು ಬೀಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಈದ್ಗಾ ಮೈದಾನಕ್ಕೆ ಡಿಸಿ ಭೇಟಿ: ಮುಸ್ಲಿಂ ಹಾಗೂ ಹಿಂದೂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಂಗಳವಾರ ಬೆಳಗ್ಗೆ ಹೊಸಮಠದ ಎದುರಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ನೇರವಾಗಿ ನಗರದ ಈದ್ಗಾ ಮೈದಾನಕ್ಕೆ ತೆರಳಿ ಪವಿತ್ರ ರಂಜಾನ್‌ ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿ ಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next