ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ 24 ಟಿಎಂಸಿ ನೀರು ಪೂರೈಸುವುದು ವೈಜ್ಞಾನಿಕವಾಗಿ ಸಾಧ್ಯವಿಲ್ಲ ಎಂಬುದನ್ನು ನಾನು ಹೇಳಿದಾಗ ನಾನು ಎಲ್ಲಿಯವನು ಎಂದು ಸರ್ಕಾರ ಪ್ರಶ್ನಿಸಿತ್ತು. ಈಗ ನಮ್ಮ ಬೆಂಗಳೂರು ಪ್ರತಿಷ್ಠಾನ “ನಮ್ಮ ಬೆಂಗಳೂರಿಗ’ ಪ್ರಶಸ್ತಿ ನೀಡಿದೆ. ಹೀಗಾಗಿ ನಾನು ಹೆಮ್ಮೆಯ ಬೆಂಗಳೂರಿಗ ಎಂದು ಹೇಳಿಕೊಳ್ಳುತ್ತೇನೆ ಎಂದು ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಹೇಳಿದ್ದಾರೆ.
ನಮ್ಮ ಬೆಂಗಳೂರು ಫೌಂಡೇಷನ್ ವತಿಯಿಂದ ಭಾನುವಾರ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 8ನೇ ಆವೃತ್ತಿಯ “ನಮ್ಮ ಬೆಂಗಳೂರಿಗ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಬಯಲು ಸೀಮೆಯ ಕೆಲವು ಜಿಲ್ಲೆಗಳಿಗೆ ನೀರು ಹರಿಸಲು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುತ್ತಿರುವ ಸರ್ಕಾರ, 24 ಟಿಎಂಸಿ ನೀರು ಪೂರೈಸುವುದಾಗಿ ಹೇಳಿದೆ.
ಆದರೆ, ಯೋಜನೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣವೇ 9.5 ಟಿಎಂಸಿ ಇರುವಾಗ ಉಳಿದ ನೀರನ್ನು ಎಲ್ಲಿಂದ ತರಲು ಸಾಧ್ಯ? ಈ ಬಗ್ಗೆ ಈ ಬಗ್ಗೆ ವೈಜ್ಞಾನಿಕವಾಗಿ ನಾನು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದರೆ ನಾನ್ಯಾರು, ಎಲ್ಲಿಯವನು ಎಂದು ಪ್ರಶ್ನಿಸುವ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಲಾಯಿತು. ಈಗ “ನಮ್ಮ ಬೆಂಗಳೂರಿಗ ಪ್ರಶಸ್ತಿ’ ಪಡೆಯುವುದರೊಂದಿಗೆ ನಾನು ಹೆಮ್ಮೆಯ ಬೆಂಗಳೂರಿಗ ಎಂದು ಹೇಳಿಕೊಳ್ಳುತ್ತೇನೆ ಎಂದರು.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು 1500 ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಇಂದು ಬಹುತೇಕ ಕೆರೆಗಳು ನಾಶವಾಗಿ ನಗರದಲ್ಲಿ ಅಂತರ್ಜಲ ಬತ್ತಿ ನೀರಿನ ಸಮಸ್ಯೆ ಎದುರಾಗಿದೆ. ಶೇ. 40ರಷ್ಟು ಮಂದಿ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ ಎಂದು ಹೇಳಿದ ಅವರು, ನೀರಿನ ಮತ್ತು ಕಸದ ಮಾಫಿಯಾ ಸೇರಿ ಇಡೀ ಬೆಂಗಳೂರನ್ನೇ ಹಾಳು ಮಾಡುತ್ತಿದೆ.
ಕಲುಷಿತ ನೀರು ಮತ್ತು ವಾತಾವರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಮಾತನಾಡಿ, ನಾಗರೀಕರು ಸರ್ಕಾರದ ಜತೆಗೂಡಿ ಕೆಲಸ ಮಾಡಬೇಕು. ಎಲ್ಲದಕ್ಕೂ ಸರ್ಕಾರವನ್ನೇ ಕೇಳುವಂತಾಗಬಾರದು. ತಮ್ಮ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಗಾಗಿ ಹೋರಾಡಬೇಕು. ಇಲ್ಲದೇ ಇದ್ದರೆ ಪ್ರಜಾಪ್ರಭುತ್ವ ಕುರುಡಾಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾ ಸಿದರು.ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಹಿರಿಯ ವಕೀಲ ಸಜ್ಜನ್ ಪೂವಯ್ಯ, ನಮ್ಮ ಬೆಂಗಳೂರು ಫೌಂಡೇಷನ್‌ನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ ಸೇರಿ ಇನ್ನಿತರಿದ್ದರು.