Advertisement

ರಾಮನನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳಿ : ಕುಲಕರ್ಣಿ 

05:03 PM Feb 08, 2021 | Team Udayavani |

ತುಮಕೂರು: ಪ್ರತಿಯೊಬ್ಬರೂ ರಾಮನನ್ನು ತಮ್ಮ ಹೃದಯದಲ್ಲಿ ಸೇರಿಸಿಕೊಳ್ಳಬೇಕು. ಅವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಸಾಮರಸ್ಯದ ಸಮಾಜ ನಿರ್ಮಾಣವಾಗುತ್ತದೆ ಎಂದು ಹಿರಿಯ ಸಾಹಿತಿ ಜಿ.ಕೆ.ಕುಲಕರ್ಣಿ ಅಭಿಪ್ರಾಯಪಟ್ಟರು.

Advertisement

ಅಖೀಲ ಭಾರತೀಯ ಸಾಹಿತ್ಯ ಪರಿಷತ್ತು ತುಮಕೂರು ಜಿಲ್ಲಾ ಘಟಕವು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ, ಹೃದಯದಲ್ಲಿ ಶ್ರೀರಾಮಚಂದಿರ ವಿಷಯದ ಕುರಿತು ಭಾನುವಾರ ನಗರದ ಶ್ರೀ ಶಿರ್ಡಿ ಸಾಯಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳಿ: ರಾಮ ಭಾರತೀಯ ಸಂಸ್ಕೃತಿಯ ಪ್ರತಿಪಾದಕ. ಆತನಲ್ಲಿದ್ದ ಪಿತೃ ವಾತ್ಸಲ್ಯ, ಜಾತ್ಯತೀತ ಮನಸ್ಸನ್ನು ನಾವು ಅಳವಡಿಸಿ ಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಇಂಟರ್ನೆಟ್‌ ಕಾಲದಲ್ಲಿ ಸಾಹಿತ್ಯ ಯುವ ಜನ ರಿಂದ ದೂರವಾಗುತ್ತಿದೆ ಎಂಬ ಆತಂಕ ಇರುವ ಸಮಯದಲ್ಲಿ ಹೆಚ್ಚು ಯುವಕರು ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

ಯುವ ಕವಿಗಳು ವಿಸ್ತಾರ ಓದನ್ನು ರೂಢಿಸಿಕೊಳ್ಳಬೇಕು. ಕುಮಾರವ್ಯಾಸನಂತಹ ಕವಿಗಳನ್ನು ಅಭ್ಯಾಸ ಮಾಡಬೇಕು. ಆಗ ಭಾಷೆ ಬಲಿಯುತ್ತದೆ ಮತ್ತು ಚಿಂತನೆ ವಿಸ್ತಾರವಾಗುತ್ತದೆ ಎಂದು ಸಲಹೆ ನೀಡಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿದ ಶ್ರೀ ಶಿರಡಿ ಸಾಯಿ ಮಂದಿರದ ಅಧ್ಯಕ್ಷ ಬಿ. ಆರ್‌. ನಟರಾಜ ಶೆಟ್ಟಿ, ಕೋವಿಡ್‌ ಭಯದ ನಂತರ ಸಾಹಿತ್ಯಕ ಕಾರ್ಯಕ್ರಮಗಳು ಮತ್ತೆ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.

Advertisement

ಭಾಷೆ ಕುರಿತು ಎಚ್ಚರವಹಿಸಿ: ಮುಖ್ಯ ಅತಿಥಿಗಳಾಗಿ ತೊಂಡೋಟಿ ಎಲ್‌. ನರಸಿಂಹಯ್ಯ ಮಾತನಾಡಿ, ಶ್ರೀರಾಮನ ಆದರ್ಶಗಳು ವ್ಯಕ್ತಿಗಳಲ್ಲಿ ನೆಲೆಯಾಗಿ ಹೃದಯವೂ ರಾಮಮಂದಿ ರವಾಗಿ ಬದಲಾಗಬೇಕು.  ಆಗ ದೇಶ ಸುಭಿಕ್ಷವಾಗುತ್ತದೆ. ಉದಯೋನ್ಮುಖ ಕವಿಗಳು ಭಾಷೆಯ ಕುರಿತು ಹೆಚ್ಚು ಎಚ್ಚರ ವಹಿಸಬೇಕು.ಕವಿತೆಗಳಲ್ಲಿ ಮೂಡಿಸುವ ಚಿಂತನೆಗಳಷ್ಟೇ, ಕವಿಯ ಭಾಷಾಶುದ್ಧಿ, ಮಂಡನಾಶೈಲಿ ತುಂಬ ಮುಖ್ಯವಾಗುತ್ತದೆ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 30 ಕವಿಗಳು ಕವನಗಳನ್ನು ವಾಚಿಸಿದರು. ವಿದ್ಯಾರ್ಥಿನಿ ಕಾವ್ಯ ಎನ್‌. ಕಾರ್ಯಕ್ರಮ ನಿರೂಪಿಸಿದರು. ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸಿಬಂತಿ ಪದ್ಮನಾಭ ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಶ್‌ ತೀರ್ಥಪುರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next