Advertisement

ರಾಮಮಂದಿರ ನಿರ್ಮಾಣ: ಪ್ರಯಾಗ ಧರ್ಮಸಂಸದ್‌ ನಿರ್ಣಾಯಕ: ಕೇಶವ ಹೆಗಡೆ 

12:08 PM Dec 26, 2018 | |

ಉಡುಪಿ: ಪ್ರಯಾಗದಲ್ಲಿ (ಅಲಹಾಬಾದ್‌) ಜ. 31 ಮತ್ತು ಫೆ. 1ರಂದು ನಡೆಯುವ “ಧರ್ಮಸಂಸದ್‌’ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನಿರ್ಣಾಯಕವಾಗಲಿದೆ. ಕೇಂದ್ರ ಸರಕಾರ ಅಷ್ಟರೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಮಧ್ಯ ಕ್ಷೇತ್ರದ ಸಂಘಟನ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.

Advertisement

ರಾಮಮಂದಿರ ನಿರ್ಮಾಣಕ್ಕಾಗಿ ಮಂಗಳವಾರ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಕಲ್ಯಾಣ ಮಂಟಪದಲ್ಲಿ ಜರಗಿದ ಸಾಮೂಹಿಕ ರಾಮತಾರಕ ಮಂತ್ರ ಜಪ ಪಠಣ ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದಿನ ಯುಪಿಎ ಸರಕಾರದ ಹಿಂದೂ ವಿರೋಧಿ ನೀತಿ, ಭ್ರಷ್ಟಾಚಾರ, ದೇಶದ್ರೋಹಿಗಳಿಗೆ ರಕ್ಷಣೆ ಮೊದಲಾದವನ್ನು ನೋಡಿ ಬೇಸತ್ತಿದ್ದ ಜನತೆ ಹಿಂದೂ ಧರ್ಮದ ಪರ ಇರುವ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಧಿಕಾರಕ್ಕೇರಿಸಿದ್ದಾರೆ. ಆದರೆ ರಾಮಮಂದಿರ ವಿಚಾರದ ಕುರಿತು ಇನ್ನೂ ಕೂಡ ಕೇಂದ್ರ ಸರಕಾರ ನಿರ್ಣಯ ತೆಗೆದುಕೊಂಡಿಲ್ಲ. ಮುಂದಿನ ಚುನಾವಣೆ ಕೂಡ ನಿರ್ಣಾಯಕ ವಾಗಲಿದೆ. ಕೆಟ್ಟ ಪರಿಣಾಮವೂ ಬೀಳಬಹುದು ಎಂದು ಸಂತರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕಾಯಿದೆ ಅಥವಾ ಅಧ್ಯಾದೇಶವನ್ನು ತರಬೇಕು. ಮೋದಿ ಸರಕಾರ ದೇಶಕ್ಕಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. 
ಆದರೆ ರಾಮಮಂದಿರ ನಿರ್ಮಾಣ ಮಾಡದೆ ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಕೇಶವ ಹೆಗಡೆ ಹೇಳಿದರು.

ರಾಮ ವಿರೋಧಿಗಳಿಗೆ ಉತ್ತರಿಸೋಣ
ಸಾಹಿತಿ ಬ್ರಹ್ಮಶ್ರೀ ಸೂರಾಲು ದೇವಿಪ್ರಸಾದ್‌ ತಂತ್ರಿ ಅವರು ಮಾತನಾಡಿ “ಭಾರತೀಯರ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಿ ನಿರಂತರವಾಗಿ ಆಕ್ರಮಣ ನಡೆಸಲಾಗಿದೆ. ರಾಮನ ಬಗ್ಗೆಯೂ ಕೀಳಾಗಿ ಮಾತನಾಡಲಾಗುತ್ತಿದೆ. ಇಂತಹವರಿಗೆ ಸಮರ್ಪಕ ಉತ್ತರ ನೀಡುವ ಅಗತ್ಯವಿದೆ. ನಾನು ಈ ಕೆಲಸದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದು ಮುಂದೆ ಹಸ್ತಿನಾವತಿಯಿಂದ ಅಯೋಧ್ಯೆವರೆಗೆ ಪರಿಕ್ರಮ ಮಾಡಿ ಮತ್ತಷ್ಟು ಅಧ್ಯಯನ ನಡೆಸಲಿದ್ದೇನೆ. ಮುಂದೆ ಭಾರತದಲ್ಲಿ ಯಾರೂ ರಾಮನ ಚರಿತ್ರೆ ಬಗ್ಗೆ ಪ್ರಶ್ನೆ ಮಾಡಬಾರದು. ಮಾಡಿದರೂ ಅದಕ್ಕೆ ಸ್ಪಷ್ಟ ಉತ್ತರ ನೀಡುವಂತಾಗಬೇಕು. ಇದಕ್ಕೆ ಈ ಅಧ್ಯಯನವೂ ನೆರವಾಗಲಿದೆ ಎಂದು ಹೇಳಿದರು.

ತಾರಕವೆಂದರೆ ತಡೆಗಳನ್ನು ದೂರ ಮಾಡಿ “ಉದ್ಧರಿಸುವುದು’ ಎಂದರ್ಥ. ರಾಮತಾರಕ ಮಂತ್ರ ರಾಮ ಮಂದಿರಕ್ಕೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡಲಿದೆ ಎಂದು ದೇವಿಪ್ರಸಾದ್‌ ತಂತ್ರಿ ಹೇಳಿದರು. ವಿಹಿಂಪ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಮಣಿಯಾನಿ ಪ್ರಸ್ತಾವನೆಗೈದರು. ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಬಜರಂಗದಳ ಪ್ರಾಂತ ಸಂಚಾಲಕ ದಿನೇಶ್‌ ಮೆಂಡನ್‌ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ ಸ್ವಾಗತಿಸಿದರು. ಜಯಪ್ರಕಾಶ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಅಯೋಧ್ಯೆಯಲ್ಲಿಯೇ ಆಗಬೇಕು
ರಾಮ ಹುಟ್ಟಿದ ಸ್ಥಳ ಅಯೋಧ್ಯೆ. ಹಾಗಾಗಿ ಅಲ್ಲಿಯೇ ಭವ್ಯ ರಾಮಮಂದಿರ ನಿರ್ಮಾಣವಾಗ ಬೇಕೇ ಹೊರತು ಬೇರೆಡೆ ಬೇಡ. ಸೋನಿಯಾ ಗಾಂಧಿಯವರ ಜನ್ಮಸ್ಥಳ ಇಟೆಲಿ ಇರುವುದನ್ನು ಹೇಗೆ ಬದಲಾಯಿಸಲಾಗದೋ ಅಂತೆಯೇ ರಾಮನ ಜನ್ಮಸ್ಥಳವನ್ನು ಕೂಡ ಬದಲಿಸಲಾಗದು ಎಂದು ಕೇಶವ ಹೆಗಡೆ ಹೇಳಿದರು. ರಾಮಮಂದಿರದ ಅನಂತರ ಮಥುರೆಯಲ್ಲಿ ಕೃಷ್ಣನಿಗೆ, ಕಾಶಿಯಲ್ಲಿ ವಿಶ್ವನಾಥನಿಗೆ ಮಂದಿರ ನಿರ್ಮಾಣ ವಾಗಬೇಕಿದೆ. ಅಲ್ಲಿಯವರೆಗೆ ಹಿಂದೂ ಜಾಗೃತಿ ಅಭಿಯಾನ ಮುಂದುವರಿ ಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next