Advertisement

ಪ್ರಾಚೀನ ನಾಣ್ಯಗಳ ಅರಿವು ಮೂಡಿಸುವ ರಾಮರಾವ್‌

09:50 PM Dec 15, 2019 | Lakshmi GovindaRaj |

ಚನ್ನರಾಯಪಟ್ಟಣ: ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಕೊಂಡಿರುವ ನಿವೃತ್ತ ಮೆಕ್ಯಾನಿಕಲ್‌ ಎಂಜಿನಿಯರ್‌ ರಾಮರಾವ್‌ ದೇಶದ ಎಲ್ಲಾ ರಾಜ್ಯಗಳ ಸಂಚಾರ ಮಾಡಿ ಅಲ್ಲಿ ದೊರೆಯುವ ಹಳೆ ನಾಣ್ಯ ಹಾಗೂ ಅಂಚೆ ಚೀಟಿ ಸಂಗ್ರಹಿಸಿ ಉಚಿತವಾಗಿ ಶಾಲಾ ಕಾಲೇಜುಗಳಲ್ಲಿ ಕಳೆದ 22 ವರ್ಷದಿಂದ ಪ್ರದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.

Advertisement

ಭಾರತ ದರ್ಶನ: ಬೆಂಗಳೂರಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಸೇವೆ ಸಲ್ಲಿಸುತ್ತಿದ್ದು, ಸೇವೆ ವೇಳೆ ಕಾರ್ಯನಿಮಿತ್ತ ದೇಶದ ನಾನಾ ರಾಜ್ಯಗಳಿಗೆ ತೆರಳಿದ್ದ ವೇಳೆ ಅಲ್ಲಿ ಕೆಲಸ ಮುಗಿಸಿದ ನಂತರ ಸಮಯ ವ್ಯರ್ಥ ಮಾಡದೇ ಆ ರಾಜ್ಯದ ಇತಿಹಾಸ ತಿಳಿಯುವುದು ಅಲ್ಲಿನ ಪುರಾತನ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಿಸುವುದನ್ನು ಮೈಗೂಡಿಸಿಕೊಂಡಿದ್ದರು. ಹೀಗೆ ಸಂಗ್ರಹಿಸಿದ ಪುರಾತನ ನಾಣ್ಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ನಿವೃತ್ತರಾದ ಬಳಿಕ ಭಾರತ ದರ್ಶನ ಎಂಬ ಶೀರ್ಷಿಕೆ ಇಟ್ಟುಕೊಂಡು ರಾಜ್ಯ ಸಂಚಾರ ಮಾಡುತ್ತಿದ್ದಾರೆ.

ಯಾವ್ಯಾವ ಜಿಲ್ಲೆಯಲ್ಲಿ ಸಂಚಾರ: ಮೈಸೂರು, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಇರುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರದರ್ಶನ ಮಾಡಿ ಅಲ್ಲಿನ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಇದಲ್ಲದೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅಂಗಡಿ ತೆರೆದು ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೂ ದೇಶದ ಪುರಾತನ ನಾಣ್ಯಗಳ ಮಾಹಿತಿ ನೀಡುತ್ತಿದ್ದಾರೆ.

82ರ ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ: ಕೆಲಸ ಮಾಡುವ ವೇಳೆಯಲ್ಲಿ ಮಧ್ಯಪ್ರದೇಶ ರಾಜಸ್ಥಾನ ಗುಜರಾತ್‌, ಮಹಾರಾಷ್ಟ್ರ, ಪಂಜಾಬ್‌, ಉತ್ತರಪ್ರದೇಶ, ನಾಗಾಲ್ಯಾಂಡ್‌, ಮಧ್ಯಪ್ರದೇಶಗಳಿಂದ ಪುರಾತನ ನಾಣ್ಯಗಳ ಸಂಗ್ರಹಿಸಿ, ಕೆಲಸದಿಂದ ನಿವೃತ್ತ ಹೊಂದಿ 22 ವರ್ಷಗಳು ಕಳೆದಿವೆ 82ರ ಇಳಿ ವಯಸ್ಸಿನಲ್ಲೂ ಭಾರತ ದರ್ಶನ ಮಾಡುತ್ತಿರುವ ಇವರು ನೂರಾರು ತಾಲೂಕು ಕೇಂದ್ರಗಳಲ್ಲಿ ಸಂಚಾರ ಮಾಡಿ ಭಾರತ ಇತಿಹಾಸವನ್ನು ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ.

ಲಕ್ಷಾಂತ ರೂ ವೆಚ್ಚ: ಕಳೆದ ಐವತ್ತು ವರ್ಷದಿಂದ ನಾಣ್ಯ ಸಂಗ್ರಹಕ್ಕೆ ಲಕ್ಷಾಂತ ರೂ. ವೆಚ್ಚ ಮಾಡಿರುವುದಲ್ಲದೇ ಸಂಗ್ರಹವಾಗಿರುವ ಪುರಾತನ ಪ್ರತಿ ನಾಣ್ಯದ ಮಾಹಿತಿಯನ್ನು ಉತ್ತಮವಾಗಿ ಬರೆದು ಶೀಟ್‌ನಲ್ಲಿ ಹಾಕಿದ್ದಾರೆ. ಯಾವರ ಅರಸರ ಕಾಲದಲ್ಲಿ ನಾಣ್ಯ ಚಲಾವಣೆಯಲ್ಲಿ ಇತ್ತು ಇದನ್ನು ಹೇಗೆ ತಯಾರು ಮಾಡಿದ್ದಾರೆ ಎಂಬ ಮಾಹಿತಿ ನೋಡುಗರಿಗೆ ಲಭ್ಯವಾಗಲಿದೆ.

Advertisement

ಪುರಾತನ ನಾಣ್ಯಗಳು: ಅಲ್ಯುಮಿನಿಯಮ್‌, ಸೀಸ, ಮಿಶ್ರಲೋಹ, ಚಿನ್ನ, ತಾಮ್ರ, ಬೆಳ್ಳಿ, ಪಂಚಲೋಹದಿಂದ ತಯಾರಾಗಿರುವ ಅಪರೂಪದ ನಾಣ್ಯಗಳನ್ನು ನೋಡಬಹುದು. ಕ್ರಿ.ಪೂ.2,500 ಕಾಲದ ನಾಣ್ಯಗಳು, ಕ್ರಿ.ಶ. 200ರ ಕಾಲದವರು, ಚಂದ್ರಗುಪ್ತ ಮೌರ್ಯ, 12ನೇ ಶತಮಾನದ ಹೊಯ್ಸಳ, 13ನೇ ಶತಮಾನದ ವಿಕ್ರಮಾದಿತ್ಯ, ದೇವಗಿರಿ, ದೆಹಲಿ ಸುಲ್ತಾನ, 14ರಿಂದ 16ನೇ ಶತಮಾನದ ಬಹಮನಿ ಸುಲ್ತಾನ, ಕ್ರಿ.ಶ. 1798 ರಿಂದ 1810ರ ಟಿಪ್ಪು ಸುಲ್ತಾನ, ಮೊಗಲ್‌ ಸಾಮ್ರಾಜ್ಯ, ಹಂಪಿ ವಿಜಯನಗರ ಸಾಮ್ರಾಜ್ಯ, ಬಾದಾಮಿ ಚಾಲಕ್ಯರು, ಕುಶಾನರು, ಬ್ರಿಟಿಷರ ಕಾಲದ ನಾಣ್ಯ ಸೇರಿದಂತೆ ಆಧುನಿಕ ಭಾರತದಲ್ಲಿ ಚಲಾವಣೆಯಲ್ಲಿ ಇರುವ ನಾಣ್ಯಗಳು ಹಾಗೂ ನೋಡುಗಳು ಒಂದೇ ಸೂರಿನಡಿ ನೋಡಬಹುದಾಗಿದೆ.

ಮುಸ್ಲಿಂಮರು ಗ್ರಾಮೀಣ ಪ್ರದೇಗಳಲ್ಲಿ ಹಳೆ ವಸ್ತುಗಳನ್ನು ಖರೀದಿಸುವಾಗ ಚಲಾವಣೆಯಲ್ಲಿ ಇಲ್ಲದ ನಾಣ್ಯಗಳನ್ನು ಕೇಜಿ ಲೆಕ್ಕದಲ್ಲಿ ತಂದು ಪ್ರವಾಸಿ ತಾಣಗಳಲ್ಲಿ ಒಂದೊಂದು ನಾಣ್ಯಕ್ಕೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಅಲ್ಲಿಂದ ಖರೀದಿಸಿದ ನಾಣ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ರಾಮರಾವ್‌ ಉದಯವಾಣಿಗೆ ತಿಳಿಸಿದ್ದಾರೆ.

ಸಂಭಾವನೆ ಪಡೆಯಲ್ಲ: ಲಕ್ಷಾಂತರ ವೆಚ್ಚ ಮಾಡಿ ಸಂಗ್ರಹಿಸಿರುವ ಐತಿಹಾಸಿ ನಾಣ್ಯಗಳನ್ನು ಪ್ರದರ್ಶ ಮಾಡಲು ಯಾವುದೇ ಸಂಭಾವನೆ ಪಡೆಯುವುದಿಲ್ಲ, ಉಚಿತವಾಗಿ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾರೆ. ಪ್ರತಿ ಶಾಲೆ ಕಾಲೇಜಿನಲ್ಲಿ ಪ್ರದರ್ಶನ ಪಡೆಯುವ ಬದಲಾಗಿ ತಾಲೂಕಿನಲ್ಲಿ ಎಲ್ಲಾ ಶಾಲೆ ಕಾಲೇಜಿನವರು ಒಟ್ಟಿಗೆ ಸೇರಿ ಸ್ಥಳವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಆಸಕ್ತರು ರಾಮರಾವ್‌ ಮೊ.9448842083ಗೆ ಕರೆ ಮಾಡಬಹುದಾಗಿದೆ.

ರಾಜ್ಯಾದ್ಯಂತ ನಾಣ್ಯ ಪ್ರದರ್ಶನಕ್ಕೆ ನಮ್ಮ ಕುಟುಂಬದವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಪ್ರದರ್ಶನ ಮಾಡಿ ಈ ನೆಲೆದ ಇತಿಹಾಸ ತಿಳಿಸುವ ಉದ್ದೇಶ ನನ್ನದಾಗಿದೆ.
-ರಾಮರಾವ್‌, ಭಾರತ ದರ್ಶನದ ರೂವಾರಿ

ರಾಮರಾವ್‌ ಅವರು ಏರ್ಪಡಿಸಿದ್ದ ಐತಿಹಾಸಿಕ ನಾಣ್ಯ ಪ್ರದರ್ಶನದಿಂದ ಶಾಲಾ ವಿದ್ಯಾರ್ಥಿಗಳಿಗೆ ಪ್ರಾಚೀನ ನಾಣ್ಯಗಳ ಬಗ್ಗೆ ಸಮಗ್ರ ಮಾಹಿತಿ ದೊರೆತಿದೆ. ಇಂತಹಾ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲೂ ನಡೆಯಬೇಕು.
-ಕೆ.ಪಿ. ಲಕ್ಷ್ಮೀ. ಎಸ್‌ ಸುಂದರ್‌, ಚನ್ನರಾಯಪಟ್ಟಣ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next